ADVERTISEMENT

ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಬೇಸಿಗೆ ಶಿಬಿರಕ್ಕೆ ತೆರೆ, 171 ಮಕ್ಕಳು ಭಾಗಿ

​ಪ್ರಜಾವಾಣಿ ವಾರ್ತೆ
Published 15 ಮೇ 2025, 11:46 IST
Last Updated 15 ಮೇ 2025, 11:46 IST
ಕೋಲಾರದ ಆದಿಮದಲ್ಲಿ ನಡೆದ ಚುಕ್ಕಿಮೇಳ ಸಮಾರೋಪದಲ್ಲಿ ಜಿಲ್ಲಾಧಿಕಾರಿ ಎಂ.ಆರ್‌.ರವಿ ಮಾತನಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಆದಿಮ ಅಧ್ಯಕ್ಷ ಎನ್‌.ಮುನಿಸ್ವಾಮಿ ಪಾಲ್ಗೊಂಡಿದ್ದರು
ಕೋಲಾರದ ಆದಿಮದಲ್ಲಿ ನಡೆದ ಚುಕ್ಕಿಮೇಳ ಸಮಾರೋಪದಲ್ಲಿ ಜಿಲ್ಲಾಧಿಕಾರಿ ಎಂ.ಆರ್‌.ರವಿ ಮಾತನಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಆದಿಮ ಅಧ್ಯಕ್ಷ ಎನ್‌.ಮುನಿಸ್ವಾಮಿ ಪಾಲ್ಗೊಂಡಿದ್ದರು    

ಕೋಲಾರ: ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದ ಮಕ್ಕಳ ಬೇಸಿಗೆ ಶಿಬಿರ ‘ಚುಕ್ಕಿಮೇಳ -2025’ ಸಂಭ್ರಮ ಸಡಗರಗಳೊಂದಿಗೆ, ಹಾಡು ಕುಣಿತದೊಂದಿಗೆ ಮುಕ್ತಾಯಗೊಂಡಿತು.

ವಿಷವ ಬಿತ್ತಿ ಅಮೃತ ಬೆಳೆಯಲುಂಟೆ..? ಎಂಬ ಶೀರ್ಷಿಕೆಯಲ್ಲಿ 17 ದಿನ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳ ಕಲಿಕೆ ಹಾಗೂ ಪ್ರದರ್ಶನ ನಡೆಯಿತು. 171 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಹೂಸ್ಬಾಬು, ಸ್ವೀಟ್ ಸೆವೆಂಟಿ, ಭೂಮಿ ಹುಳ ನಾಟಕಗಳು ಈ ಅವಧಿಯಲ್ಲಿ ಪ್ರದರ್ಶನಗೊಂಡವು. ಚಕ್ಕೆ ಜಡೆ- ಕೋಲಾಟ, ರಂಗ ಕುಣಿತ, ಪಟ ಕುಣಿತ, ಪೂಜಾ ಕುಣಿತ, ಸೂತ್ರದ ಗೊಂಬೆ, ಕಂಸಾಳೆ, ತಮಟೆ ಮತ್ತು ನಗಾರಿ ವಾದನ ಕಲಾ ಪ್ರಕಾರಗಳ ಪ್ರದರ್ಶನವಾಯಿತು. ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಆದಿಮ ರಂಗ ವೇದಿಕೆಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ADVERTISEMENT

ಸಮಾರೋಪದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಎಂ.ಆರ್. ರವಿ, ‘ಮಕ್ಕಳ ಜೊತೆಗೂಡಿ ಈ ಬೆಟ್ಟದ ಮೇಲೆ ಆದಿಮ ಒಂದು ಪವಾಡವನ್ನೇ ಸೃಷ್ಟಿಸಿದೆ. ಪವಾಡ ಎಂದರೆ ರಾತ್ರೋರಾತ್ರಿ ಅದೇನೇನೊ ಸೃಷ್ಟಿಸುತ್ತಾರಲ್ಲ ಅದಲ್ಲ; ಮಕ್ಕಳು ಆದಿಮ ಪರಿಸರದಲ್ಲಿ ಗಳಿಸಿರುವ ಶಕ್ತಿಯನ್ನು ಪರೀಕ್ಷಿಸಿ ಹೇಳಿದ್ದೇನೆ’ ಎಂದರು.

