ADVERTISEMENT

ಅಸಂಘಟಿತ ಕಾರ್ಮಿಕರಿಗೆ ಸಹಾಯಧನ: ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 10:50 IST
Last Updated 15 ಜೂನ್ 2021, 10:50 IST

ಕೋಲಾರ: ಕೋವಿಡ್ 2ನೇ ಅಲೆ ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ಸಹಾಯಧನಕ್ಕೆ ಅಸಂಘಟಿತ ವಲಯದ ಕಾರ್ಮಿಕರು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಸಂಘಟಿತ ವಲಯದ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಹಮಾಲರು, ಕಮ್ಮಾರರು, ಟೈಲರ್‌ಗಳು, ಮೆಕ್ಯಾನಿಕ್‌ಗಳು, ಚಿಂದಿ ಆಯುವವರು, ಅಕ್ಕಸಾಲಿಗರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರಿಗೆ ₹ 2 ಸಾವಿರ ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

2020ನೇ ಸಾಲಿನಲ್ಲಿ ನೆರವು ಪಡೆಯದ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಕುಟುಂಬದ ಒಬ್ಬ ಕಾರ್ಮಿಕರು ಅರ್ಜಿ ಸಲ್ಲಿಸಬಹುದು. ಆದರೆ, ಪ್ರಸಕ್ತ ಸಾಲಿನಲ್ಲಿ ಒಂದು ಬಾರಿ ನೆರವು ಪಡೆದ ಅಗಸರು ಮತ್ತು ಕ್ಷೌರಿಕ ಫಲಾನುಭವಿ ಕುಟುಂಬಗಳು ಮತ್ತೊಮ್ಮೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ಇದೇ ಸಾಲಿನಲ್ಲಿ ಈಗಾಗಲೇ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಅರ್ಜಿ ಸಲ್ಲಿಸಿ ನೊಂದಣಿಯಾದ ಬಿಪಿಎಲ್‌ ಕುಟುಂಬದ ಅಸಂಘಟಿತ ಕಾರ್ಮಿಕರು ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

18 ವರ್ಷದಿಂದ 65 ವರ್ಷದೊಳಗಿರುವ ಮತ್ತು ಬಿಪಿಎಲ್‌ ಪಡಿತರಚೀಟಿ ಹೊಂದಿರುವ ಅಸಂಘಟಿತ ವಲಯದ ವರ್ಗದ ಕುಟುಂಬದ ಒಬ್ಬ ಸದಸ್ಯರು ಮಾತ್ರ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರಬೇಕು), ವಿಳಾಸ ದೃಢೀಕರಣದ ಅಧಿಕೃತ ದಾಖಲೆ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ನಮೂದಿಸಿರುವ ಪ್ರಮಾಣಪತ್ರ, ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಬ್ಯಾಂಕ್ ಖಾತೆ ವಿವರ (ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಸಂಖ್ಯೆ, ಖಾತೆದಾರರ ಹೆಸರು, ಬ್ಯಾಂಕ್ ಹೆಸರು ಮತ್ತು ಶಾಖೆ) ಸಲ್ಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಅರ್ಜಿದಾರರ ವೃತ್ತಿಯ ಕುರಿತು ಕಂದಾಯ ಅಧಿಕಾರಿ ಅಥವಾ ಕಂದಾಯ ನಿರೀಕ್ಷಕರು, ತಹಶೀಲ್ದಾರ್‌ ಅಥವಾ ಉಪ ತಹಶೀಲ್ದಾರ್‌ಗಳು, ಕಾರ್ಮಿಕ ಅಧಿಕಾರಿಗಳು ಅಥವಾ ಕಾರ್ಮಿಕ ನಿರೀಕ್ಷಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಯಾವುದೇ ಇಲಾಖೆ ಪತ್ರಾಂಕಿತ ಅಧಿಕಾರಿಗಳು ದೃಢೀಕರಿಸಿದ ಉದ್ಯೋಗ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ವಿವರಿಸಿದ್ದಾರೆ.

ಹಮಾಲಿ ವೃತ್ತಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರು ಮೇಲೆ ತಿಳಿಸಲಾದ ಅಧಿಕಾರಿಗಳು ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಇಲಾಖೆ, ಮಂಡಳಿ ಅಥವಾ ನಿಗಮದ ಅಧಿಕೃತ ಅಧಿಕಾರಿಗಳಿಂದ ಉದ್ಯೋಗ ಪ್ರಮಾಣಪತ್ರ ಪಡೆದು ಕಡ್ಡಾಯವಾಗಿ ಅಪ್‌ಲೋಡ್‌ ಮಾಡಬೇಕು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಸೇವಾಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಪತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.