
ಮಾಲೂರು: ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ತಾಲ್ಲೂಕು ಆಡಳಿತ ಮತ್ತು ಶಾಲಾ ಶಿಕ್ಷಣ ಇಲಾಖೆಯಿಂದ ಪ್ರೌಢಶಾಲೆ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ‘ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಸ್ಎಸ್ಎಲ್‌ಸಿ ವಾರ್ಷಿಕ ಫಲಿತಾಂಶ ಉತ್ತಮಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ಈ ಮಾಹಿತಿ ಪಡೆದುಕೊಳ್ಳಬೇಕು. ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲ ಶಾಲೆಗಳಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆಯಲು ಇಲಾಖೆ ನೀಡಿರುವ ಎಲ್ಲ ಮಾರ್ಗದರ್ಶನಗಳನ್ನು ಪಾಲಿಸಿಬೇಕು’ ಎಂದು ಹೇಳಿದರು.
ಶಿಕ್ಷಕರು ಮಕ್ಕಳ ಕಲಿಕೆ ಬಗ್ಗೆ ಒತ್ತು ನೀಡಬೇಕು. ಮಾಲೂರು ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ ಪಡೆಯಲು ಕ್ರಮ ಕೈಗೊಳ್ಳಲು ಎಲ್ಲ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರಿಗೆ ಸೂಚಿಸಿದರು. ನಗರದ ಬಿಇಒ ಕಚೇರಿಯಲ್ಲಿ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಪಟ್ಟಂತೆ ಸಹಾಯವಾಣಿ ತೆರೆದು ಪರಿಣಿತ ಶಿಕ್ಷಕರಿಂದ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಸ್ಥೆ ಮಾಡಲು ಸೂಚಿಸಿದರು.
ಈ ವೇಳೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯನರಸಿಂಹ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್, ಎ.ಬಿ. ರಾಮಕೃಷ್ಣ, ಟಿ. ವೆಂಕಟಸ್ವಾಮಿ, ವಿಜಯಕುಮಾರ್, ಶಶಿಧರ್, ಅಶೋಕ್ , ವಿ. ಮಂಜಪ್ಪ, ಎಚ್. ಕೃಷ್ಣೇಗೌಡ ಹಾಗೂ ಮುಖ್ಯ ಶಿಕ್ಷಕರು, ಶಿಕ್ಷಕರು ಭಾಗವಹಿಸಿದ್ದರು.