ADVERTISEMENT

ಕೋಲಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅನುತ್ತೀರ್ಣರಿಗೆ ವಿಶೇಷ ತರಗತಿ, ಬಿಸಿಯೂಟ!

​ಪ್ರಜಾವಾಣಿ ವಾರ್ತೆ
Published 13 ಮೇ 2024, 13:52 IST
Last Updated 13 ಮೇ 2024, 13:52 IST
ಕೃಷ್ಣಮೂರ್ತಿ
ಕೃಷ್ಣಮೂರ್ತಿ   

ಕೋಲಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಬರೆಯಲು ಅನುವಾಗುವಂತೆ ಮೇ 15 ರಿಂದ ಜೂನ್‌ 5 ರವರೆಗೆ ವಿಶೇಷ ತರಗತಿ ನಡೆಸಲಾಗುವುದು ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನದಂತೆ ಈ ಕಾರ್ಯಕ್ಕೆ ಮುಂದಾಗಿದ್ದು, ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ ರಜಾದಿನಗಳು ಒಳಗೊಂಡಂತೆ ತರಗತಿ ನಡೆಸಲು ಅವರು ಸಂಬಂಧಿಸಿದ ಶಾಲೆಗಳಿಗೆ ಸೂಚಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ಮಕ್ಕಳ ಕಲಿಕಾಭಿವೃದ್ದಿ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದು, ವಿಶೇಷ ತರಗತಿಗಳಿಗೆ ಹಾಜರಾಗುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಕ್ರಮವಹಿಸಲು ಮುಖ್ಯಶಿಕ್ಷಕರಿಗೆ ನಿರ್ದೇಶಿಸಿದ್ದಾರೆ.

ADVERTISEMENT

‘ವಿಶೇಷ ತರಗತಿಗಳಿಗೆ ಎಲ್ಲಾ ವಿಷಯ ಶಿಕ್ಷಕರ ಹಾಜರಿ ಕಡ್ಡಾಯವಾಗಿದೆ. ಆಯಾ ದಿನದ ಮಕ್ಕಳ ಹಾಜರಾತಿ ಅದೇ ದಿನ ಬೆಳಿಗ್ಗೆ 11 ಗಂಟೆಯೊಳಗೆ ಬಿಇಒ ಕಚೇರಿಗೆ ಸಲ್ಲಿಸಬೇಕು. ಬಿಇಒ ಕಚೇರಿಯಲ್ಲಿ ಕ್ರೋಡೀಕರಿಸಿ ಅದೇ ದಿನ ಹಾಜರಾತಿ ಮಾಹಿತಿಯನ್ನು ಡಿಡಿಪಿಐ ಕಚೇರಿಗೆ ತಲುಪಿಸಿದ ನಂತರ ಅದನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗೆ ಅಪ್‍ಲೋಡ್ ಮಾಡಲಾಗುವುದು’ ಎಂದು ಹೇಳಿದ್ದಾರೆ.

‘ಯಾವುದಾದರೂ ಶಾಲೆಯಲ್ಲಿ 10ಕ್ಕಿಂತ ಕಡಿಮೆ ಮಕ್ಕಳು ಅನುತ್ತೀರ್ಣರಾಗಿದ್ದಲ್ಲಿ ಆ ಕ್ಲಸ್ಟರ್ ವ್ಯಾಪ್ತಿಯ ನಾಲ್ಕೈದು ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ ವಿಶೇಷ ತರಗತಿ ನಡೆಸಲು ಕ್ರಮವಹಿಸಲು ಸೂಚಿಸಲಾಗಿದೆ’ ಎಂದಿದ್ದಾರೆ.

ವಿಶೇಷ ತರಗತಿಗಳಿಗೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಳಗ್ಗೆ 10ರಿಂದ 11 ಗಂಟೆವರೆಗೆ ಗಣಿತ, 11 ಗಂಟೆಯಿಂದ 12 ರವರೆಗೆ ಪ್ರಥಮ ಭಾಷೆ, 12ರಿಂದ 1 ಗಂಟೆಯವರೆಗೆ ವಿಜ್ಞಾನ ಹಾಗೂ 1 ರಿಂದ 1.30 ರವರೆಗೆ ಊಟದ ಸಮಯ ನಿಗದಿ ಮಾಡಲಾಗಿದೆ.

