ADVERTISEMENT

ಎಪಿಎಂಸಿ ಜಾಗದ ಸಮಸ್ಯೆಗೆ ಪರಿಹಾರ: ಉಸ್ತುವಾರಿ ಸಚಿವ ಲಿಂಬಾವಳಿ ಭರವಸೆ

ಸಂಸದರು–ಶಾಸಕರ ಜತೆ ಸಭೆ

​ಪ್ರಜಾವಾಣಿ ವಾರ್ತೆ
Published 25 ಮೇ 2021, 15:22 IST
Last Updated 25 ಮೇ 2021, 15:22 IST
ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಕೋಲಾರ ಎಪಿಎಂಸಿಯಲ್ಲಿ ಮಂಗಳವಾರ ಸಭೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಕೋಲಾರ ಎಪಿಎಂಸಿಯಲ್ಲಿ ಮಂಗಳವಾರ ಸಭೆ ನಡೆಸಿದರು.   

ಕೋಲಾರ: ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಕೋವಿಡ್- ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಮಾರ್ಗಸೂಚಿ ನಿರ್ಲಕ್ಷಿಸಿದರೆ ಕೊರೊನಾ ಸೋಂಕು ಹರಡುವಿಕೆ ಹೆಚ್ಚುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರದ ಎಪಿಎಂಸಿಯಲ್ಲಿ ಮಂಗಳವಾರ ಪರಿಶೀಲನೆ ಮಾಡಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ‘ಮಾರುಕಟ್ಟೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ನಿಗಾ ವಹಿಸಲು 15 ಮಂದಿ ಸ್ವಯಂ ಸೇವಕರನ್ನು ನಿಯೋಜಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಎಪಿಎಂಸಿಯಲ್ಲಿ ಜಾಗದ ಸಮಸ್ಯೆಯಿದ್ದು, ಇದರ ಪರಿಹಾರಕ್ಕೆ 15 ದಿನದೊಳಗೆ ಸಂಸದರು, ಶಾಸಕರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಎಪಿಎಂಸಿಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಮಂಡಿ ಮಾಲೀಕರು, ವರ್ತಕರು ಹಾಗೂ ರೈತರು ಅಂತರ ಕಾಯ್ದುಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಮಂಡಿ ಮಾಲೀಕರು ಹಮಾಲರಿಗೆ ಕೈಗವಸು, ಮಾಸ್ಕ್‌ ಸೇರಿದಂತೆ ಸುರಕ್ಷತಾ ಸಲಕರಣೆಗಳನ್ನು ನೀಡಬೇಕು. ಮಂಡಿಗಳ ಬಳಿ ಜನರು ಗುಂಪುಗೂಡದಂತೆ ಮಾಲೀಕರು ಎಚ್ಚರ ವಹಿಸಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಸಲಹೆ ನೀಡಿದರು.

‘ಕೋವಿಡ್ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ  ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಚಾರ ಪಡಿಸಲಾಗುತ್ತಿದೆ. ಧ್ವನಿವರ್ಧಕದ ಮೂಲಕ ವಹಿವಾಟಿನ ಸ್ಥಳಗಳಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಬ್ಯಾನರ್‌ ಸಹ ಅಳವಡಿಸಲಾಗಿದೆ’ ಎಂದು ಎಪಿಎಂಸಿ ಅಧ್ಯಕ್ಷ ಕೆ.ಮಂಜುನಾಥ್ ವಿವರಿಸಿದರು.

‘ಕೃಷಿ ಉತ್ಪನ್ನಗಳನ್ನು ವಾಹನದಿಂದ ಕೆಳಗಿಳಿಸುವಾಗ ಮತ್ತು ವಾಹನಗಳಿಗೆ ತುಂಬುವಾಗ ಹಮಾಲರು ಹತ್ತಿರ ನಿಂತು ಕೆಲಸ ಮಾಡಬೇಕಿದೆ. ಇದರಿಂದ ಅಂತರ ಕಾಯ್ದುಕೊಳ್ಳಲು ಹಮಾಲರಿಗೆ ಸಾಧ್ಯವಾಗುತ್ತಿಲ್ಲ. ಆದರೂ ಹಮಾಲರಿಗೆ ಜಾಗೃತಿ ಮೂಡಿಸಿ ಅಂತರ ಕಾಯ್ದುಕೊಳ್ಳುವಂತೆ ತಿಳಿ ಹೇಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಜಾಗದ ಕೊರತೆ: ‘ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆ ಗಂಭೀರವಾಗಿದ್ದು, ಪ್ರತಿನಿತ್ಯ ವಹಿವಾಟಿಗೆ ತೊಂದರೆಯಾಗುತ್ತಿದೆ. ಕೋಲಾರ ತಾಲ್ಲೂಕಿನ ಮಡೇರಹಳ್ಳಿ ಬಳಿ ಅರಣ್ಯ ಇಲಾಖೆಗೆ ಸೇರಿದ 35 ಎಕರೆ ಜಮೀನು ಇದ್ದು, ಅದನ್ನು ಎಪಿಎಂಸಿಗೆ ಪಡೆಯಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ಅರಣ್ಯ ಸಚಿವರಾದ ತಾವು ಜಮೀನು ಮಂಜೂರಾತಿ ಮಾಡಿಸಬೇಕು’ ಎಂದು ಸಚಿವರನ್ನು ಕೋರಿದರು.

‘ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಮಾರುಕಟ್ಟೆ ಆವರಣದಲ್ಲಿ ಸಮಿತಿಯಿಂದ ಹಂಚಿಕೆಯಾಗಿರುವ 4 ಎಕರೆ ಜಮೀನಿನ ಪೈಕಿ ಬಳಕೆಯಾಗದೆ ಉಳಿದಿರುವ 2 ಎಕರೆ ಜಮೀನನ್ನು ಸಮಿತಿಯ ವಶಕ್ಕೆ ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ, ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ’ ಎಂದು ಹೇಳಿದರು.

ಪ್ರಸ್ತಾವ ಸಲ್ಲಿಕೆ: ‘ಜಮೀನು ಪ್ರಕರಣವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲು ಸಮಿತಿ ಸಭೆಯಲ್ಲಿ ನಿರ್ಣಯಿಸಿ ಎಕರೆಗೆ ₹ 1 ಕೋಟಿಯಂತೆ 3 ಎಕರೆ ಖರೀದಿಸಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಜಮೀನು ಮಂಜೂರು ಮಾಡಿಸಿದರೆ ತರಕಾರಿ ವಹಿವಾಟಿಗೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಶ್ರೀನಿವಾಸಗೌಡ, ‘ನ್ಯಾಯಾಲಯದಲ್ಲಿನ ಪ್ರಕರಣ ಹಿಂಪಡೆಯುವಂತೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಆಡಳಿತ ಮಂಡಳಿಗೆ ಸೂಚಿಸುತ್ತೇನೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್‌ ಶೋಭಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.