ADVERTISEMENT

ನಗರಸಭೆ ಆಯುಕ್ತರಿಗೆ ಅಮಾನತು ಎಚ್ಚರಿಕೆ

ವ್ಯವಹಾರಕ್ಕೆ ಸೀಮಿತ: ಪೌರಾಡಳಿತ ಸಚಿವ ನಾರಾಯಣಗೌಡ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 15:20 IST
Last Updated 14 ಸೆಪ್ಟೆಂಬರ್ 2020, 15:20 IST
ಕೋಲಾರದಲ್ಲಿ ಸೋಮವಾರ ನಡೆದ ಪೌರಾಡಳಿತ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಸಚಿವ ಕೆ.ಆರ್‌.ನಾರಾಯಣಗೌಡ ಮಾತನಾಡಿದರು.
ಕೋಲಾರದಲ್ಲಿ ಸೋಮವಾರ ನಡೆದ ಪೌರಾಡಳಿತ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಸಚಿವ ಕೆ.ಆರ್‌.ನಾರಾಯಣಗೌಡ ಮಾತನಾಡಿದರು.   

ಕೋಲಾರ: ಇಲ್ಲಿ ಸೋಮವಾರ ನಡೆದ ಪೌರಾಡಳಿತ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಸಚಿವ ಕೆ.ಆರ್‌.ನಾರಾಯಣಗೌಡ ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ‘ಕೋಲಾರ ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲಾ ನಗರಸಭೆಗಳು ಹಾಗೂ ಪುರಸಭೆಗಳಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದೆ. ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು ಸರ್ಕಾರಕ್ಕೆ ಆದಾಯ ತರುವ ಕೆಲಸ ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಆಯುಕ್ತ ಶ್ರೀಕಾಂತ್‌, ‘ಏಕೆ ಸರ್, ನನ್ನನ್ನೇ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದೀರಿ’ ಎಂದು ಹೇಳಿದರು. ಇದರಿಂದ ಕೆಂಡಾಮಂಡಲರಾದ ಸಚಿವರು, ‘ನಾರಾಯಣಸ್ವಾಮಿ ಅವರು ಶಾಸಕರೆಂಬುದನ್ನು ಮರೆತು ಅವಾಜ್‌ ಹಾಕುತ್ತೀಯಾ? ನೆಟ್ಟಗೆ ಕೆಲಸ ಮಾಡದ ಕಾರಣಕ್ಕೆ ಶಾಸಕರು ಆರೋಪಿಸುತ್ತಿದ್ದಾರೆ. ಮಾಡಿರುವ ಕೆಲಸ ಹೇಳುವುದು ಬಿಟ್ಟು ಶಾಸಕರಿಗೆ ಎದುರುತ್ತರ ಕೊಟ್ಟರೆ ಈ ಕ್ಷಣವೇ ಅಮಾನತು ಮಾಡಿ ಹೊರಗೆ ಕಳುಹಿಸುತ್ತೇನೆ’ ಎಂದು ಆಯುಕ್ತರಿಗೆ ಬೆವರಿಳಿಸಿದರು.

ADVERTISEMENT

ನಂತರ ನಾರಾಯಣಸ್ವಾಮಿ ಅವರು, ‘ಆಯುಕ್ತರು ಕ್ಷಮೆ ಕೇಳಬೇಕು’ ಎಂದು ಪಟ್ಟು ಹಿಡಿದರು. ಸಚಿವರ ಕೋಪಕ್ಕೆ ಬೆದರಿದ ಆಯುಕ್ತರು ಕ್ಷಮೆ ಕೇಳಿದರು.

ಆದಾಯ ಶೂನ್ಯ: ‘ನಗರದಲ್ಲಿ ಕುಡಿಯುವ ನೀರು, ಕಸ, ರಸ್ತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ನಗರಸಭೆಗೆ ಆದಾಯ ಶೂನ್ಯವಾಗಿದೆ. ಕೇವಲ ನೀವು ವ್ಯವಹಾರಕ್ಕೆ ಸೀಮಿತವಾಗಿ ಬಿಟ್ಟಿದ್ದೀರಿ. ನೀವು ಕೊಟ್ಟಿರುವ ವರದಿ ಸರಿಯಾಗಿದೆಯೇ? ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾಗೂ ಫ್ಲೆಕ್ಸ್‌ಗಳ ಅಬ್ಬರ ಜೋರಾಗಿದೆ. ಅವುಗಳಿಗೆ ಅನುಮತಿ ಇದೆಯೇ, ತೆರಿಗೆ ಕಟ್ಟಿದ್ದಾರೆಯೇ? ಎಂದು ಸಚಿವರು ಪ್ರಶ್ನಿಸಿದರು.

