ADVERTISEMENT

ಕೋಲಾರ: ಖಜಾನೆಗೆ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ರವಾನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 13:39 IST
Last Updated 21 ಮಾರ್ಚ್ 2020, 13:39 IST
ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಶನಿವಾರ ಕೋಲಾರಕ್ಕೆ ಸರಬರಾಜಾದ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಕೆಳಗಿಳಿಸಲಾಯಿತು.
ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಶನಿವಾರ ಕೋಲಾರಕ್ಕೆ ಸರಬರಾಜಾದ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಕೆಳಗಿಳಿಸಲಾಯಿತು.   

ಕೋಲಾರ: ಜಿಲ್ಲೆಯಾದ್ಯಂತ ಮಾರ್ಚ್‌ 27ರಿಂದ 70 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಬಿಗಿ ಬಂದೋಬಸ್ತ್‌ನಲ್ಲಿ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಶನಿವಾರ ನಗರಕ್ಕೆ ತರಲಾಯಿತು.

ತಾಲ್ಲೂಕುವಾರು ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿದ ಅಧಿಕಾರಿಗಳು ಪರಿಶೀಲನೆ ಮಾಡಿ ಬಂಡಲ್ ಮುದ್ರೆಗೆ ಯಾವುದೇ ಲೋಪವಾಗಿಲ್ಲ ಎಂಬುದನ್ನು ದೃಢಪಡಿಸಿಕೊಂಡರು. ಬಳಿಕ ಪೊಲೀಸ್‌ ಭದ್ರತೆಯಲ್ಲಿ ತಾಲ್ಲೂಕುವಾರು ಪ್ರಶ್ನೆಪತ್ರಿಕೆಗಳನ್ನು ಬೀಗಮುದ್ರೆ ಹಾಕಿದ ಪೆಟ್ಟಿಗೆಗಳಿಗೆ ತುಂಬಿಸಿ ಪ್ರತ್ಯೇಕ ವಾಹನದಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕಳುಹಿಸಿ ಕೊಡಲಾಯಿತು.

ಪ್ರಶ್ನೆಪತ್ರಿಕೆ ಸೋರಿಕೆಗೆ ಅವಕಾಶವಿಲ್ಲದಂತೆ ಕಟ್ಟೆಚ್ಚರ ವಹಿಸಿರುವ ಇಲಾಖೆ ಅಧಿಕಾರಿಗಳು ಮಾರ್ಗಾಧಿಕಾರಿಗಳ ನೇತೃತ್ವದಲ್ಲಿ ಬಂಡಲ್‌ಗಳನ್ನು ತಾಲ್ಲೂಕು ಖಜಾನೆಗಳಿಗೆ ತಲುಪಿಸಿದರು. ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಇರಿಸಿರುವ ತಾಲ್ಲೂಕು ಖಜಾನೆ ಕಚೇರಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ADVERTISEMENT

ಕೋಲಾರ ತಾಲ್ಲೂಕಿನ 17 ಪರೀಕ್ಷಾ ಕೇಂದ್ರಗಳ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ. ಉಳಿದಂತೆ ಬಂಗಾರಪೇಟೆಯ 11 ಕೇಂದ್ರ, ಮಾಲೂರಿನ 9 ಕೇಂದ್ರ, ಮುಳಬಾಗಿಲಿನ 11, ಕೆಜಿಎಫ್‌ನ 9, ಶ್ರೀನಿವಾಸಪುರದ 13 ಕ್ಷೇತ್ರಗಳ ಪ್ರಶ್ನೆಪತ್ರಿಕೆಗಳನ್ನು ಆಯಾ ತಾಲ್ಲೂಕು ಖಜಾನೆಗಳಲ್ಲಿ ಇಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್,ಬಿಇಒಗಳಾದ ಕೆ.ಎಸ್.ನಾಗರಾಜಗೌಡ, ಮಾಧವರೆಡ್ಡಿ, ಕೆಂಪಯ್ಯ, ಉಮಾದೇವಿ, ಸಿದ್ದರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.