‘ಮಕ್ಕಳು ಪೋಷಕರಿಗೆ ಎಂದಿಗೂ ಹೊರೆಯಲ್ಲ. ಮಕ್ಕಳ ಬೆಳವಣಿಗೆಯನ್ನು ನೋಡುತ್ತಾ ಪೋಷಕರು ಬೆಳೆಯಬೇಕಿದೆ. ನಗರ ಪ್ರದೇಶಗಳ ಉದ್ಯೋಗಸ್ಥ ಪೋಷಕರು ಮಕ್ಕಳೊಂದಿಗೆ ಇರುವುದು ವಾರಾಂತ್ಯದಲ್ಲಿ ಮಾತ್ರ. ಸನ್‌ಡೇ ಮದರ್, ಸನ್‌ಡೇ ಫಾದರ್ ಥರ ಇರುತ್ತಾರೆ. ಹೋಟೆಲ್‍ಗಳಲ್ಲಿ, ಮಾಲ್‍ಗಳಲ್ಲಿ ಸಿಗುವ ತಿಂಡಿ ತಿಂದು ಅಜೀರ್ಣವಾಗಿಸಿಕೊಳ್ಳುತ್ತಾರೆ. ಇಂತಹ ಕಾಲದಲ್ಲಿ ಆದಿಮ ಮಕ್ಕಳನ್ನು ಪ್ರಕೃತಿಯ ಮಡಿಲಲ್ಲಿ ಆಟ ಪಾಠದೊಂದಿಗೆ ಕುಣಿದು ಕುಪ್ಪಳಿಸಿ, ಬೀಳು ಏಳುಗಳು ಇವೆಯೆಲ್ಲಾ ಅದು ನಿಜವಾದ ಬದುಕು ಮತ್ತು ಜೀವನ’ ಎಂದು ಹೇಳಿದರು.

‘ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಅಷ್ಟು ಸರಿಯಲ್ಲ. ಮಕ್ಕಳು ಹೂಗಳಂತೆ ಬೆಳೆಯಲು ಬಿಡಿ, ಅವರಿಗೆ ಆಸಕ್ತಿ ಇರುವ ಕ್ಷೇತ್ರ ಯಾವುದು ಎನ್ನುವುದನ್ನು ಕಂಡುಕೊಂಡು ಆ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿ’ ಎಂದು ಸಲಹೆ ನೀಡಿದರು.

‌‘ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎನ್ನುವುದು ಎಷ್ಟು ಸರಿ? ಮಕ್ಕಳು ಸರಕುಗಳಲ್ಲ, ಬರೀ ಅಂಕ ಗಳಿಕೆಯಷ್ಟೇ ಅಲ್ಲ, ನೌಕರಿಗೆ ಸೇರುವುದೇ ಮುಖ್ಯ ಅಲ್ಲ, ಲಕ್ಷ ಲಕ್ಷ ಸಂಬಳ ಮುಖ್ಯ ಆಗಲ್ಲ. ಮಕ್ಕಳು ಕಷ್ಟ ಕಾಲಕ್ಕೆ ಆಗುವರೇ ಎನ್ನುವುದು ಮುಖ್ಯ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಮಾತನಾಡಿ, ‘ಆದಿಮ ಪರಿಸರದಲ್ಲಿ ಚಿಗುರೊಡೆಯುವ ಒಂದೊಂದು ಮರ ಗಿಡಕ್ಕೂ ವಿಶೇಷ ಶಕ್ತಿ ಇದೆ. ಹಾಗೆಯೇ ಮಕ್ಕಳಲ್ಲಿಯೂ ಒಂದೊಂದು ಶಕ್ತಿ ಇರುತ್ತದೆ. ಮಕ್ಕಳು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡಾಗ ಬದುಕಿನ ನಿಜವಾದ ಅರ್ಥ ಅರಿಯುತ್ತಾರೆ’ ಎಂದು ಹೇಳಿದರು.

‘ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಪೋಷಕರಿಗೆ ಹೆಲ್ಮೆಟ್ ಧರಿಸುವಂತೆ ಹಟ ಹಿಡಿದು ಹೇಳಿ’ ಎಂದು ಶುಭ ಕೋರಿದರು.

