ADVERTISEMENT

ಶ್ರೀನಿವಾಸಪುರ | ತತ್ವಪದಕಾರರೊಂದಿಗೆ ಸಹ ಭೋಜನ

ಅರಿವು ಭಾರತ ಸಂಸ್ಥೆಯಿಂದ ಆಯೋಜನೆ, ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 4:22 IST
Last Updated 25 ಆಗಸ್ಟ್ 2025, 4:22 IST
ಶ್ರೀನಿವಾಸಪುರ‌ ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಭಾನುವಾರ ಅರಿವು ಭಾರತ ಸಂಸ್ಥೆಯಿಂದ ನಡೆದ ತತ್ವಪದಕಾರರೊಂದಿಗೆ ಸಹಭೋಜನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಶ್ರೀನಿವಾಸಪುರ‌ ತಾಲ್ಲೂಕಿನ ಮುದಿಮಡಗು ಗ್ರಾಮದಲ್ಲಿ ಭಾನುವಾರ ಅರಿವು ಭಾರತ ಸಂಸ್ಥೆಯಿಂದ ನಡೆದ ತತ್ವಪದಕಾರರೊಂದಿಗೆ ಸಹಭೋಜನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಸಮೀಪದ ಮುದಿಮಡಗು ಗ್ರಾಮದ ಕೋದಂಡರಾಮಸ್ವಾಮಿ ದೇವಾಲಯ ಮುಂಭಾಗ ಹಾಗೂ ಕೆ.ಎನ್‌.ಜಯರಾಮುಲು ಅವರ ನಿವಾಸದಲ್ಲಿ ಭಾನುವಾರ ಅರಿವು ಭಾರತ ಸಂಸ್ಥೆಯಿಂದ ತತ್ವಪದಕಾರರೊಂದಿಗೆ ಸಹಭೋಜನ ಕಾರ್ಯಕ್ರಮ ನಡೆಯಿತು.

ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಎನ್‌.ವಿಜಯಲಕ್ಷ್ಮಿ ಮಾತನಾಡಿ, ‘ಪರಿಸರ ನಮಗೆ ಎಲ್ಲಾ ರೀತಿಯ ಕೊಡಿಗೆ ನೀಡಿದೆ. ನಾವು ಹುಟ್ಟಿದಾಗ ಯಾವುದೇ ಜಾತಿ, ಮತ ಇರುವುದಿಲ್ಲ, ನಮ್ಮ ನಡವಳಿಕೆಯ ಮೇಲೆ ನಮ್ಮ ಜಾತಿ ಮತ ಗುರುತಿಸಲಾಗುತ್ತದೆ. ಪಂಚಭೂತಗಳು ಸರಿಸಮಾನವಾಗಿದ್ದಾಗ ನಮ್ಮಲ್ಲಿ ಏಕೆ ಬೇಕು ಜಾತಿ, ಭೇದಭಾವ’ ಎಂದು ಪ್ರಶ್ನಿಸಿದರು.

ನಾವೆಲ್ಲರೂ ಸೇರಿ ವಿಶಾಲವಾಗಿ ಯೋಚನೆ ಮಾಡಿ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಬೇಕಾಗಿದೆ ಎಂದರು.

ADVERTISEMENT

ಅರಿವು ಭಾರತ ಸಂಸ್ಥೆಯ ಮುಖ್ಯಸ್ಥ ಅರಿವು ಶಿವಪ್ಪ ಮಾತನಾಡಿ, ‘ಈಗಾಗಲೇ ಅರಿವು ಭಾರತ ಸಂಸ್ಥೆಯಿಂದ 500 ಕಾರ್ಯಕ್ರಮಗಳನ್ನು ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಭಜನೆ, ಜಾನಪದ ಕಲಾ ತಂಡ ಹಾಗೂ ಕೋಲಾಟದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಜಾತಿ ವಿಚಾರ ಗಣನೆಗೆ ಬಾರದೆ ಎಲ್ಲರೂ ಒಗ್ಗಟಾಗಿ ಇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಸಮಾಜದಲ್ಲಿ ನೆಮ್ಮದಿ ಕಾಣಬೇಕಾದರೆ ಜಾತಿ ಪದ್ಧತಿ ಇರಬಾರದು. ಆಗಷ್ಟೇ ನೆಮ್ಮದಿ ಕಾಣಲು ಸಾಧ್ಯ’ ಎಂದರು.

