ADVERTISEMENT

ಉದ್ಘಾಟನೆ ಭಾಗ್ಯ ಕಾಣದ ‘ಗೃಹ’ಗಳು

2009- 10ರಲ್ಲಿ ಎನ್.ವಡ್ಡಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ತಲೆ ಎತ್ತಿದ ಕಟ್ಟಡಗಳು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 19:30 IST
Last Updated 12 ಮಾರ್ಚ್ 2020, 19:30 IST
ಎನ್.ವಡ್ಡಹಳ್ಳಿಯಲ್ಲಿ ಶಿಕ್ಷಕರಿಗಾಗಿ ನಿರ್ಮಿಸಿರುವ ಶಿಕ್ಷಕರ ವಸತಿ ಗೃಹಗಳ ಸುಸಜ್ಜಿತ ಕಟ್ಟಡದ ಹೊರನೋಟ
ಎನ್.ವಡ್ಡಹಳ್ಳಿಯಲ್ಲಿ ಶಿಕ್ಷಕರಿಗಾಗಿ ನಿರ್ಮಿಸಿರುವ ಶಿಕ್ಷಕರ ವಸತಿ ಗೃಹಗಳ ಸುಸಜ್ಜಿತ ಕಟ್ಟಡದ ಹೊರನೋಟ   

ನಂಗಲಿ: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವಸತಿ ಸೌಕರ್ಯಕ್ಕಾಗಿ ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಎನ್. ವಡ್ಡಹಳ್ಳಿಯಲ್ಲಿ 11 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಶಿಕ್ಷಕರ ವಸತಿ ಗೃಹಗಳಿಗೆ ಇದುವರೆಗೂ ಉದ್ಘಾಟನೆ ಭಾಗ್ಯವೇ ಸಿಕ್ಕಿಲ್ಲ.

ಇದುವರೆಗೂ ಯಾವೊಬ್ಬ ಶಿಕ್ಷಕರಿಗೂ ಗೃಹಗಳಲ್ಲಿ ವಾಸಿಸಲು ನೀಡಿಲ್ಲ. ಇದರಿಂದ ಕಟ್ಟಡಗಳು ದೂಳು ಹಿಡಿಯುತ್ತಿದ್ದು, ಹುಳು ಹುಪ್ಪಟೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿವೆ. ಈ ಮೂಲಕ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ವ್ಯರ್ಥವಾಗುತ್ತಿದೆ.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ದೂರದ ಊರುಗಳಿಂದ ಶಾಲೆಗಳಿಗೆ ಓಡಾಡುವ ಸಮಸ್ಯೆ ತಪ್ಪಿಸಲು 2009- 10ನೇ ಸಾಲಿನಲ್ಲಿ ಎನ್.ವಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಾಣ ಮಾಡಿರುವ ವಸತಿ ಗೃಹಗಳು ಕಟ್ಟಡ ಸುಸಜ್ಜಿತವಾಗಿ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದ್ದರೂ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ADVERTISEMENT

ಕಟ್ಟಡದಲ್ಲಿನ ಎಲ್ಲ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಒಡೆದ ಕಿಟಕಿ ಸಂಧಿಗಳಿಂದ ಕಸ ಕಡ್ಡಿಯನ್ನು ಹಾಕಿದ್ದಾರೆ. ಕಟ್ಟಡದ ಕಾಂಪೌಂಡಿನ ಒಳಗೆ ಸುತ್ತಲಿನ ಸ್ಥಳೀಯ ನಿವಾಸಿಗಳು ಕಸವನ್ನು ಸುರಿದಿದ್ದಾರೆ ಮತ್ತು ವಸತಿ ಗೃಹಗಳಿಗಾಗಿ ನಿರ್ಮಾಣ ಮಾಡಿರುವ ನೀರಿನ ಸಂಪಿನ ಮುಚ್ಚಳವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ.

ಹಾಗಾಗಿ ಸಂಪಿನ ಬಾಯಿ ತೆರೆದುಕೊಂಡಿದ್ದು, ಸಂಪಿನ ಒಳಗೆ ಕಲ್ಲುಗಳನ್ನು ಹಾಕಿದ್ದಾರೆ. ಕಟ್ಟಡದ ಪಕ್ಕದಲ್ಲಿಯೇ ಟೊಮೆಟೊ ಮಾರುಕಟ್ಟೆ ಇದ್ದು, ಮಾರುಕಟ್ಟೆಯಲ್ಲಿನ ಕಸವನ್ನು ಕಾಂಪೌಂಡಿನ ಒಳಗೆ ಸುರಿದಿದ್ದಾರೆ.

ಇನ್ನು ಇದೇ ಕಟ್ಟಡದ ಕಾಂಪೌಂಡಿನ ಆವರಣದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇದ್ದು ನೂರಾರು ವಿದ್ಯಾರ್ಥಿಗಳು ಪ್ರತಿದಿನ ಇದೇ ಕಟ್ಟಡದ ಬಳಿ ಓಡಾಡುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.