‘ಸಾಧ್ಯವಾದರೆ ದಾವಣಗೆರೆ, ಚಿತ್ರದುರ್ಗ ನಗರವನ್ನು ಒಮ್ಮೆ ನೋಡಿ ಬನ್ನಿ. ಅಲ್ಲಿ ಯಾವ ವ್ಯವಸ್ಥೆಯಿದೆ, ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂದು ಗೊತ್ತಾಗುತ್ತದೆ. ನಗರದ ಸಮಸ್ಯೆಗಳ ಸಂಬಂಧ ನಿಯಮಿತವಾಗಿ ಸಭೆ ನಡೆಸಿ ವ್ಯವಸ್ಥೆ ಸರಿಪಡಿಸಬೇಕು’ ಎಂದು ಸೂಚಿಸಿದರು.

‘ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರವಾಸಿ ಮಂದಿರಕ್ಕೆ ಸೀಮಿತವಾಗಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಹಸಿ ಮತ್ತು ಒಣ ಕಸ ವಿಂಗಡಣೆ ಸಂಬಂಧ ನೀಡಿದ ಸೂಚನೆ ಈವರೆಗೆ ಜಾರಿಯಾಗಿಲ್ಲ. ಜಿಲ್ಲಾ ಕೇಂದ್ರದ ಒಂದೇ ಒಂದು ರಸ್ತೆ ಸ್ವಚ್ಛವಾಗಿರುವುದನ್ನು ತೋರಿಸಿದರೆ ನಾನು ರಾಜಕಾರಣದಿಂದ ನಿವೃತ್ತನಾಗುತ್ತೇನೆ’ ಎಂದು ಸವಾಲು ಹಾಕಿದರು.

‘ನೀವು ಹೇಳುವ ಕಟ್ಟು ಕತೆ ಕೇಳಲು ನಾನು ಸಭೆಗೆ ಬಂದಿಲ್ಲ. ಇಲಾಖೆ ಪ್ರಗತಿ ಪರಿಶೀಲನೆಗೆ ಬಂದಿದ್ದೇನೆ ಸಮರ್ಪಕ ಮಾಹಿತಿ ಕೊಡಿ. ಸಭೆಗೆ ಗೈರಾಗಿರುವ ಕೆಜಿಎಫ್‌ ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಶ್ರೀಧರ್ ಅವರನ್ನು ಅಮಾನತು ಮಾಡಿ’ ಎಂದು ಆದೇಶಿಸಿದರು.

ಕಸ ವಿಂಗಡಣೆ: ‘ಹಸಿ ಮತ್ತು ಒಣ ಕಸ ವಿಂಗಡಣೆ, ತ್ಯಾಜ್ಯ ವಿಲೇವಾರಿಯಲ್ಲಿ ಮಂಡ್ಯ ಮತ್ತು ತುಮಕೂರು ಜಿಲ್ಲೆ ಸಾಕಷ್ಟು ಪ್ರಗತಿ ಸಾಧಿಸಿವೆ. ಅದೇ ರೀತಿ ಕೋಲಾರ ಜಿಲ್ಲೆಯಲ್ಲೂ ಪ್ರಗತಿ ಸಾಧಿಸಬೇಕು. ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಸದ್ಯ ಏಜೆನ್ಸಿ ಮೂಲಕ ಹಾಗೂ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದೆ ಇಲಾಖೆಯಿಂದಲೇ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದರು.

‘ನಗರಸಭೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಅಂಗಡಿಗಳು ಎಷ್ಟಿವೆ. ನಗರಸಭೆ ಮಳಿಗೆಗಳನ್ನು ಉಪ ಗುತ್ತಿಗೆಗೆ ನೀಡಿರುವವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಸಭೆಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕಾನೂನು ಸಲಹೆಗಾರರು ಮತ್ತು ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದು, ಕೂಡಲೇ ಬದಲಾವಣೆ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಜಿಲ್ಲಾಧಿಕಾರಿಗೆ ಸೂಚಿಸಿದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಎಂ.ರೂಪಕಲಾ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.