ADVERTISEMENT

ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಜೀವನದ ಬುನಾದಿ

ಸಂವಾದದಲ್ಲಿ ಪರೀಕ್ಷಾ ನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 15:09 IST
Last Updated 12 ಮಾರ್ಚ್ 2020, 15:09 IST

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೇವಲ 15 ದಿನ ಬಾಕಿಯಿದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಹಾಗೂ ಏಕಾಗ್ರತೆ ಇಲ್ಲವಾದಲ್ಲಿ ಸಾಧನೆ ಅಸಾಧ್ಯ’ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಕಿವಿಮಾತು ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿ, ‘ಎಸ್ಸೆಸ್ಸೆಲ್ಸಿಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಬುನಾದಿ. ಈ ಹಂತದಲ್ಲಿ ಕಲಿಕೆಯಲ್ಲಿ ಆಸಕ್ತಿ ವಹಿಸಿ ಶ್ರದ್ಧೆಯಿಂದ ಓದಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

‘ಮಾರ್ಚ್‌ 27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಭಯ ಬೇಕಿಲ್ಲ. ಶ್ರದ್ಧೆಯಿಂದ ಓದಿನಲ್ಲಿ ತೊಡಗಿದರೆ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯಬಹುದು. ಧನಾತ್ಮಕ ಚಿಂತನೆಯೊಂದಿಗೆ ನಿರಂತರ ಅಧ್ಯಯನ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ತಿಳಿಸಿದರು.

ADVERTISEMENT

‘ಪ್ರತಿ ಪಠ್ಯ ವಿಷಯಕ್ಕೂ ಹೆಚ್ಚು ಆದ್ಯತೆ ನೀಡಿ ಓದಬೇಕು. ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ‘ನನ್ನನ್ನೊಮ್ಮೆ ಗಮನಿಸಿ’ ಮಾದರಿ ಪಶ್ನೆಕೋಠಿ ಸಿದ್ಧಪಡಿಸಿ ನೀಡಲಾಗಿದ್ದು, ಇದರ ಸದುಪಯೋಗ ಪಡೆಯಿರಿ. ಆರೋಗ್ಯದ ಕಡೆ ಗಮನ ಹರಿಸಬೇಕು. ಆರೋಗ್ಯವಂತ ಶರೀರದಲ್ಲಿ ಆರೋಗ್ಯಕರ ಮನಸ್ಸಿರುತ್ತದೆ. ಸತತ ಅಭ್ಯಾಸದಿಂದ ಎಂತಹ ಕಷ್ಟದ ಪ್ರಶ್ನೆ ಸಹ ಸುಲಭವಾಗುತ್ತದೆ’ ಎಂದರು.

‘ಪುಸ್ತಕ ನೋಡಿಯೇ ಇಲಾಖೆ ನೀಡಿರುವ 6 ಸೆಟ್ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಿರಿ. ಒಂದೆರಡು ಬಾರಿ ಉತ್ತರ ಬರೆದ ನಂತರ ಅದರಲ್ಲಿನ ಪ್ರಶ್ನೆಗಳಿಗೆ ಉತ್ತರ ನೋಡದೇ ಬರೆದು ಅಭ್ಯಾಸ ಮಾಡಬೇಕು. ಬರವಣಿಗೆ ಸುಂದರವಾಗಿರಲಿ. ಯಶಸ್ಸಿಗೆ ಆತ್ಮವಿಶ್ವಾಸ ಬಹಳ ಮುಖ್ಯ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಕೆಗೆ ಆತ್ಮವಿಶ್ವಾಸ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಪರೀಕ್ಷಾ ಭಯ ಹೋಗಲಾಡಿಸುತ್ತದೆ’ ಎಂದು ಹೇಳಿದರು.

