ADVERTISEMENT

ಕೋಲಾರ | ಅಸಹಜ ಸಾವುಗಳ ತನಿಖೆಗೆ ಒತ್ತಾಯ

ಸೌಜನ್ಯ ಸೇರಿದಂತೆ ನೂರಾರು ಸಾವು; ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:13 IST
Last Updated 10 ಅಕ್ಟೋಬರ್ 2025, 5:13 IST
ಕೋಲಾರದಲ್ಲಿ ಗುರುವಾರ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಕಾರ್ಯಕರ್ತರು ‘ನ್ಯಾಯಕ್ಕಾಗಿ ಜನಾಗ್ರಹ’ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರು
ಕೋಲಾರದಲ್ಲಿ ಗುರುವಾರ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಕಾರ್ಯಕರ್ತರು ‘ನ್ಯಾಯಕ್ಕಾಗಿ ಜನಾಗ್ರಹ’ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರು   

ಕೋಲಾರ: ಸೌಜನ್ಯಾ ಸೇರಿದಂತೆ ಧರ್ಮಸ್ಥಳದಲ್ಲಿ ನಡೆದಿರುವ ನೂರಾರು ಸಾವುಗಳ ಸಂಬಂಧ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಗರದ ತಾಲ್ಲೂಕು ಕಚೇರಿ ಮುಂದೆ ಗುರುವಾರ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ನ್ಯಾಯಕ್ಕಾಗಿ ಜನಾಗ್ರಹ’ ಹೆಸರಿನಲ್ಲಿ ಫಲಕಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

‘ಧರ್ಮಸ್ಥಳದಲ್ಲಿ ಸೌಜನ್ಯಾ ಕೊಲೆಯಾಗಿ ಇಂದಿಗೆ 13 ವರ್ಷಗಳೇ ಕಳೆದಿವೆ. ಅದರೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ನೂರಾರು ಸಾವು, ಕೊಲೆ, ಅತ್ಯಾಚಾರಗಳು ನಡೆದಿವೆ. ಧರ್ಮಸ್ಥಳದ ಮಂಜುನಾಥ ದೇವರ ಹೆಸರಿನಲ್ಲಿ ಭೂಹಗರಣಗಳು, ದಲಿತರಿಗೆ ಸೇರಿದ ಭೂಕಬಳಿಕೆ, ಮಹಿಳಾ ಸಂಘಟನೆಗಳಿಗೆ ಸಾಲ ಕೊಡುವ ನೆಪದಲ್ಲಿ ಬಡ್ಡಿ ದಂಧೆಗಳು ನಡೆಯುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

2012ರ ಅ.13 ರಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕಾಲೇಜಿನ 17 ವರ್ಷದ ವಿದ್ಯಾರ್ಥಿ ಸೌಜನ್ಯಾ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಲಾಯಿತು. ಇದಕ್ಕೆ ಸಂಬಂಧಪಟ್ಟ ಮೂವರು ವ್ಯಕ್ತಿಗಳು ಸಂತೋಷ್ ರಾವ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಹಿಡಿದು ಕೊಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಆದರೆ, ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಅಂದಿನ ಸರ್ಕಾರ ವಿಫಲವಾಗಿ ಸಿಐಡಿಗೆ ವಹಿಸಿ ಕೈ ತೊಳೆದುಕೊಂಡಿತು. ನಂತರದಲ್ಲಿ ಬಂದ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತು. ಬಳಿಕ ವೈದ್ಯಕೀಯ ವಿಧಿ ವಿಜ್ಞಾನ ತನಿಖೆಯೇ ಸೂಕ್ತ ರೀತಿಯಲ್ಲಿ ನಡೆದಿಲ್ಲವೆಂದು ಸಂತೋಷ್ ರಾವ್ ಅವರನ್ನು ಖುಲಾಸೆ ಮಾಡಲಾಯಿತು. ಈ ಪ್ರಕರಣದಲ್ಲಿನ ಅತ್ಯಾಚಾರಿಗಳು, ಹಂತಕರನ್ನು ಪತ್ತೆಹಚ್ಚುವಲ್ಲಿ ಆಡಳಿತರೂಢ ಸರ್ಕಾರಗಳು ವಿಫಲವಾಗಿವೆ’ ಎಂದು ದೂರಿದರು.

ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಶೇಷ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು. ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸದೆ ನಾಶವಾಗಲು ಅನುವು ಮಾಡಿರುವ ವೈದ್ಯಕೀಯ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು. ಅತ್ಯಾಚಾರದ ನೈಜ ಆರೋಪಿಗಳನ್ನು ಬಂಧಿಸಿ ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಸಾವಿನ ಪ್ರಕರಣಗಳನ್ನು ಭೇದಿಸಲು ಎಸ್‌ಐಟಿ ಮರು ರಚಿಸಿ ತನಿಖೆ ನಡೆಸಬೇಕು. ಇದನ್ನು ಸ್ಥಗಿತಗೊಳಿಸಲು ಬಿಜೆಪಿ ಸೇರಿದಂತೆ ಕೆಲ ಪಟ್ಟಭದ್ರ ಹಿತಾಸಕ್ತರು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

‘ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಆರ್ಥಿಕ ಅಪರಾಧವೆಸಗುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು. ದಲಿತರ ಜಾಗಗಳನ್ನು ಗುರಿಯಾಗಿಸಿಕೊಂಡು ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಕಬಳಿಸುತ್ತಿರುವ ವಿರುದ್ಧ ಕ್ರಮ ಜರುಗಿಸ ಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜನಾವಾದಿ ಸಂಘಟನೆಯ ವಿ.ಗೀತಾ, ಗಮಕ ಸಂಘಟನೆಯ ಶಾಂತಮ್ಮ, ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ, ಗಾಯಕ ಪಿಚ್ಚಹಳ್ಳಿ ಶ್ರೀನಿವಾಸ್, ಜೈ ಭೀಮ್ ಸಂಘಟನೆಯ ಸಂಸ್ಥಾಪಕ ಪಂಡಿತ್ ಮುನಿವೆಂಕಟಪ್ಪ, ಅಚ್ಚುತ, ಈಜಲ ಈನೆಲ ವೆಂಕಟಚಲಪತಿ, ಗಾಂಧಿನಗರ ರಮಣ, ಎಸ್‌ಎಫ್‌ಐ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಕೆ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲ ಕಾಲ ರಸ್ತೆ ತಡೆ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಲು ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.