
ಕೋಲಾರ: ಕೋಮುಲ್ ಸಭೆಯಲ್ಲಿ ಕೋಲಾರ ಜಿಲ್ಲೆಯ ಹಾಲು ಒಕ್ಕೂಟದ ಪರವಾಗಿ ಕೆಎಂಎಫ್ ಪ್ರತಿನಿಧಿಯನ್ನಾಗಿ ನಂಜೇಗೌಡರನ್ನು ಕಳಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ, ಒಕ್ಕೂಟದ ನಿರ್ದೇಶಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕೂಡ ಕೆಎಂಎಫ್ ನಿರ್ದೇಶಕ ಸ್ಥಾನದ ಆಕಾಂಕ್ಷಿ ಆಗಿದ್ದೆ. ಈ ಬಗ್ಗೆ ಮನವಿ ಕೂಡ ಮಾಡಿದ್ದೆ. ಆದರೆ, ಆಡಳಿತ ಮಂಡಳಿ ಸಭೆಯಲ್ಲಿ ನಾನು ಸೇರಿದಂತೆ ಎಲ್ಲಾ ನಿರ್ದೇಶಕರ ಸರ್ವಸಮ್ಮತದಿಂದ ನಂಜೇಗೌಡರನ್ನು ಆಯ್ಕೆ ಮಾಡಿದ್ದೇವೆ’ ಎಂದರು.
ಈ ಮೊದಲು ಏನಾದರೂ ಒಪ್ಪಂದ ಆಗಿತ್ತೇ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್‌ನಲ್ಲಿ ಯಾವುದೇ ರೀತಿ ಒಪ್ಪಂದ ನಡೆಯಲ್ಲ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ಸಚಿವ ಸ್ಥಾನ ಸಂಬಂಧ ಅವಕಾಶ ಕೇಳಿರುವುದು ನಿಜ. ನನ್ನ ಗುರು ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ರಮೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ರಮೇಶ್ ಕುಮಾರ್ ಬಳಿಕ ಜಿಲ್ಲೆಯವರು ಸಚಿವರಾಗಿಲ್ಲ. ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ’ ಎಂದು ಹೇಳಿದರು.
ನಂಜೇಗೌಡ ವಿಚಾರದಲ್ಲಿ ಮೃದು ಧೋರಣೆ ತೆಗೆದುಕೊಂಡಿದ್ದೀರಾ ಎಂಬ ಪ್ರಶ್ನೆಗೆ, ‘ನಾವೆಲ್ಲಾ ಒಂದೇ ಪಕ್ಷದವರು. ಆದರೆ, ಯಾವುದೇ ರೀತಿಯ ಅಕ್ರಮ ನಡೆದರೆ ನಾರಾಯಣಸ್ವಾಮಿ ಸುಮ್ಮನಿರುವುದಿಲ್ಲ. ಪಕ್ಷದ ವಿಚಾರ ಬಂದಾಗ ಹಿರಿಯ ಮಾತು ಕೇಳುತ್ತೇನೆ’ ಎಂದರು.
ರಾಜ್ಯದಲ್ಲಿ ಯಾವುದೇ ಕ್ರಾಂತಿ ನಡೆಯಲ್ಲ. ಈ ಮಾತನ್ನು ಯಾರೂ ಹೇಳಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿ ಹಸ್ತಾಂತರ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿಸಿದರು.
ಬಿಹಾರದಲ್ಲಿ ಚುನಾವಣೆಗೆ ಮುನ್ನ ಅಲ್ಲಿನ ಸರ್ಕಾರದವರು ಮಹಿಳೆಯರ ಖಾತೆಗೆ ತಲಾ ₹ 10 ಸಾವಿರ ಹಾಕಿದ್ದು, ಮತಕಳ್ಳತನ ವಿಚಾರ ಸೇರಿದಂತೆ ವಿವಿಧ ಕಾರಣಗಳಿಂದ ಎನ್‌ಡಿಎ ಮೈತ್ರಿಕೂಟದವರು ಗೆದ್ದಿದ್ದಾರೆ. ಆದರೆ, ಆ ಚುನಾವಣೆ ಫಲಿತಾಂಶದಿಂದ ನಾವು ಎದೆಗುಂದಿಲ್ಲ. ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಸರ್ಕಾರ ರಚನೆ ಮಾಡಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ನಾವೇ ಅಧಿಕಾರ ಹಿಡಿಯುತ್ತೇವೆ. 2029ರ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆಎಸ್.ಎನ್.ನಾರಾಯಣಸ್ವಾಮಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.