ADVERTISEMENT

ಜನಸೇವೆಗೆ ಧರ್ಮದ ಭೇದವಿಲ್ಲ: ಕೆಜಿಎಫ್ ಬಾಬು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 13:54 IST
Last Updated 20 ಏಪ್ರಿಲ್ 2022, 13:54 IST
ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಕೆಜಿಎಫ್ ಬಾಬು ಕೋಲಾರದ ರಹಮತ್‌ನಗರದಲ್ಲಿ ಬುಧವಾರ ರಂಜಾನ್‌ ಪ್ರಯುಕ್ತ ಜನರಿಗೆ ಹಣಕಾಸು ನೆರವಿನ ಚೆಕ್‌ ವಿತರಿಸಿದರು
ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಕೆಜಿಎಫ್ ಬಾಬು ಕೋಲಾರದ ರಹಮತ್‌ನಗರದಲ್ಲಿ ಬುಧವಾರ ರಂಜಾನ್‌ ಪ್ರಯುಕ್ತ ಜನರಿಗೆ ಹಣಕಾಸು ನೆರವಿನ ಚೆಕ್‌ ವಿತರಿಸಿದರು   

ಕೋಲಾರ: ‘ಹಿಂದೂ ಮತ್ತು ಮುಸ್ಲಿಂ ಎಂಬ ಭೇದ ಭಾವವಿಲ್ಲದೆ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರಿಗೆ ಆರ್ಥಿಕ ನೆರವು ನೀಡುತ್ತಿದ್ದೇನೆ’ ಎಂದು ಉಮ್ರಾ ಚಾರಿಟಬಲ್‌ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಕೆಜಿಎಫ್ ಬಾಬು ಹೇಳಿದರು.

ರಂಜಾನ್‌ ಹಿನ್ನೆಲೆಯಲ್ಲಿ ಇಲ್ಲಿ ಬುಧವಾರ ರಹಮತ್‌ನಗರ ನಿವಾಸಿಗಳಿಗೆ ಟ್ರಸ್ಟ್‌ ವತಿಯಿಂದ ಹಣಕಾಸು ನೆರವಿನ ಚೆಕ್‌ ವಿತರಿಸಿ ಮಾತನಾಡಿ, ‘ಕ್ಷೇತ್ರದ ಶಾಲಾ ಕಾಲೇಜುಗಳಿಗೆ ಖುದ್ದು ಭೇಟಿ ಕೊಟ್ಟು ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಣಕಾಸು ನೆರವು ನೀಡುತ್ತಿದೆ. ಆದರೆ, ಶಾಲಾ ಕಾಲೇಜು ಸಿಬ್ಬಂದಿ ಈ ಕಾರ್ಯಕ್ಕೆ ಸಹಕರಿಸದ ಕಾರಣ ಜನರ ಮನೆ ಮನೆಗೆ ಹೋಗಿ ಆರ್ಥಿಕ ಸಹಾಯ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

‘ರಾಜಕೀಯ ಉದ್ದೇಶಕ್ಕಾಗಿ ಜನರಿಗೆ ಹಣ ಕೊಡುತ್ತಿಲ್ಲ. ಸೇವಾ ಮನೋಭಾವದಿಂದ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ. ಒಂದು ದಿನ ಜನರ ಸೇವೆ ಮಾಡಿ ಸುಮ್ಮನಾಗುವ ವ್ಯಕ್ತಿ ನಾನಲ್ಲ. ನನ್ನ ಕೊನೆಯ ಉಸಿರಿರುವವರೆಗೆ ಜನ ಸೇವೆ ಮಾಡುತ್ತೇನೆ. ಯಾವುದೇ ಜಾತಿ, ಮತಕ್ಕೆ ಸೀಮಿತವಾಗದೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

‘ಬಡ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕ್ಷೇತ್ರದ 50 ಸಾವಿರ ಮನೆಗಳಿಗೆ ತಲಾ ₹ 5 ಸಾವಿರ ಕೊಡಲು ವರ್ಷಕ್ಕೆ ₹ 25 ಕೋಟಿ ಮೀಸಲಿಟ್ಟಿದ್ದೇನೆ. ರಂಜಾನ್‌ ಪ್ರಯುಕ್ತ ಕೋಲಾರ ನಗರಸಭೆ ವ್ಯಾಪ್ತಿಯ 13 ಸಾವಿರ ಮನೆಗಳಿಗೆ ತಲಾ ₹ 2 ಹಣಕಾಸು ನೆರವು ನೀಡುತ್ತಿದ್ದೇನೆ. ದೀಪಾವಳಿ ಸಂದರ್ಭದಲ್ಲಿ ಹಿಂದೂಗಳ ಮನೆಗಳಿಗೆ ಹಾಗೂ ಕ್ರಿಸ್‌ಮಸ್‌ ಸಂದರ್ಭದಲ್ಲಿ ಕ್ರೈಸ್ತರ ಮನೆಗಳಿಗೆ ಹಣಕಾಸು ನೆರವು ನೀಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.