ADVERTISEMENT

ಶ್ರೀನಿವಾಸಪುರ: ಆರೋಗ್ಯ ಸೇವೆಗಳ ಕುರಿತು ಜನರಲ್ಲಿ ಸದಭಿಪ್ರಾಯ

ಕೊರತೆ ನಡುವೆಯೂ ಉತ್ತಮ ಸೇವೆ

ಆರ್.ಚೌಡರೆಡ್ಡಿ
Published 1 ಏಪ್ರಿಲ್ 2020, 19:45 IST
Last Updated 1 ಏಪ್ರಿಲ್ 2020, 19:45 IST
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಿದ್ಧಪಡಿಸಲಾಗಿರುವ ಐಸೊಲೇಷನ್‌ ವಾರ್ಡ್‌
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸಿದ್ಧಪಡಿಸಲಾಗಿರುವ ಐಸೊಲೇಷನ್‌ ವಾರ್ಡ್‌   

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಜಿಲ್ಲೆಯಲ್ಲಿಯೇ ಸ್ವಚ್ಛತೆಗೆ ಹೆಸರಾದ ಈ ಆಸ್ಪತ್ರೆ, ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದರಲ್ಲಿಯೂ
ಹೆಸರಾಗಿದೆ.

ಪಟ್ಟಣದ ಮಧ್ಯ ಭಾಗದಲ್ಲಿದ್ದ ಹಳೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು, 100 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ ಮೇಲೆ, ಬದಲಾವಣೆಯ ಗಾಳಿ ಬೀಸತೊಡಗಿತು. ವೈದ್ಯರು ಹಾಗೂ ಸಿಬ್ಬಂದಿ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಫಲವಾಗಿ, ಬೇರೆ ತಾಲ್ಲೂಕುಗಳ ಜನರು ಸಹ ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುವಂತಾಗಿದೆ.

ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. 14 ಮುಖ್ಯ ನರ್ಸ್‌ಗಳ ಕೊರತೆ ಇದೆ. ಕಿವಿ, ಮೂಗು, ಗಂಟಲು ಹಾಗೂ ಕಣ್ಣಿನ ವೈದ್ಯರಿಲ್ಲ. ಈ ಸಮಸ್ಯೆ ಇದ್ದವರು ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ
ನಿರ್ಮಾಣವಾಗಿದೆ.

ADVERTISEMENT

‘ಕೊರೊನಾ ಸಮಸ್ಯೆ ಕಾಣಿಸಿಕೊಂಡ ಬಳಿಕ, ಮುಂಜಾಗ್ರತಾ ಕ್ರಮವಾಗಿ 6 ಹಾಸಿಗೆ ಸಾಮರ್ಥ್ಯದ ಐಸೊಲೇಷನ್‌ ವಾರ್ಡ್‌ ಅನ್ನು ಸಿದ್ಧಪಡಿಸಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿಯನ್ನು ನೇಮಿಸಲಾಗಿದೆ’ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಿ.ಎಸ್‌.ಶ್ರೀನಿವಾಸ್‌ ತಿಳಿಸಿದರು.

ತೀವ್ರ ನಿಗಾ ಘಟಕ ಇದೆಯಾದರೂ, ಅದರ ನಿರ್ವಹಣೆಗೆ ಅಗತ್ಯವಾದ ತಜ್ಞ ವೈದ್ಯರಿಲ್ಲ. ಒಂದು ವೆಂಟಿಲೇಷನ್‌ ವ್ಯವಸ್ಥೆ ಇದೆ. ಅರಿವಳಿಕೆ ತಜ್ಞರ ಕೊರತೆ ಕಾಡುತ್ತಿದೆ.

ರೋಗಿಗಳಿಗೆ ಅಗತ್ಯವಾದ ಔಷಧ ಹಾಗೂ ಚುಚ್ಚುಮದ್ದನ್ನು ಉಚಿತವಾಗಿ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಜನೌಷಧ ಕೇಂದ್ರದಲ್ಲಿ ಔಷಧ, ಗುಳಿಗೆ ಪಡೆದುಕೊಳ್ಳುವಂತೆ ತಿಳಿಸಲಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿಯೇ ಇರುವ ಆಯುರ್ವೇದ ಆಸ್ಪತ್ರೆಯಲ್ಲೂ ಉತ್ತಮವಾದ ವೈದ್ಯಕೀಯ ಸೇವೆ ದೊರೆಯುತ್ತಿದೆ.

ಇಷ್ಟು ಮಾತ್ರವಲ್ಲದೆ ತಾಲ್ಲೂಕಿನಲ್ಲಿ 17 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 1 ಸಮುದಾಯ ಆರೋಗ್ಯ ಕೇಂದ್ರ ಜನರ ಆರೋಗ್ಯ ರಕ್ಷಣೆಯಲ್ಲಿ ತೊಡಗಿವೆ.

***

ಕೊರೊನಾ ವೈರಾಣು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ
– ಡಾ.ಎಂ.ಸಿ.ವಿಜಯ, ತಾಲ್ಲೂಕು ವೈದ್ಯಾಧಿಕಾರಿ

ಆಸ್ಪತ್ರೆಯನ್ನು ಸ್ವಚ್ಛವಾಗಿಡಲಾಗಿದೆ. ವೈದ್ಯಕೀಯ ಸೇವೆ ತೃಪ್ತಿಕರವಾಗಿದೆ. ಸರ್ಕಾರ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಬೇಕು
– ವಿಮಲ, ಬಾಣಂತಿ, ಶ್ರೀನಿವಾಸಪುರ

ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ರೋಗಿಗಳು ಹಾಗೂ ಬಾಣಂತಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.
– ಶಬಾನಾ, ಬಾಣಂತಿ, ಶ್ರೀನಿವಾಸಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.