ADVERTISEMENT

ದಕ್ಷಿಣ ಭಾರತ ಅಂತರ ವಿ.ವಿ ಖೋ-ಖೋ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 13:21 IST
Last Updated 10 ಮಾರ್ಚ್ 2022, 13:21 IST

ಕೋಲಾರ: ‘ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಖೋ-ಖೋ ಪಂದ್ಯಾವಳಿಯು ಮಾಲೂರು ತಾಲ್ಲೂಕಿನ ಆಲಂಬಾಡಿಯ ಕ್ರೈಸ್ಟ್ ಕಾಲೇಜು ಆವರಣದಲ್ಲಿ ಮಾ.11ರಿಂದ 14ರವರೆಗೆ ನಡೆಯಲಿದೆ' ಎಂದು ಬೆಂಗಳೂರು ಉತ್ತರ ವಿ.ವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾ.11ರಂದು ಸಂಜೆ 4ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಪಂದ್ಯಾವಳಿಗೆ ಚಾಲನೆ ನೀಡುತ್ತಾರೆ. ಅಂತರರಾಷ್ಟ್ರೀಯ ಖೋ-ಖೋ ಆಟಗಾರ್ತಿ ಹಾಗೂ ಅರ್ಜುನ ಪ್ರಶಸ್ತಿ ವಿಜೇತೆ ಶೋಭಾ ನಾರಾಯಣ್, ಭಾರತೀಯ ಖೋ-ಖೋ ಒಕ್ಕೂಟದ ಉಪಾಧ್ಯಕ್ಷ ಲೋಕೇಶ್ವರ ಸಮಾರಂಭದಲ್ಲಿ ಭಾಗವಹಿಸುತ್ತಾರೆ’ ಎಂದರು.

‘ಮಾ.14ರಂದು ಬೆಳಿಗ್ಗೆ 11ಕ್ಕೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಬೆಂಗಳೂರು ಉತ್ತರ ವಿ.ವಿಯು 2018-19ನೇ ಸಾಲಿನಲ್ಲಿ ಆರಂಭವಾಗಿದ್ದು, ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಅಂತರ ಕಾಲೇಜು ಮಟ್ಟದ ಕ್ರೀಡಾ ಸ್ಪರ್ಧೆ ನಡೆಸಿಕೊಂಡು ಬರುತ್ತಿದೆ. ಇದೀಗ ದಕ್ಷಿಣ ವಲಯ ಅಂತರ ವಿ.ವಿ ಪುರುಷರ ಖೋ-ಖೋ ಪಂದ್ಯಾವಳಿ ಆಯೋಜಿಸುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ದಕ್ಷಿಣ ಭಾರತದ ಕೇರಳ, ತೆಲಂಗಾಣ, ಪುದುಚೇರಿ, ತಮಿಳುನಾಡು ಹಾಗೂ ಅತಿಥೇಯ ಕರ್ನಾಟಕ ರಾಜ್ಯದ 60 ವಿ.ವಿ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. 4 ಅಂಗಳದಲ್ಲಿ ಪಂದ್ಯಗಳು ನಡೆಯಲಿವೆ. ರಾಜ್ಯ ಖೋ-ಖೋ ಸಂಸ್ಥೆಯ ತಾಂತ್ರಿಕ ಮಾರ್ಗದರ್ಶನದಲ್ಲಿ ನಿಯಮಮಾನುಸಾರ ಪಂದ್ಯಾವಳಿ ಆಯೋಜಿಸಿದ್ದು, ತೀರ್ಪುಗಾರರಾಗಿ ರಾಜ್ಯ ಖೋ-ಖೋ ಸಂಸ್ಥೆಯ ತೀರ್ಪುಗಾರರು ಕಾರ್ಯ ನಿರ್ವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ಟ್ರೋಫಿ ಪ್ರದಾನ: ‘ಪಂದ್ಯಾವಳಿಯಲ್ಲಿ ಮೊದಲ 4 ಸ್ಥಾನ ಗಳಿಸುವ ತಂಡಗಳು ಹಿಮಾಚಲಪ್ರದೇಶ ವಿ.ವಿಯಲ್ಲಿ ನಡೆಯುವ ಅಖಿಲ ಭಾರತ ಅಂತರ ವಿ.ವಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ. ಈ ಪಂದ್ಯಾವಳಿಯಲ್ಲಿನ ವಿಜೇತ 4 ತಂಡಗಳಿಗೆ ಟ್ರೋಫಿ ಮತ್ತು ವೈಯಕ್ತಿಕ ನೆನಪಿನ ಕಾಣಿಕೆ ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.

‘ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಆಟಗಾರರು, ತಂಡಗಳ ತರಬೇತುದಾರರು ಹಾಗೂ ವ್ಯವಸ್ಥಾಪಕರಿಗೆ ಪ್ರತ್ಯೇಕ ವಸತಿ ಸೌಕರ್ಯ, ವೈದ್ಯಕೀಯ ಸೇವೆ, ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಬೆಂಗಳೂರು ಉತ್ತರ ವಿ.ವಿ ಕುಲ ಸಚಿವ ಪ್ರೊ.ವೆಂಕಟೇಶಮೂರ್ತಿ, ಸರ್ಕಾರಿ ಬಾಲಕರ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಶಶಿಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.