ದಲಿತ ಮುಖಂಡ ಎನ್.ಮುನಿಸ್ವಾಮಿ ಮಾತನಾಡಿ, ‘ಈ ಹಿಂದಿನ ದಿನಗಳಲ್ಲಿ ಅನೇಕ ಮಹನೀಯರು ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ತಮ್ಮ ಪದ್ಯಗಳ ಮೂಲಕ ಅರಿವು ಮೂಡಿಸಿದ್ದಾರೆ. ಸಾಧ್ಯವಾದಷ್ಟು ಸಮಾಜದಲ್ಲಿ ಅಸಮಾನತೆ ಹೋಗಲಾಡಿಸಲು ಪ್ರಯತ್ನಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಹ ನಾವೆಲ್ಲರೂ ಸೇರಿ ಸಮಾಜದಲ್ಲಿನ ಅಸ್ಪೃಶ್ಯತೆ ಹೋಗಲಾಡಿಸಬೇಕಿದೆ’ ಎಂದು ಹೇಳಿದರು.

ಕೆಎಸ್‍ಎಸ್‍ಐಡಿಸಿ ನಿವೃತ್ತ ಅಧಿಕಾರಿ ಸಿ.ಜಿ.ಶ್ರೀನಿವಾಸ್ ಮಾತನಾಡಿ, ‘ಪ್ರತಿಯೊಬ್ಬರು ವಿದ್ಯಾವಂತರಾಗಿ, ಆರ್ಥಿಕವಾಗಿ ಸಬಲರಾದರೆ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಸಾಧ್ಯ’ ಎಂದು ಸಲಹೆ ನೀಡಿದರು.

ಕೋಲಾರ ಮುಜರಾಯಿ ಇಲಾಖೆ ತಹಶೀಲ್ದಾರ್ ಎಸ್.ಶ್ರೀನಿವಾಸರೆಡ್ಡಿ, ದಲಿತ ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾಂಕಾ, ಪಿಡಿಒ ಎನ್.ನರೇಂದ್ರಬಾಬು, ಗ್ರಾಮದ ಮುಖಂಡರಾದ ಬಿ.ಎನ್.ರಾಮಸ್ವಾಮಿಶೆಟ್ಟಿ, ಅಮರನಾರಾಯಣ, ಕೆ.ಎನ್.ಜಯರಾಮ್, ಚಿಂತಮಾನಪಲ್ಲಿ ವೆಂಕಟೇಶ್, ಕೃಷ್ಣಾರೆಡ್ಡಿ, ಚೆನ್ನೇಶವ, ಸುಧಾಕರ್, ಶಿಕ್ಷಕ ರವಿಕುಮಾರ್, ಮಂಜುನಾಥರೆಡ್ಡಿ, ಓಂಪ್ರಕಾಶ್, ಜಾನಪದ ಕಲಾವಿದ ಹೊದಲಿ ನಾರಾಯಣಸ್ವಾಮಿ ಹಾಗೂ ವಿವಿಧ ಕಲಾ ತಂಡಗಳ ಸದಸ್ಯರು ಇದ್ದರು.

ರಾಯಲ್ಪಾಡು ಸಮೀಪದ ಮುದಿಮಡಗು ಗ್ರಾಮದಲ್ಲಿ ಆಯೋಜನೆ ಏಕೆ ಬೇಕು ಜಾತಿ, ಭೇದಭಾವ–ವಿಜಯಲಕ್ಷ್ಮಿ ಪ್ರಶ್ನೆ ನೆಮ್ಮದಿ ಕಾಣಬೇಕಾದರೆ ಜಾತಿ ಪದ್ಧತಿ ಇರಬಾರದು: ಅರಿವು ಶಿವಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.