ADVERTISEMENT

ಶಾಲೆ ಆರಂಭ: ಮಕ್ಕಳ ಆಹ್ವಾನಿಸಲು ಸಿದ್ಧರಾಗಿ- ಶಿಕ್ಷಣಾಧಿಕಾರಿ ಅಶೋಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 12:22 IST
Last Updated 13 ಮೇ 2022, 12:22 IST
ಶಾಲೆಗಳ ಆರಂಭೋತ್ಸವಕ್ಕೆ ಸಿದ್ಧತೆ ಕುರಿತು ಕೋಲಾರದಲ್ಲಿ ಶುಕ್ರವಾರ ನಡೆದ ಕ್ಷೇತ್ರ ಸಿಬ್ಬಂದಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿದರು
ಶಾಲೆಗಳ ಆರಂಭೋತ್ಸವಕ್ಕೆ ಸಿದ್ಧತೆ ಕುರಿತು ಕೋಲಾರದಲ್ಲಿ ಶುಕ್ರವಾರ ನಡೆದ ಕ್ಷೇತ್ರ ಸಿಬ್ಬಂದಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿದರು   

ಕೋಲಾರ: ‘ಶಾಲೆಗಳು ಮೇ 16ರಂದು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಯು ಶಾಲೆಗಳನ್ನು ಮೇ 15ರಂದು ಸ್ವಚ್ಛಗೊಳಿಸಿ ಆಕರ್ಷಣೀಯಗೊಳಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಕ್ಷೇತ್ರ ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ‘ಶಾಲಾಭಿವೃದ್ಧಿ ಸಮಿತಿ, ಪೋಷಕರು,ಶಿಕ್ಷಕರು ಜತೆಗೂಡಿ ಶಾಲೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಸಿಂಗರಿಸಬೇಕು. ಮೊದಲ ದಿನ ಮಕ್ಕಳನ್ನು ಆಹ್ವಾನಿಸಲು ಸಿದ್ಧರಿರಬೇಕು. ಪ್ರತಿ ಶಿಕ್ಷಕರು, ಸಿಬ್ಬಂದಿಯೂ ಶ್ರಮದಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

‘ಶಾಲಾ ಆರಂಭದ ಸಿದ್ಧತೆಗಳ ಕುರಿತು ಕ್ಷೇತ್ರ ಸಿಬ್ಬಂದಿ ಶಾಲೆಗಳಿಗೆ ಭೇಟಿ ನೀಡಿ ಗಮನ ಹರಿಸಬೇಕು. ಸರ್ಕಾರವು 2022-23 ಕಲಿಕಾ ಚೇತರಿಕಾ ವರ್ಷ ಆಚರಿಸುತ್ತಿದ್ದು, ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮೊದಲ ದಿನ ಪಾಠದ ಬದಲಿಗೆ ಮಕ್ಕಳಿಗೆ ವಿನೋದದೊಂದಿಗೆ ಖುಷಿಪಡಿಸಿ ಅವರು ಪ್ರೀತಿಯಿಂದ ಶಾಲೆಗೆ ಬರುವ ವಾತಾವರಣ ಸೃಷ್ಟಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಶಾಲಾ ವೇಳಾಪಟ್ಟಿ ತಯಾರಿಕೆ, ಶಿಕ್ಷಕರ ದಾಖಲೆಗಳ ಸಿದ್ಧತೆ ಸೇರಿದಂತೆ ಶಾಲಾ ಆರಂಭಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ದಾಖಲಾತಿ ಆಂದೋಲನ ನಡೆಸಿ. ಶಿಕ್ಷಕರ ಕಾರ್ಯವು ‌ಮತ್ತಷ್ಟು ಮಕ್ಕಳಿಗೆ ಕಾರ್ಯ ಪ್ರೇರಣೆ ನೀಡುವಂತಿರಲಿ’ ಎಂದರು.

ಮುಖ್ಯ ಶಿಕ್ಷಕರ ಸಭೆ: ‘ಶಾಲಾ ಪ್ರಾರಂಭೋತ್ಸವದ ಕುರಿತು ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಉದ್ದೇಶಕ್ಕೆ ಶನಿವಾರ (ಮೇ 14) ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ರಸ್ತೆಯ ಸೇಂಟ್‌ ಆನ್ಸ್‌ ಶಾಲೆಯಲ್ಲಿ ಸಭೆ ಕರೆಯಲಾಗಿದ್ದು, ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು’ ಎಂದು ಹೇಳಿದರು.

‘ಡಿಡಿಪಿಐ ಹಾಗೂ ಬಿಇಒ ನೇತೃತ್ವದ ತಂಡಗಳಿಂದ ಮಿಂಚಿನ ಸಂಚಾರ ನಡೆಯಲಿದೆ. ಮಿಂಚಿನ ಸಂಚಾರದ ತಂಡಗಳು ಜಿಲ್ಲೆಯಾದ್ಯಂತ ಶಾಲೆಗಳಿಗೆ ಭೇಟಿ ಕೊಟ್ಟು ಶಾಲಾ ಸ್ವಚ್ಛತೆ, ಶಾಲಾ ಪ್ರಾರಂಭೋತ್ಸವಕ್ಕೆ ಕೈಗೊಂಡಿರುವ ಕ್ರಮಗಳು, ದಾಖಲೆಗಳ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲಿವೆ’ ಎಂದು ಮಾಹಿತಿ ನೀಡಿದರು.

‘ಮಕ್ಕಳ ನಿರಂತರ ಹಾಜರಾತಿಗಾಗಿ ಶಿಕ್ಷಕರು ಮನೆ ಮನೆ ಭೇಟಿ ಕಾರ್ಯಕ್ರಮ ಹಾಕಿಕೊಳ್ಳಿ. ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿ, ಪೋಷಕರು, ಎಸ್‍ಡಿಎಂಸಿ ಸದಸ್ಯರ ಸಹಕಾರ ಪಡೆದು ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

‘ಶುಲ್ಕ ಪಾವತಿಸಿಲ್ಲ ಎಂದು ಮಕ್ಕಳನ್ನು ಮುಂದಿನ ತರಗತಿಗಳಿಗೆ ದಾಖಲಿಸಿಕೊಳ್ಳುವುದಿಲ್ಲ ಎಂದರೆ ಅದು ಅಪರಾಧವಾಗುತ್ತದೆ. ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದರೆ ಪಟ್ಟಿ ಮಾಡಿ. ಶಿಕ್ಷಕರ ಕೊರತೆ ಇದ್ದರೆ ಅತಿಥಿ ಶಿಕ್ಷಕರ ನೇಮಕಕ್ಕೆ ಇಲಾಖೆಗೆ ಮಾಹಿತಿ ರವಾನಿಸಿ’ ಎಂದು ತಿಳಿಸಿದರು.

‘ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ರಾಘವೇಂದ್ರ, ವೆಂಕಟಾಚಲಪತಿ, ಬಿಆರ್‌ಪಿ ಪ್ರವೀಣ್, ಇಸಿಒಗಳು, ಸಿಆರ್‌ಪಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.