ADVERTISEMENT

ಹುಸಿಯಾದ ನಿರೀಕ್ಷೆ: ಜನರಿಗೆ ನಿರಾಸೆ

ರಾಜ್ಯ ಬಜೆಟ್‌: ಪ್ರಾದೇಶಿಕ ಅಸಮಾನತೆಗೆ ಜಿಲ್ಲೆಯ ಜನ ಸಿಡಿಮಿಡಿ

ಜೆ.ಆರ್.ಗಿರೀಶ್
Published 8 ಮಾರ್ಚ್ 2021, 14:54 IST
Last Updated 8 ಮಾರ್ಚ್ 2021, 14:54 IST

ಕೋಲಾರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ 2021–22ನೇ ಸಾಲಿನ ರಾಜ್ಯ ಬಜೆಟ್‌ ಜಿಲ್ಲೆಯ ಜನರಿಗೆ ಕಹಿ ಅನುಭವ ನೀಡಿದೆ.

ಹಿಂದಿನ ವರ್ಷದ ಬಜೆಟ್‌ನಲ್ಲೂ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಯಡಿಯೂರಪ್ಪ ಅವರು ಈ ಬಾರಿಯೂ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗಿದ್ದು, ಆಯವ್ಯಯದಲ್ಲಿನ ಪ್ರಾದೇಶಿಕ ಅಸಮಾನತೆಗೆ ಜನ ಸಿಡಿಮಿಡಿಗೊಂಡಿದ್ದಾರೆ. ಬಜೆಟ್‌ನಲ್ಲಿ ಜಿಲ್ಲೆಯ ಪ್ರಸ್ತಾಪವೇ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಜ್ವಲಂತ ಸಮಸ್ಯೆಯಾದ ನೀರಿನ ಬವಣೆಯ ಪರಿಹಾರ, ಮಾವು ಹಾಗೂ ಟೊಮೆಟೊದಂತಹ ಬೇಗನೆ ಕೊಳೆಯುವ ತೋಟಗಾರಿಕಾ ಬೆಳೆಗಳು ಮತ್ತು ಅವುಗಳ ಉಪ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆ, ಹಾಲಿನ ಪ್ರೋತ್ಸಾಹಧನ ಹೆಚ್ಚಳದ ಬೇಡಿಕೆಗೆ ಬಜೆಟ್‌ನಲ್ಲಿ ಒತ್ತು ಸಿಗಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ.

ADVERTISEMENT

ಬರಪೀಡಿತ ಜಿಲ್ಲೆ ಕೋಲಾರದಲ್ಲಿ ಹನಿ ಹನಿ ನೀರಿಗೂ ತತ್ವಾರ. ಜಿಲ್ಲೆಯಲ್ಲಿ ಹಾಲಿಗೆ ಬರವಿಲ್ಲ. ಆದರೆ, ನೀರಿಗೆ ಬರ. ಹೀಗಾಗಿ ನೀರು ಇಲ್ಲಿನ ಪ್ರಮುಖ ಬೇಡಿಕೆ. ಆದರೆ, ಜಿಲ್ಲೆಯ ಜಲಕ್ಷಾಮದ ಪರಿಹಾರಕ್ಕೆ ಸರ್ಕಾರ ಬಜೆಟ್‌ನಲ್ಲಿ ಒತ್ತು ನೀಡದಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.

ವರುಣ ದೇವನ ಅವಕೃಪೆಯಿಂದ ನಲುಗಿರುವ ಜಿಲ್ಲೆಯ ನೀರಿನ ದಾಹ ತಣಿಸಲು ಜಾರಿಗೊಳಿಸಿರುವ ಎತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಎದುರಾಗಿರುವ ಸಮಸ್ಯೆ ಪರಿಹರಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದನ್ನು ಹೊರತುಪಡಿಸಿದರೆ ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆ ನೀಡಿಲ್ಲ.

ಈಗಾಗಲೇ ಪ್ರಗತಿಯಲ್ಲಿರುವ ಯರಗೋಳ್‌ ನೀರಾವರಿ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ವಿಷಯ ಪ್ರಸ್ತಾಪ ಮಾಡಿಲ್ಲ. ಜತೆಗೆ ಕೆ.ಸಿ ವ್ಯಾಲಿ ಯೋಜನೆ 2ನೇ ಹಂತದ ಕಾಮಗಾರಿ ಆರಂಭ ಮತ್ತು ನೀರಿನ 3ನೇ ಹಂತದ ಸಂಸ್ಕರಣೆಯ ಬೇಡಿಕೆಗೂ ಸರ್ಕಾರ ಸ್ಪಂದಿಸಿಲ್ಲ.

ಮಾವಿಗೆ ಸಿಗದ ಮನ್ನಣೆ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 49,425 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ವಾರ್ಷಿಕ ಸರಾಸರಿ ಮಾವು ಉತ್ಪಾದನೆ ಪ್ರಮಾಣ 4.22 ಲಕ್ಷ ಮೆಟ್ರಿಕ್‌ ಟನ್‌ ಇದೆ. 38,912 ಮಂದಿ ಬೆಳೆಗಾರರು ಮಾವು ಬೆಳೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಗೆ, ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಜಿಲ್ಲೆಯ ಮಾವು ರಫ್ತಾಗುತ್ತದೆ.