ಆದಿಮ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ, ‘ಶಿಬಿರಕ್ಕೆ ಪೂರ್ವ ನಾಟಕ ರಚನಾ ಕಮ್ಮಟ ಹಮ್ಮಿಕೊಳ್ಳಲಾಗಿತ್ತು. ಆ ಮೂಲಕ ಮೂರು ನಾಟಕಗಳು ಪ್ರದರ್ಶನಗೊಂಡಿವೆ. ಇದೇ ಸಂದರ್ಭದಲ್ಲಿ ಆದಿಮದ ಒಡನಾಡಿ, ರಂಗ ಸಂಗೀತ ದಿಗ್ಗಜ ಇಸ್ಮಾಯಿಲ್ ಗೊನಾಳರ ಹೆಸರಿನಲ್ಲಿ ಆಂಧ್ರದ ಸುರಭಿ ಥಿಯೇಟರ್‌ಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತು. ಮುಂದಿನ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು’ ಎಂದರು.

ಶಿಬಿರದ ನಿರ್ದೇಶಕ ಕೆ.ವಿ.ನಾಯಕ್ (ಅಮಾಸ) ಶಿಬಿರದ ಕುರಿತು ಮಾಹಿತಿ ಹಂಚಿಕೊಂಡರು. ಆದಿಮ ಆಶಯ ಗೀತೆಯನ್ನು ಡಿ.ಆರ್.ರಾಜಪ್ಪ ಹಾಗೂ ತಂಡ ಹಾಡಿದರು. ಸಮಾರೋಪ ಸಮಾರಂಭದ ಮೇಲುಸ್ತುವಾರಿಯನ್ನು ಆದಿನ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ರಮೇಶ್ ಅಗ್ರಹಾರ, ನೀಲಕಂಠೇಗೌಡ, ಶ್ರೀನಿವಾಸ್ ಹಾಗೂ ಆದಿಮ ಪದಾಧಿಕಾರಿಗಳು ನಿರ್ವಹಿಸಿದರು. ಆದಿಮ ಅಮರೇಶ್ ನಿರೂಪಿಸಿದರು. ಆದಿಮ ಟ್ರಸ್ಟಿ ಮಾರ್ಕೊಂಡಯ್ಯ ಸ್ವಾಗತಿಸಿದರು. ಶಿಬಿರದ ಸಂಯೋಜಕ ಕೆ.ವಿ.ಕಾಳಿದಾಸ್ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಮಾಡಿದರು. ಶಿಬಿರದ ಸಂಯೋಜಕ ತುರಾಂಡಹಳ್ಳಿ ಶ್ರೀನಿವಾಸ್ ವಂದಿಸಿದರು.

ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರು

ಶಿಬಿರದ ಸಾರ ಶಿಬಿರದ ನಿರ್ದೇಶಕ ಕೆ.ವಿ.ನಾಯಕ್ (ಅಮಾಸ) ಶಿಬಿರದ ಕುರಿತು ಮಾಹಿತಿ ಹಂಚಿಕೊಂಡರು. ಆದಿಮ ಆಶಯ ಗೀತೆಯನ್ನು ಡಿ.ಆರ್.ರಾಜಪ್ಪ ಹಾಗೂ ತಂಡ ಹಾಡಿದರು. ಸಮಾರೋಪ ಸಮಾರಂಭದ ಮೇಲುಸ್ತುವಾರಿಯನ್ನು ಆದಿನ ಕಾರ್ಯದರ್ಶಿ ಹ.ಮಾ.ರಾಮಚಂದ್ರ ರಮೇಶ್ ಅಗ್ರಹಾರ ನೀಲಕಂಠೇಗೌಡ ಶ್ರೀನಿವಾಸ್ ಹಾಗೂ ಆದಿಮ ಪದಾಧಿಕಾರಿಗಳು ನಿರ್ವಹಿಸಿದರು. ಆದಿಮ ಅಮರೇಶ್ ನಿರೂಪಿಸಿದರು. ಆದಿಮ ಟ್ರಸ್ಟಿ ಮಾರ್ಕೊಂಡಯ್ಯ ಸ್ವಾಗತಿಸಿದರು. ಶಿಬಿರದ ಸಂಯೋಜಕ ಕೆ.ವಿ.ಕಾಳಿದಾಸ್ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಮಾಡಿದರು. ಶಿಬಿರದ ಸಂಯೋಜಕ ತುರಾಂಡಹಳ್ಳಿ ಶ್ರೀನಿವಾಸ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.