ಸಕಾರಾತ್ಮಕ ಭಾವನೆ: ‘ನಕಾರಾತ್ಮಕ ಭಾವನೆ ಬಿಟ್ಟು ಸಕಾರಾತ್ಮಕ ಭಾವನೆ ರೂಢಿಸಿಕೊಳ್ಳಿ. ಉತ್ತೀರ್ಣನಾಗುತ್ತೇನೆಂಬ ಆತ್ಮವಿಶ್ವಾಸದೊಂದಿಗೆ ಅಭ್ಯಾಸ ಮಾಡಬೇಕು. ಶಿಕ್ಷಕರು ಮಕ್ಕಳ ಕಲಿಕೆ ದೃಢೀಕರಣಕ್ಕೆ ಗಮನ ನೀಡಬೇಕು. ಶಾಲಾ ಹಂತದಲ್ಲಿ ನಡೆದಿರುವ ಎಲ್ಲಾ ಪ್ರಶ್ನೆಪತ್ರಿಕೆಗಳನ್ನು ಒಮ್ಮೆ ಅಭ್ಯಾಸ ಮಾಡಿ. ಪಠ್ಯಪುಸ್ತಕದ ಅಧ್ಯಯನವು ಹೆಚ್ಚಿನ ಅಂಕ ಗಳಿಕೆಗೆ ಸಹಕಾರಿ’ ಎಂದು ಸಲಹೆ ನೀಡಿದರು.

‘ಕಠಿಣ ವಿಷಯಗಳಾದ ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿ. ನಿರಂತರ ಅಭ್ಯಾಸದಿಂದ ಈ ವಿಷಯಗಳು ಸುಲಭವೆನಿಸುತ್ತವೆ. ಗಣಿತ ವಿಷಯಕ್ಕೆ ಅಭ್ಯಾಸ ಬಹಳ ಮುಖ್ಯ. ಸೂತ್ರಗಳನ್ನು ನೆನಪಿಸಿಕೊಂಡು ತಪ್ಪಿಲ್ಲದೆ ಬರೆಯುವುದನ್ನು ಅಭ್ಯಾಸ ಮಾಡಿ. ಪ್ರತಿ ಅಭ್ಯಾಸದಲ್ಲಿರುವ ಸಮಸ್ಯೆಗಳನ್ನು ಬರೆದುಕೊಂಡು ಸ್ವತಃ ಬಿಡಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ’ ಎಂದರು.

ಉದಾಸೀನ ಬೇಡ: ‘ಪರೀಕ್ಷೆ ಬಗ್ಗೆ ಉದಾಸೀನ ಬೇಡ. ಏಕಾಗ್ರತೆಯಿಂದ ಕಲಿತರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಹಕಾರಿಯಾಗುತ್ತದೆ. ಪಠಣ, ಮನನವು ವಿದ್ಯಾರ್ಥಿ ಜೀವನದಲ್ಲಿ ಅತ್ಯಗತ್ಯ. ವಿದ್ಯಾರ್ಥಿಗಳ ಆಲೋಚನೆ ಕೇವಲ ಕಲಿಕೆಯ ಕಡೆ ಇರಬೇಕು’ ಎಂದು ಕಿವಿಮಾತು ಹೇಳಿದರು.

‘ಈ ಬಾರಿ ಹೊಸ ಮಾದರಿ ಪ್ರಶ್ನೆಪತ್ರಿಕೆಯಾಗಿದ್ದು, ೨ ಅಂಕದ ಪ್ರಶ್ನೆಗಳು ಕಡಿಮೆ ಬರುತ್ತವೆ. ೩ ಅಂಕಗಳ ಪ್ರಶ್ನೆಗಳು ಹೆಚ್ಚಿರುತ್ತವೆ. ವಿಶೇಷವಾಗಿ ೫ ಅಂಕಗಳ ಪ್ರಶ್ನೆಗಳು ಇರುತ್ತವೆ. ಒಟ್ಟಾರೆಯಾಗಿ ಪ್ರಥಮ ಭಾಷೆಗೆ ೪೫ ಪ್ರಶ್ನೆಗಳು ಹಾಗೂ ಇತರೆಲ್ಲಾ ವಿಷಯಗಳಿಗೆ ೩೮ ಪ್ರಶ್ನೆಗಳು ಇರುತ್ತವೆ’ ಎಂದು ಮಾಹಿತಿ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ಶ್ವೇತಾ, ಸುಗುಣ, ಫರೀದಾ, ವೆಂಕಟರೆಡ್ಡಿ, ಸುನೀತಾ, ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.