ADVERTISEMENT

ಆತಂಕ ತಂದ ಹೀಚು ಉದುರುವಿಕೆ

ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇರುವ ರೈತರಿಗೆ ಮೂಡುತ್ತಿದೆ ನಿರಾಸೆ

ಆರ್.ಚೌಡರೆಡ್ಡಿ
Published 24 ಮಾರ್ಚ್ 2020, 11:50 IST
Last Updated 24 ಮಾರ್ಚ್ 2020, 11:50 IST
ಶ್ರೀನಿವಾಸಪುರ ಹೊರವಲಯದ ತೋಟವೊಂದರಲ್ಲಿ ಮಾವಿನ ಮರದ ಕೆಳಗೆ ಉದುರಿ ಬಿದ್ದಿರುವ ಹೀಚು
ಶ್ರೀನಿವಾಸಪುರ ಹೊರವಲಯದ ತೋಟವೊಂದರಲ್ಲಿ ಮಾವಿನ ಮರದ ಕೆಳಗೆ ಉದುರಿ ಬಿದ್ದಿರುವ ಹೀಚು   

ಶ್ರೀನಿವಾಸಪುರ: ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದಂತೆ ಮಾವಿನ ಹೀಚು ಉದುರುವ ಪ್ರಮಾಣ ಹೆಚ್ಚಿದೆ. ತಾಲ್ಲೂಕಿನಾದ್ಯಂತ ಮಾವಿನ ತೋಟಗಳಲ್ಲಿ ಹೀಚು ದೊಡ್ಡ ಪ್ರಮಾಣದಲ್ಲಿ ನೆಲಕಚ್ಚಿದೆ.

ಈ ಬಾರಿ ಶೇ 10 ರಿಂದ ಶೇ 15ರಷ್ಟು ಫಸಲು ಮಾತ್ರ ಬಂದಿದೆ. ತಾಲ್ಲೂಕಿನ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಫಸಲು ಕಾಣಿಸಿಕೊಂಡಿದೆ. ಬೆಳೆಗಾರರು ಇರುವ ಫಸಲಿಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದಾರೆ. ಆದರೆ ವಾತಾವರಣದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಫಸಲನ್ನು ಬಲಿ ತೆಗೆದುಕೊಳ್ಳುತ್ತಿದೆ.

ಮಾವಿನ ಬೆಳೆಯಲ್ಲಿ ಹೀಚು ಉದುರುವಿಕೆ ಸಾಮಾನ್ಯ. ಆದರೆ ಮರಗಳಲ್ಲಿನ ಫಸಲಿನ ಮುಕ್ಕಾಲು ಭಾಗ ಉದುರಿಬಿದ್ದರೆ ಹೇಗೆ ಎಂಬುದು ಬೆಳೆಗಾರರ ಪ್ರಶ್ನೆ. ವಿಶೇಷವೆಂದರೆ ಈ ಬಾರಿ ಬಾದಾಮಿ ಜಾತಿಯ ಮರಗಳಲ್ಲಿ ಹೆಚ್ಚು ಫಸಲು ಬಂದಿದೆ. ಉಳಿದ ಎಲ್ಲ ಜಾತಿಯ ಮರಗಳಲ್ಲೂ ತೀರಾ ಕಡಿಮೆ ಫಸಲಿದೆ. ಫಸಲೇ ಇಲ್ಲದ ಮರಗಳ ಸಂಖ್ಯೆ ಹೆಚ್ಚಾಗಿದೆ.

ADVERTISEMENT

ಕೆಲವು ರೈತರು ಹೀಚು ಉದುರುವುದನ್ನು ಕಡಿಮೆ ಮಾಡಲು ಮರಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದಾರೆ. ನೀರಿನ ಅನುಕೂಲ ಇರುವವರು ಹನಿ ನೀರಾವರಿ ಅಳವಡಿಸಿದ್ದಾರೆ. ಇಷ್ಟಾದರೂ ಉದುರುವಿಕೆ ನಿಂತಿಲ್ಲ. ‘ಈ ಸಲ, ಇರುವ ಕಾಯಿಗೆ ಒಳ್ಳೆ ಬೆಲೆ ಬರಬಹುದು ಎಂದುಕೊಂಡಿದ್ದೆ. ಏರುತ್ತಿರುವ ಬಿಸಿಲಿನ ತಾಪ ಆಸೆಗೆ ಕಲ್ಲುಹಾಕಿದೆ’ ಎಂದು ಮಾವು ಬೆಳೆಗಾರ ವೆಂಕಟರಾಮರೆಡ್ಡಿ ಹೇಳಿದರು.

ಈಗಾಗಲೇ ಹೀಚಿಗೆ ಹಣ್ಣು ನೊಣದ ಹಾವಳಿ ಹೆಚ್ಚಿದೆ. ಬಿದ್ದ ದೊಡ್ಡ ಗಾತ್ರದ ಹೀಚು ಕೊಳೆಯುವುದರಿಂದ ಊಜಿ ನೊಣದ ಹಾವಳಿ ಇನ್ನಷ್ಟು ಹೆಚ್ಚುತ್ತದೆ. ಇದು ಕಾಯಿ ಕೆಡಲು ಕಾರಣವಾಗುತ್ತದೆ. ‘ಮಾವು ಬೆಳೆಗಾರರು ಉದುರಿದ ಹೀಚು ಹಾಗೂ ಕಾಯಿಯನ್ನು ಮರಗಳ ಕೆಳಗೆ ಬಿಡದೆ, ಆರಿಸಿ ಗುಳಿಯಲ್ಲಿ ಹಾಕಿ ಮಣ್ಣು ಮುಚ್ಚಬೇಕು. ಹಾಗೆ ಮಾಡುವುದರಿಂದ ಹಣ್ಣು ನೊಣದ ಅಭಿವೃದ್ಧಿ ಕಡಿಮೆಯಾಗುತ್ತದೆ. ಈ ನೊಣದ ತಡೆಗೆ ರೈತರು ತಪ್ಪದೆ ಮೋಹಕ ಬಲೆ ಬಳಸಬೇಕು’ ಎಂದು ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಮೂರು ಸಲ ಔಷಧ ಸಿಂಪಡಣೆ ಮಾಡಿರುವ ಮಾವು ಬೆಳೆಗಾರರು, ಮರಗಳಲ್ಲಿ ಕಡಿಮೆ ಫಸಲು ಬಂದಿರುವ ಕಾರಣ, ಇನ್ನೊಂದು ಸಿಂಪಡಣೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಚು ಉದುರುವಿಕೆ ತಡೆಯಲು ಯಾವುದೇ ಪರಿಣಾಮಕಾರಿ ಪರಿಹಾರ ಇಲ್ಲವೆಂದು ತಿಳಿದಿರುವ ರೈತರು ಕೈಚೆಲ್ಲಿದ್ದಾರೆ.

***

ಕೆಲವರು ತೊಟಗಳಲ್ಲಿ ಬಿದ್ದ ದೊಡ್ಡ ಹೀಚನ್ನು ಆರಿಸಿ ತಂದು ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದಾರೆ.ಅಂತಹ ಹೀಚು ತಿನ್ನಲು ಯೋಗ್ಯವಲ್ಲ

ಎನ್‌.ಶ್ರೀರಾಮರೆಡ್ಡಿ, ಮಾವು ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.