ADVERTISEMENT

ಹಲ್ಲಿ ಬಿದ್ದ ಚಿತ್ರಾನ್ನ ತಿಂದು ವಿದ್ಯಾರ್ಥಿಗಳು ಅಸ್ವಸ್ಥ

ಸರ್ಕಾರಿ ಕಾನೂನು ಕಾಲೇಜು ಹಾಸ್ಟೆಲ್‌: 38 ಮಂದಿ ಜಿಲ್ಲಾಸ್ಪತ್ರೆ ದಾಖಲು; ಚಿಕಿತ್ಸೆ, ಗುಣಮುಖ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 6:17 IST
Last Updated 20 ಅಕ್ಟೋಬರ್ 2022, 6:17 IST
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಕಾನೂನು ವಿದ್ಯಾರ್ಥಿಗಳು ಚಿಕಿತ್ಸೆ ಪಡೆದರು
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಕಾನೂನು ವಿದ್ಯಾರ್ಥಿಗಳು ಚಿಕಿತ್ಸೆ ಪಡೆದರು   

ಕೋಲಾರ: ತಾಲ್ಲೂಕಿನ ದೊಡ್ಡಹಸಾಳ ಸಮೀಪದ ಸರ್ಕಾರಿ ಕಾನೂನು ಕಾಲೇಜು ಹಾಸ್ಟೆಲ್‌ನಲ್ಲಿ ಬುಧವಾರ ಬೆಳಿಗ್ಗೆ ಹಲ್ಲಿ ಬಿದ್ದಿದ್ದ ಚಿತ್ರಾನ್ನ ತಿಂದ ಪರಿಣಾಮ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾದರು.

32 ವಿದ್ಯಾರ್ಥಿಗಳು ಹಾಗೂ6 ಮಂದಿ ಅಡುಗೆಯವರು ತಿಂಡಿ ತಿಂದಿದ್ದಾರೆ. ಅವರಲ್ಲಿ ಮೂವರು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಎಲ್ಲರನ್ನೂಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ ಚೇತರಿಸಿಕೊಂಡು ಹಾಸ್ಟೆಲ್‌ಗೆ ತೆರಳಿದರು.

ತಿಂಡಿ ತಿಂದು ಕೆಲವರಿಗೆ ವಾಂತಿಯಾದರೆ, ಇನ್ನು ಕೆಲ ವಿದ್ಯಾರ್ಥಿಗಳಿಗೆ ಸುಸ್ತಿನ ಅನುಭವವಾಯಿತು. ಭಯ, ಆತಂಕಕ್ಕೆ ಒಳಗಾದರು.

ADVERTISEMENT

‘ಚಿತ್ರಾನ್ನದಲ್ಲಿ ಹಲ್ಲಿ ಬಿದ್ದಿರುವುದನ್ನು ವಿದ್ಯಾರ್ಥಿಗಳು ತೋರಿಸಿದರು. ಆಹಾರ ನಿರೀಕ್ಷಕರು ತೆರಳಿ ಆಹಾರ ಮಾದರಿ ಸಂಗ್ರಹಿಸಿದ್ದಾರೆ. ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ಳಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್‌ನಲ್ಲಿ ಅರಹಳ್ಳಿ ಸರ್ಕಾರಿ ಕಾನೂನು ಕಾಲೇಜು ಹಾಗೂ ಬಸವಶ್ರೀ ಕಾನೂನು ಕಾಲೇಜಿನ 60 ವಿದ್ಯಾರ್ಥಿಗಳಿದ್ದು, ಪರೀಕ್ಷೆ ಕೂಡ ನಡೆಯುತ್ತಿದೆ. ಪರೀಕ್ಷೆ ಬರೆಯುವ 30ಕ್ಕೂ ಅಧಿಕ ವಿದ್ಯಾರ್ಥಿಗಳು ತಿಂಡಿ ತಿಂದು ಬೇಗನೇ ಕಾಲೇಜಿಗೆ ತೆರಳಿದ್ದಾರೆ.

ಒಬ್ಬೊಬ್ಬರಿಗೆ ವಾಂತಿ ಶುರುವಾಗಿದ್ದು, ಅಡುಗೆ ಮಾಡಿದ್ದ ಪಾತ್ರೆಯಲ್ಲಿ ನೋಡಲಾಗಿ ಹಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ವಾರ್ಡನ್ ಹಾಗೂ ಅಡುಗೆಯವರ ಗಮನಕ್ಕೆ ತಂದರು.

‘ಹಾಸ್ಟೆಲ್‍ನಲ್ಲಿನ ಅವ್ಯವಸ್ಥೆಗಳ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ಪರೀಕ್ಷೆ ಸಮಯದಲ್ಲಿ ಇಂತಹ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಇನ್ನು ಮುಂದಾದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳಲಿ’ ಎಂದು ಕಾನೂನು ವಿದ್ಯಾರ್ಥಿ ಹಾಗೂ ಎಸ್‍ಎಫ್‍ಐ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಆಗ್ರಹಿಸಿದ್ದಾರೆ.

ಮೇಲ್ವಿಚಾರಕ ಅಮಾನತು

ಹಾಸ್ಟೆಲ್‌ನ ಮೇಲ್ವಿಚಾರಕ ಸಿ.ವಿ.ಅಶ್ವಿನ್‌ ಕುಮಾರ್‌ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಅಮಾನತುಗೊಳಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ್ದಕ್ಕೆ ಈ ಕ್ರಮ ಕೈಗೊಂಡಿದ್ದಾರೆ. ಅಡುಗೆ ಸಿಬ್ಬಂದಿ ಬಾಲಕೃಷ್ಣ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.