ಜಿಲ್ಲೆಯಲ್ಲಿ ಮಾವು ಸಂರಕ್ಷಣೆಗೆ ಶಿಥಲೀಕರಣ ಘಟಕ, ಮಾವು ಹಣ್ಣು ಮತ್ತು ಅದರ ಉಪ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪಿಸಬೇಕು ಎಂಬುದು ದಶಕದ ಬೇಡಿಕೆಯಾಗಿದೆ. ಆದರೆ, ಈ ಬೇಡಿಕೆಗೆ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿಲ್ಲ.

ಹೈನೋದ್ಯಮಕ್ಕೆ ಬಲವಿಲ್ಲ: ಹೈನುಗಾರಿಕೆಯೇ ಜೀವನಾಡಿಯಾಗಿರುವ ಜಿಲ್ಲೆಯಲ್ಲಿ ರೈತರು ಹಾಲಿನ ಪ್ರೋತ್ಸಾಹಧನ ಹೆಚ್ಚಳದ ನಿರೀಕ್ಷೆ ಇಟ್ಟುಕೊಂಡಿದ್ದರು. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, 2 ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಾಗಿ ರೈತರು ಕೃಷಿ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದು, ಹೈನುಗಾರಿಕೆಯು ರೈತ ಕುಟುಂಬಗಳ ಬೆನ್ನೆಲುಬಾಗಿದೆ.

ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ರೈತರ ಪ್ರಮುಖ ಆದಾಯ ಮೂಲವಾಗಿದೆ. ಜಿಲ್ಲೆಯಲ್ಲಿ ದಿನಕ್ಕೆ ಸದ್ಯ ಸುಮಾರು 5 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಸರ್ಕಾರವು ಸದ್ಯ ಪ್ರತಿ ಲೀಟರ್‌ ಹಾಲಿಗೆ ₹ 5 ಪ್ರೋತ್ಸಾಹಧನ ನೀಡುತ್ತಿದೆ. ಹಲವು ವರ್ಷಗಳಿಂದ ಪ್ರೋತ್ಸಾಹಧನ ಪರಿಷ್ಕರಿಸಿಲ್ಲ. 2019–20ನೇ ಸಾಲಿನ ಹಣಕಾಸು ವರ್ಷದಲ್ಲಿ ಪ್ರೋತ್ಸಾಹಧನವನ್ನು ₹ 6ಕ್ಕೆ ಹೆಚ್ಚಿಸಿದರೂ ಜಾರಿಯಾಗಲಿಲ್ಲ.

ಪ್ರಸಕ್ತ ಬಜೆಟ್‌ನಲ್ಲಿ ಲೀಟರ್‌ಗೆ ₹ 2 ಪ್ರೋತ್ಸಾಹಧನ ಹೆಚ್ಚಿಸಬೇಕೆಂದು ಹಾಲು ಒಕ್ಕೂಟವು ಸರ್ಕಾರಕ್ಕೆ ಮನವಿ ಮಾಡಿತ್ತು. ಹೈನೋದ್ಯಮಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ಬಜೆಟ್‌ನಲ್ಲಿ ಹಾಲಿನ ಪ್ರೋತ್ಸಾಹಧನ ಹೆಚ್ಚಿಸಬಹುದೆಂದು ಅನ್ನದಾತರು ಬಲವಾಗಿ ನಂಬಿದ್ದರು. ಆದರೆ, ಈ ನಂಬಿಕೆಗೆ ಸರ್ಕಾರ ತಣ್ಣೀರೆರಚಿದೆ.

ಟೊಮೆಟೊ ನಿರ್ಲಕ್ಷ್ಯ: ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದ್ದು, ಟೊಮೆಟೊ ಬೆಳೆಗಾರರಿಗೆ ಸುಸ್ಥಿರ ಮಾರುಕಟ್ಟೆ ಹಾಗೂ ಉತ್ತಮ ದರ ಒದಗಿಸಬೇಕೆಂಬ ಕೂಗು ಬಲವಾಗಿತ್ತು.

ಜಿಲ್ಲೆಯಲ್ಲಿ 8,800 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ವಾರ್ಷಿಕ ಸರಾಸರಿ ₹ 200 ಕೋಟಿ ಟೊಮೆಟೊ ವಹಿವಾಟು ನಡೆಯುತ್ತದೆ. ಬೆಲೆ ಕುಸಿತ, ಕೀಟಬಾಧೆಯಿಂದ ತತ್ತರಿಸಿರುವ ಟೊಮೆಟೊ ಬೆಳೆಗಾರರ ಸಂಕಷ್ಟಕ್ಕೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾ ಕೇಂದ್ರದಲ್ಲಿ ಟೊಮೆಟೊ ವಹಿವಾಟಿಗೆ ಪ್ರತ್ಯೇಕ ಮಾರುಕಟ್ಟೆ ಆರಂಭಿಸಬೇಕೆಂಬ ಮನವಿಗೂ ಸರ್ಕಾರ ಮಣಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.