ADVERTISEMENT

ಮಣ್ಣಿನ ಆರೋಗ್ಯ ಕಾಪಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:15 IST
Last Updated 6 ಡಿಸೆಂಬರ್ 2025, 6:15 IST
ಬಂಗಾರಪೇಟೆಯ ಕಾಮಸಮುದ್ರ ಹೋಬಳಿಯ ಅರಿಮಾನಹಳ್ಳಿ ಗ್ರಾಮದಲ್ಲಿ ವಿಶ್ವ ಮಣ್ಣಿನ ದಿನಾಚರಣೆಯನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಭಾ ಉದ್ಘಾಟಿಸಿದರು.
ಬಂಗಾರಪೇಟೆಯ ಕಾಮಸಮುದ್ರ ಹೋಬಳಿಯ ಅರಿಮಾನಹಳ್ಳಿ ಗ್ರಾಮದಲ್ಲಿ ವಿಶ್ವ ಮಣ್ಣಿನ ದಿನಾಚರಣೆಯನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಭಾ ಉದ್ಘಾಟಿಸಿದರು.   

ಬಂಗಾರಪೇಟೆ: ಮಣ್ಣಿನ ಆರೋಗ್ಯ ಕ್ಷೀಣಿಸಲು ಅವೈಜ್ಞಾನಿಕ ಬೇಸಾಯ ಪದ್ಧತಿ ಪ್ರಮುಖ ಕಾರಣ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಭಾ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಅರಿಮಾನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ವಿಶ್ವ ಮಣ್ಣು ದಿನಾಚರಣೆಯಲ್ಲಿ ಮಾತನಾಡಿದರು. ಅಗತ್ಯಕ್ಕಿಂತ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಮಣ್ಣಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ರೈತರು ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣು ಆರೋಗ್ಯ ಚೀಟಿ ಪಡೆಯಬೇಕು. ಇದಕ್ಕೆ ಅನುಗುಣವಾಗಿ ರಾಸಾಯನಿಕ ಪೋಷಕಾಂಶ ನಿರ್ವಹಣೆ ಮಾಡಿದರೆ ಹೆಚ್ಚು ಇಳುವರಿ ಪಡೆಯಬಹುದು. ಜತೆಗೆ ಮಣ್ಣಿನ ಆರೋಗ್ಯ ಕೂಡ ರಕ್ಷಿಸಬಹುದು ಎಂದು ಸಲಹೆ ನೀಡಿದರು.

ರೈತರು ಆಧುನಿಕ ತಂತ್ರಜ್ಞಾನ ಬಳಸಿ ಬೇಸಾಯ ಮಾಡಬೇಕು. ಮಣ್ಣಿನ ಪರೀಕ್ಷೆಯು ಬೆಳೆ ಬೆಳೆಯಲು ತುಂಬಾ ಉಪಯುಕ್ತ ಎಂದು ಹೇಳಿದರು.

ADVERTISEMENT

ಸಹಾಯಕ ಕೃಷಿ ಅಧಿಕಾರಿ ಬಿ.ವಿ. ವಿಜಯ ಕುಮಾರ ಮಾತನಾಡಿ, ಪ್ರಸ್ತುತ ವಿವಿಧ ಮಾಲಿನ್ಯದಿಂದಾಗಿ ಮಣ್ಣು ಕಲುಷಿತಗೊಳ್ಳುತ್ತಿದೆ. ಅದರ ಪೋಷಕಾಂಶ ಮಟ್ಟ ಕಡಿಯಾಗುತ್ತಿದೆ. ಆದ್ದರಿಂದ ಮಣ್ಣಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಮಣ್ಣಿನ ದಿನವನ್ನ ಆಚರಿಸಲಾಗುತ್ತದೆ ಎಂದರು.

ಈ ವರ್ಷದ ವಿಶ್ವ ಮಣ್ಣಿನ ದಿನದ ವಿಷಯ ‘ಮಣ್ಣಿನ ಆರೈಕೆ, ಅಳತೆ, ಮೇಲ್ವಿಚಾರಣೆ ಮತ್ತು ನಿರ್ವಹಣೆ’. ಮಣ್ಣಿನ ನಿರ್ವಹಣೆಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಮೂಲಕ, ಮಣ್ಣಿನ ಅರಿವನ್ನು ಹೆಚ್ಚಿಸುವ ಮತ್ತು ಮಣ್ಣಿನ ಸತ್ವವನ್ನು ಸುಧಾರಿಸುವ ಕ್ರಮಗಳನ್ನು ಉತ್ತೇಜಿಸುವ ಮೂಲಕ ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಜಾಗೃತಿ ಮೂಡಿಸುವುದು ಈ ವಿಶ್ವ ಮಣ್ಣು ದಿನಾಚರಣೆಯ ಗುರಿಯಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ನಾರಾಯಣರೆಡ್ಡಿ ಮಾತನಾಡಿ, ಮಣ್ಣು ಪರೀಕ್ಷೆ ಎಂದರೆ ಮಣ್ಣಿನ ಮಾದರಿಯ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಆ ಮಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು. ಸಕಲ ಜೀವರಾಶಿಯನ್ನು ಹೊತ್ತಿರುವ ಭೂಮಿಯು ಸಸ್ಯಗಳಿಗೆ ಆಧಾರ ಕೊಡುವುದರ ಜೊತೆಗೆ, ಅವುಗಳ ಬೆಳವಣಿಗೆಗೆ ಅವಶ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ. ಮಣ್ಣಿನ ವೈಜ್ಞಾನಿಕ ಪರೀಕ್ಷೆಯಿಂದ ಮಣ್ಣಿನ ಆರೋಗ್ಯ, ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಎಲ್ಲವನ್ನೂ ತಿಳಿದುಕೊಳ್ಳಬಹುದು. ಮಣ್ಣು ಪರೀಕ್ಷೆ ಮಾಡದೆ ರಸಗೊಬ್ಬರಗಳನ್ನು ಹಾಕಿದರೆ ಮಣ್ಣಿನ ಆರೋಗ್ಯ ಹಾಳಾಗುವುದಲ್ಲದೆ ಬೆಳೆಗಳ ಬೆಳವಣಿಗೆ ಮತ್ತು ಉತ್ಪಾದನೆ ಕುಂಠಿತವಾಗುತ್ತದೆ. ಆದ್ದರಿಂದ ಯಾವುದೇ ಬೆಳೆಯನ್ನು ಬೆಳೆಯುವುದಕ್ಕೆ ಮುನ್ನ ಮಣ್ಣು ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ, ದೇವರಾಜ, ನಾರಾಯಣಪ್ಪ, ಗೋವಿಂದಪ್ಪ, ಶಿವ ಕುಮಾರ, ಸುಬ್ರಮಣಿ, ಶ್ರೀನಿವಾಸ, ವೆಂಕಟೇಶಪ್ಪ, ನಾಗರಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.