ಕೋಲಾರ: ಆರೋಗ್ಯ ಇಲಾಖೆಯ ಕಾಯಕಲ್ಪ ಕಾರ್ಯಕ್ರಮದಡಿ ಸರ್ಕಾರದಿಂದ ರಚನೆಯಾಗಿರುವ ರಾಜ್ಯ ಗುಣಮಟ್ಟ ಖಾತ್ರಿ ಘಟಕದ ಅಧಿಕಾರಿಗಳ ತಂಡವು ಇಲ್ಲಿನ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ಮಾಡಿತು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮತ್ತು ವೈದ್ಯಕೀಯ ಸೇವೆಯ ಗುಣಮಟ್ಟದ ಪರಿಶೀಲನೆಗಾಗಿ ಸರ್ಕಾರ 27 ತಂಡ ರಚಿಸಿದ್ದು, ಪ್ರತಿ ತಂಡದಲ್ಲಿ ಇಬ್ಬರು ಅಧಿಕಾರಿಗಳಿದ್ದಾರೆ. ಈ ತಂಡದ ಸದಸ್ಯರು ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಖುದ್ದು ಪರಿಶೀಲನೆ ನಡೆಸಿ ಗುಣಮಟ್ಟ ಖಾತ್ರಿಪಡಿಸಿಕೊಳ್ಳುವುದರ ಜತೆಗೆ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡುತ್ತಾರೆ.
ಅಲ್ಲದೇ, ಆಸ್ಪತ್ರೆಗಳ ವೈದ್ಯಕೀಯ ಸೇವೆಯ ಗುಣಮಟ್ಟ ಆಧರಿಸಿ ಅಂಕ ನೀಡುತ್ತಾರೆ. ಈ ಅಂಕಗಳ ಆಧಾರದ ಮೇಲೆ ಸರ್ಕಾರವು ಆಸ್ಪತ್ರೆಗಳಿಗೆ ಕಾಯಕಲ್ಪ ಪ್ರಶಸ್ತಿ ನೀಡುತ್ತದೆ.
ಘಟಕದ ರಾಜ್ಯ ತಾಂತ್ರಿಕ ಸಲಹೆಗಾರ ಡಾ.ವಿ.ರಾಜು ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಂಗನಾಥ್ ಅವರ ನೇತೃತ್ವದ ತಂಡವು ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿನ ಎಂಆರ್‌ಐ ಸ್ಕ್ಯಾನ್, ಸಿ.ಟಿ ಸ್ಕ್ಯಾನ್, ತೀವ್ರ ನಿಗಾ ಘಟಕ, ಮಕ್ಕಳ ವಿಭಾಗ ಸೇರಿದಂತೆ ಆರೋಗ್ಯ ಸೇವೆಗಳ ಮಾಹಿತಿ ಪಡೆಯಿತು. ಆಸ್ಪತ್ರೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯು ಪ್ರಾತ್ಯಕ್ಷಿಕೆ ಮೂಲಕ ತಂಡದ ಸದಸ್ಯರಿಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಮಾಹಿತಿ ಆಧರಿಸಿ ಅಧಿಕಾರಿಗಳು ಆಸ್ಪತ್ರೆಯಲ್ಲಿನ ವೈದ್ಯಕೀಯ ಸೇವೆಯ ನೈಜತೆ ಪರಿಶೀಲಿಸಿದರು. ಆಸ್ಪತ್ರೆ ಆವರಣ ಸ್ವಚ್ಛತೆ, ವಾರ್ಡ್ ಹಾಗೂ ವಿವಿಧ ವಿಭಾಗಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ವೀಕ್ಷಿಸಿದ ಅಧಿಕಾರಿಗಳು ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು 3 ವಿಭಾಗವಾಗಿ ವಿಂಗಡಿಸಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಅಸಮಾಧಾನ: ತ್ಯಾಜ್ಯ ವಿಲೇವಾರಿ ಘಟಕದ ದಾಖಲಾತಿ ಪುಸ್ತಕದಲ್ಲಿ ಸುಳ್ಳು ಮಾಹಿತಿ ದಾಖಲಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ತಂಡದ ಸದಸ್ಯರು ಪ್ರತಿದಿನದ ತ್ಯಾಜ್ಯದ ತೂಕದ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು. ಕ್ಷಿಪ್ರ ಮಧ್ಯಸ್ಥಿಕೆ ಕೇಂದ್ರದಲ್ಲಿನ ಸೌಲಭ್ಯಕ್ಕೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಪತ್ರೆ ಆವರಣದಲ್ಲಿ ಔಷಧೀಯ ಗಿಡಗಳನ್ನು ಬೆಳೆಸಿರುವ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರು ತಂಡಕ್ಕೆ ಮಾಹಿತಿ ನೀಡಿದರು.
‘ಆಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಆದರೆ, ಕಾರಣಾಂತರದಿಂದ ಕ್ಯಾಂಟೀನ್ ನಿರ್ಮಾಣ ಸಾಧ್ಯವಾಗಿಲ್ಲ. ರೋಗಿಗಳಿಗೆ ಸದ್ಯದಲ್ಲೇ ರಿಯಾಯಿತಿ ದರದಲ್ಲಿ ಆಹಾರ ನೀಡಲಾಗುತ್ತದೆ. ಪುಟ್ಟಪರ್ತಿ ಸಾಯಿಬಾಬಾ ಸಂಸ್ಥೆ ವತಿಯಿಂದ ಉಚಿತ ಊಟದ ವ್ಯವಸ್ಥೆ ಕಲ್ಪಿಸುವ ಸಂಬಂಧ ಚರ್ಚೆ ನಡೆದಿದೆ. ಇದು ಸಾಧ್ಯವಾದಲ್ಲಿ ಬಡವರಿಗೆ ಅನುಕೂಲವಾಗುತ್ತದೆ’ ಎಂದು ವೈದ್ಯರು ವಿವರಿಸಿದರು.
ಅಧಿಕಾರಿಗಳು ಆಸ್ಪತ್ರೆಯಲ್ಲಿನ ಹೆರಿಗೆ ವಾರ್ಡ್, ತಾಯಿ ಮತ್ತು ಮಕ್ಕಳ ವಿಭಾಗ, ಪ್ರಯೋಗಾಲಯ, ಔಷಧ ವಿತರಣಾ ಘಟಕ, ಶಸ್ತ್ರಚಿಕಿತ್ಸೆ ಕೊಠಡಿ, ಹೋರ ರೋಗಿಗಳು ಹಾಗೂ ಒಳ ರೋಗಿಗಳ ವಾರ್ಡ್ ಸೇರಿದಂತೆ ಎಲ್ಲಾ ವಿಭಾಗಗಳಿಗೂ ತೆರಳಿ ಸ್ವಚ್ಛತೆ, ವೈದ್ಯಕೀಯ ಸೇವೆಯ ಗುಣಮಟ್ಟ ಪರಿಶೀಲಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ಆಸ್ಪತ್ರೆ ವೈದ್ಯರಾದ ಡಾ.ಪುಷ್ಪಲತಾ, ಡಾ.ಹೇಮಾ ಭಾಸ್ಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.