ಕೋಲಾರ: ತಾಲ್ಲೂಕಿನ ಕೆ.ಬಿ.ಹೊಸಹಳ್ಳಿ ಭಾಗದಲ್ಲಿ ನಿಯಮ ಉಲ್ಲಂಘಿಸಿ ಬಂಡೆಗಳನ್ನು ತೀವ್ರ ಸ್ಫೋಟ ಮಾಡುತ್ತಿರುವುದರಿಂದ ಮನೆಗಳು ಬಿರುಕು ಬಿಟ್ಟು ತೊಂದರೆಯಾಗುತ್ತಿದ್ದು, ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರಾಂತ ರೈತ ಸಂಘದವರು ಹಾಗೂ ಗ್ರಾಮಸ್ಥರು ಗುರುವಾರ ಜಿಲ್ಲಾಡಳಿತ ಭವನ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ‘ನರಸಾಪುರ ಹೋಬಳಿಯ ಕೆ.ಬಿ.ಹೊಸಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ 110, 130 ರಲ್ಲಿ ಬಂಡೆಗಳನ್ನು ಸ್ಫೋಟ ಮಾಡಲು ನೀಡಿರುವ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮನಸ್ಸೋ ಇಚ್ಛೆ ರಾತ್ರಿ ಸಮಯದಲ್ಲಿ ತೀವ್ರ ಸ್ಫೋಟ ಮಾಡಲಾಗುತ್ತಿದೆ. ಈ ಭಾಗದ ಗ್ರಾಮದಲ್ಲಿ ಜನರು ನೆಮ್ಮದಿಯಿಂದ ಜೀವನ ಮಾಡಲು ಆಗುತ್ತಿಲ್ಲ. ಬಂಡೆ ಸ್ಫೋಟ ಮಾಡುವುದರಿಂದ ಮನೆಗಳು ಬಿರುಕು ಬಿಟ್ಟು ಮಳೆಗಾಲದಲ್ಲಿ ಸೋರುತ್ತಿವೆ. ಬೀಳುವ ಅಪಾಯದ ಸ್ಥಿತಿಯೂ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.
‘ಬಂಡೆಯ ಪಕ್ಕದಲ್ಲಿ ಅರಣ್ಯವಿದ್ದು, ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಬಂಡೆಯ ಕಲ್ಲಿನ ದೂಳಿನಿಂದ ರೈತರು ಯಾವುದೇ ರೀತಿಯ ತರಕಾರಿ ಮತ್ತು ರೇಷ್ಮೆ ಬೆಳೆಯಲು ಸಾದ್ಯವಾಗುತ್ತಿಲ್ಲ. ದನ-ಕರುಗಳ ಮೇವಿಗೂ ತುಂಬಾ ತೊಂದರೆಯಾಗುತ್ತಿದೆ’ ಎಂದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್ ಮಾತನಾಡಿ, ‘ಬಂಡೆ ಸ್ಫೋಟಿಸಿ ತೆಗೆಯುವ ಕಲ್ಲುಗಳನ್ನು ಟಿಪ್ಪರ್‌ಗಳ ಮೂಲಕ ಅಗತ್ಯಕ್ಕಿಂತ ಹೆಚ್ಚಿನ ಭಾರ ಹಾಕಿ ಊರಿನ ಮಧ್ಯೆ ರಸ್ತೆಗಳಲ್ಲಿ ಸಾಗಿಸುತ್ತಾರೆ. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಊರಿನ ಒಳಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಶಾಲೆಯಿದ್ದು ಮಕ್ಕಳು, ಮಹಿಳೆಯರು ಹೆಚ್ಚು ಓಡಾಡುತ್ತಾರೆ. ಅತೀ ವೇಗದಲ್ಲಿ ಟಿಪ್ಟರ್‌ಗಳು ಸಂಚರಿಸುವುದರಿಂದ ತೊಂದರೆಯಾಗುತ್ತೊದೆ’ ಎಂದು ಹೇಳಿದರು.
‘ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಸಂಘಟನೆ ಮತ್ತು ಗ್ರಾಮಸ್ಥರು ಎರಡು ಮೂರು ಬಾರಿ ಮನವಿ ಪತ್ರ ನೀಡಿದರೂ ಕ್ರಮವಾಗಿಲ್ಲ’ ಎಂದರು.
ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ಅವರಿಗೆ ಪ್ರತಿಭಟನಕಾರರು ಮನವಿ ಪತ್ರ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶಪ್ಪ, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮುಖಂಡರಾದ ವಿ.ವೆಂಕಟೇಶಪ್ಪ, ಕೆ.ಎಂ.ನಾರಾಯಣಸ್ವಾಮಿ, ಚಿನ್ನಮ್ಮ,ಅಪ್ಪಯ್ಯಣ್ಣ, ಮಂಜುಳಾ, ರಾಜೇಂದ್ರ, ಹರೀಶ್, ವಿಜಯ ರಾಘವರೆಡ್ಡಿ, ಮಂಜುನಾಥ್, ಚಂದ್ರಶೇಖರ್, ಚಂದ್ರಪ್ಪ, ವೆಂಕಟೇಶರೆಡ್ಡಿ, ನಾರಾಯಣರೆಡ್ಡಿ, ಶೈಲಜಾ, ಪ್ರಭಮ್ಮ, ರಾಜಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.