ಉಳಿದಂತೆ 1.30 ರಿಂದ 2.30 ರವರೆಗೆ ದ್ವಿತೀಯ ಭಾಷೆ, 2.30 ರಿಂದ 3.30 ರವರೆಗೆ ಸಮಾಜ ವಿಜ್ಞಾನ ಹಾಗೂ 3.30ರಿಂದ 4.30 ರವರೆಗೆ ತೃತೀಯ ಭಾಷೆ ತರಗತಿ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಈ ಅವಕಾಶ ಸದುಪಯೋಗಪಡಿಸಿಕೊಂಡು ಶಾಲೆಗಳಿಗೆ ಹಾಜರಾಗಲು ಅವರು ಕೋರಿದ್ದಾರೆ.

ಶೇ 75 ಹಾಜರಾತಿ ಕೊರತೆಯಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಬರೆಯಲಾಗದೆ ವಂಚಿತರಾದ 15 ವರ್ಷ ತುಂಬಿದ ವಿದ್ಯಾರ್ಥಿಗಳಿಗೂ ಪರೀಕ್ಷೆ-2 ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಪರೀಕ್ಷೆ -1ಕ್ಕೆ ನೋಂದಣಿಯಾಗದವರಿಗೆ ಪರೀಕ್ಷೆ-2 ಹಾಗೂ 3 ಬರೆಯಲು ಅವಕಾಶವಿಲ್ಲ ಎಂದು ತಿಳಿಸಲಾಗಿತ್ತು.

ಮೇ 15 ರ ನಂತರ ಮುಖ್ಯಶಿಕ್ಷಕರ ಲಾಗಿನ್‍ನಲ್ಲಿ ಮಾಹಿತಿ ಬಿಡುಗಡೆಯಾಗಲಿದ್ದು, ಇಂತಹ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿ ನೋಂದಣಿ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಜೂನ್ 7ರಿಂದ 14 ರವರೆಗೆ ನಿಗದಿಗೊಳಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ಹೊರಡಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚನೆ ಜೂನ್ 7ರಿಂದ 14 ರವರೆಗೆ ಪರೀಕ್ಷೆ–2 ಪರೀಕ್ಷೆ ವಂಚಿತರಿಗೂ ಬರೆಯಲು ಅವಕಾಶ
4832 ಮಂದಿ ಅನುತ್ತೀರ್ಣ
ಕೋಲಾರ ಜಿಲ್ಲೆಯಲ್ಲಿ ಹೊಸದಾಗಿ ಪರೀಕ್ಷೆ ಬರೆದಿದ್ದವರಲ್ಲಿ 4832 ಮಂದಿ ಅನುತ್ತೀರ್ಣರಾಗಿದ್ದಾರೆ. ಈ ಬಾರಿ ಹೊಸದಾಗಿ ಒಟ್ಟು 19282 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 14450 ಮಂದಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಬಾಲಕರ ಫಲಿತಾಂಶ ತೀವ್ರ ಕಳವಳಕಾರಿಯಾಗಿದೆ. ಶೇ 68.63 ಬಾಲಕರು ಮಾತ್ರ ಉತ್ತೀರ್ಣರಾಗಿದ್ದರೆ ಶೇ 81.29 ಬಾಲಕಿಯರು ತೇರ್ಗಡೆಯಾಗಿದ್ದಾರೆ.
ಶೇ 74.94 ಫಲಿತಾಂಶ
2023–24ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯು ಶೇ 73.57 ಅಂಕಗಳೊಂದಿಗೆ 20ನೇ ಸ್ಥಾನ ಪಡೆದು ಭಾರಿ ಕುಸಿತ ಕಂಡಿದೆ. ಖಾಸಗಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ಶೇ 74.94 ಅಂಕಗಳೊಂದಿಗೆ 17ನೇ ಸ್ಥಾನ ಪಡೆದಿದೆ. 2022–23ನೇ ಸಾಲಿನಲ್ಲಿ ಶೇ 93.75 ಫಲಿತಾಂಶದೊಂದಿಗೆ 6ನೇ ಸ್ಥಾನ ಗಳಿಸಿತ್ತು. 2021–22ರಲ್ಲಿ ಜಿಲ್ಲೆಯು ಶೇ 94.53 ಫಲಿತಾಂಶದೊಂದಿಗೇ ಇದೇ ಸ್ಥಾನದಲ್ಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.