ADVERTISEMENT

ಕೋಲಾರ: ಮಹಿಳೆಗೆ ಹೃದಯ ಕಸಿ ಯಶಸ್ವಿ

ಆಟಗಾರ್ತಿಯಾಗಿದ್ದ ಚೇತನಾಗೆ ಹೆರಿಗೆ ಬಳಿಕ ಹೃದಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:04 IST
Last Updated 8 ಜನವರಿ 2026, 7:04 IST
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚೇತನಾ ಹಾಗೂ ಮಣಿಪಾಲ ಆಸ್ಪತ್ರೆಯ ವೈದ್ಯರು ಮಾತನಾಡಿದರು
ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚೇತನಾ ಹಾಗೂ ಮಣಿಪಾಲ ಆಸ್ಪತ್ರೆಯ ವೈದ್ಯರು ಮಾತನಾಡಿದರು   

ಕೋಲಾರ: ಬ್ಯಾಸ್ಕೆಟ್‌ಬಾಲ್‌, ಕಾರ್ಫ್‌ಬಾಲ್‌ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದ ತಾಲ್ಲೂಕಿನ ಕಾಮದೇನಹಳ್ಳಿಯ 29 ವರ್ಷದ ಚೇತನಾ ಎಂಬುವರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಗಿದೆ.

ಹೆರಿಗೆಯ ಐದು ತಿಂಗಳ ನಂತರ ಉಸಿರಾಟ ತೊಂದರೆಯಾಗಿ ರಾತ್ರಿ ವೇಳೆ ಹೃದಯ ಸಮಸ್ಯೆ (ಕಾರ್ಡಿಯೋಜೆನಿಕ್ ಅಘಾತ) ಉಂಟಾಗಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ಕೋಲಾರದ ನಾರಾಯಣ ಹೃದಯಾಲಯದಲ್ಲಿ ಡಾ.ಯಶ್ವಂತ್ ಅವರಿಂದ ಚಿಕಿತ್ಸೆ ಪಡೆದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಮಹಿಳೆಯ ಸ್ಥಿತಿ ಅವಲೋಕಿಸಿದ ವೈದ್ಯರು ವರ್ಷದ ಹಿಂದೆ ಹೃದಯ ಕಸಿ ಮಾಡುವ ನಿರ್ಧಾರಕ್ಕೆ ಬಂದರು. ಸಂಬಂಧಿಕರ ಅನುಮತಿ ಪಡೆದು ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಹೃದಯ ದಾನ ಪಡೆದು ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಚೇತನಾ ಕೃಷಿ ಪದವೀಧರೆಯಾಗಿದ್ದು ರಾಷ್ಟ್ರೀಯ ಮಟ್ಟದ ಕಾರ್ಫ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಕೂಡ. ಚೇತರಿಸಿಕೊಂಡು ಅವರು ಹೊರಗಡೆ ಕಾಲಿಟ್ಟಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತಮ ಚಿಕಿತ್ಸೆ ಪಡೆದು ವೈದ್ಯರ ಮಾರ್ಗದರ್ಶನ ಪಾಲನೆ ಮಾಡಿದ್ದರಿಂದ ಸಾಕಷ್ಟು ಚೇತರಿಸಿಕೊಂಡಿದ್ದೇನೆ. ನನ್ನ ಮಗುವನ್ನು ಆರೈಕೆ ಮಾಡಲು ಮತ್ತು ಮರಳಿ ಕೃಷಿ ಇಲಾಖೆ ಜೊತೆಗೂಡಿ ಕೆಲಸ ನಿರ್ವಹಿಸುವಷ್ಟು ಸುಧಾರಣೆಯಾಗಿದ್ದೇನೆ’ ಎಂದರು.

ಯಾರೋ ದಾನಿಗಳು ಅಂಗಾಂಗ ದಾನ ಮಾಡಿದ್ದರಿಂದ ನಾನು ಇಂದು ತಮ್ಮ ಮುಂದೆ ಇರುವಂತಾಗಿದೆ. ಅಂಗಾಂಗ ದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಮಣಿಪಾಲ್ ಆಸ್ಪತ್ರೆಯ ಡಾ.ದೇವಾನಂದ್ ಎನ್.ಎಸ್. ಮಾತನಾಡಿ, ‘ಅಂಗಾಂಗ ದಾನ ಮಾಡುವುದು ಅಗತ್ಯ. ಮತ್ತಷ್ಟು ಜನರಿಗೆ ಜೀವದಾನ ಸಿಗುತ್ತದೆ. ನಾಲ್ಕಾರು ಜನರಿಗೆ ಉಪಯೋಗವಾಗುತ್ತದೆ. ಬದುಕಿರುವವರು ಕಿಡ್ನಿ, ಯಕೃತ್ ದಾನ ಮಾಡಬಹುದು. ಆದರೆ ಹೃದಯ,‌ ಶ್ವಾಸಕೋಶವನ್ನು ಜೀವಂತ ವ್ಯಕ್ತಿಗಳು ಕೊಡಲು ಆಗದು. ಮೆದುಳು ನಿಷ್ಕ್ರಿಯ ಆಗಿರುವವರು ದಾನ ಮಾಡಬಹುದು’ ಎಂದರು.

ಒಮ್ಮೆ ಹೃದಯ ವಿಫಲವಾದರೆ ಇತರೆ ಅಂಗಾಂಗಳು ಕೂಡ ಬೇಗ ಹಾನಿಯಾಗುತ್ತವೆ. ಈ ಸಂದರ್ಭದಲ್ಲಿ ಕಸಿ ಮಾಡುವ ಮೂಲಕ ಜೀವ ಉಳಿಸುವ ಏಕೈಕೆ ಅವಕಾಶವಾಗಿದೆ. ಹೃದಯ ಕಸಿ ಬಳಿಕ ಮುಂದೆ ಎಚ್ಚರಿಕೆಯಿಂದ ಇರಬೇಕು. ಸೋಂಕು ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆಯ ಡಾ.ಸುನಿಲ್ ಕಾರಂತ್, ಡಾ.ಭಾಸ್ಕರ್ ಮಾತನಾಡಿ, ‘ಚೇತನಾ ಅವರಲ್ಲಿ ಮಾನಸಿಕ ಸ್ಥೈರ್ಯ ಇತ್ತು‌. ಬೇರೆ ಆಸ್ಪತ್ರೆಯಲ್ಕಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯ ತಂದು ಒಂದೂವರೆ ಗಂಟೆಯಲ್ಲಿ ಕಸಿ ಮಾಡಿದೆವು. ಒಂದು ತಿಂಗಳ ಬಳಿಕ ನಡೆಯಲು ಶುರು‌ಮಾಡಿದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.