ADVERTISEMENT

ರಸ್ತೆ ಅವ್ಯವಸ್ಥೆ ಖಂಡಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 15:39 IST
Last Updated 11 ಸೆಪ್ಟೆಂಬರ್ 2019, 15:39 IST
ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಕೋಲಾರದಲ್ಲಿ ಬುಧವಾರ ಧರಣಿ ನಡೆಸಿದರು.
ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಕೋಲಾರದಲ್ಲಿ ಬುಧವಾರ ಧರಣಿ ನಡೆಸಿದರು.   

ಕೋಲಾರ: ನಗರದ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಎಂ.ಬಿ.ರಸ್ತೆಯಲ್ಲಿ ಬುಧವಾರ ರಸ್ತೆ ತಡೆ ಮಾಡಿ ಧರಣಿ ನಡೆಸಿದರು.

‘ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಯು ನಗರವಾಸಿಗಳಿಗೆ ಶಾಪವಾಗಿದೆ. ಕಾಮಗಾರಿಗಾಗಿ ರಸ್ತೆಗಳನ್ನು ಮನಸೋಇಚ್ಛೆ ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಒಳಚರಂಡಿ ಕಾಮಗಾರಿ ಹಾಗೂ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗಳು ತುಂತುರು ಮಳೆಗೂ ರಾಡಿಯಾಗುತ್ತಿವೆ. ಗುಂಡಿಮಯ ರಸ್ತೆಗಳಿಂದ ನಗರ ಸೌಂದರ್ಯ ಹಾಳಾಗಿದ್ದು, ದೂಳಿನ ಆರ್ಭಟ ಹೆಚ್ಚಿದೆ. ನಗರವಾಸಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಬವಣೆ ಪಡುವಂತಾಗಿದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್ ತ್ಯಾಗರಾಜ್ ದೂರಿದರು.

ADVERTISEMENT

‘ಗುಂಡಿಮಯ ರಸ್ತೆಗಳು ಜನರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ. ಅಧಿಕಾರಿಗಳು ನೆಪಕ್ಕೆ ಗುಂಡಿಗಳಿಗೆ ಜಲ್ಲಿ ಪುಡಿ ಹಾಗೂ ಮಣ್ಣು ಸುರಿಸಿ ರಸ್ತೆಗೆ ಡಾಂಬರು ಹಾಕಿರುವುದಾಗಿ ಬಿಲ್‌ ಮಂಜೂರು ಮಾಡಿದ್ದಾರೆ. ಈ ಅಕ್ರಮದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕೋಟಿಗಟ್ಟಲೆ ಹಣ ದೋಚಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ಜಿಲ್ಲಾಧಿಕಾರಿಯು ಈ ಹಿಂದೆ ಒಂದು ತಿಂಗಳೊಳಗೆ ರಸ್ತೆಗಳನ್ನು ದುರಸ್ತಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರ ಭರವಸೆ ಹುಸಿಯಾಗಿದೆ. ರಸ್ತೆ ದುರಸ್ತಿ ಮಾಡದ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಬಾರದು. ರಸ್ತೆಗಳಿಗೆ ಶೀಘ್ರವೇ ಡಾಂಬರು ಹಾಕಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಂ.ಎನ್,ಮಂಜುನಾಥ್, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ಕೆ.ದಿನೇಶ್‌ಗೌಡ, ಪ್ರಧಾನ ಕಾರ್ಯದರ್ಶಿ ಗಜೇಂದ್ರ ಕುಮಾರ್, ಜಂಟಿ ಕಾರ್ಯದರ್ಶಿ ಜಗದೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.