
ಮಾಲೂರು ತಾಲ್ಲೂಕಿನ ಸಂತೇಹಳ್ಳಿಯಲ್ಲಿ ನಡೆದ ‘ತಾಲ್ಲೂಕು ಆಡಳಿತದ ನಡೆ ಗ್ರಾಮದ ಕಡೆ’ ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ ಹಾಗೂ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು
ಮಾಲೂರು: ತಾಲ್ಲೂಕು ಆಡಳಿತ ವತಿಯಿಂದ ತಾಲ್ಲೂಕಿನ ಸಂತೇಹಳ್ಳಿ ಯಲ್ಲಿ ಶಾಸಕ ಕೆ.ವೈ.ನಂಜೇಗೌಡ ನೇತೃತ್ವದಲ್ಲಿ ‘ತಾಲ್ಲೂಕು ಆಡಳಿತದ ನಡೆ ಗ್ರಾಮದ ಕಡೆ’ ಕಾರ್ಯಕ್ರಮ ಬುಧವಾರ ನಡೆಯಿತು.
32 ಇಲಾಖೆ ಅಧಿಕಾರಿಗಳ ತಂಡ ಹಾಗೂ ಕೆ.ವೈ.ನಂಜೇಗೌಡರು ಸಂತೇಹಳ್ಳಿಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ರೇಷನ್ ಕಾರ್ಡ್, ಪಿಂಚಣಿ ಮತ್ತು ಸರ್ಕಾರಿ ಸೌಲಭ್ಯ ವಂಚಿತರು ನಿಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತಿಳಿಸಿ, ಸಮಸ್ಯೆ ಬಗೆಹರಿಸಿಕೊಳ್ಳಿ. ಕಾನೂನು ವ್ಯಾಪ್ತಿಯಲ್ಲಿ ನಿವಾರಣೆಯಾಗಬೇಕಾದರೆ ಅಧಿಕಾರಿಗಳು ಆ ಅರ್ಜಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ಎಂಟು ಪಂಚಾಯಿತಿಗಳನ್ನು ಮುಗಿಸಿದ್ದು, ಮುಂದೆ ತಾಲ್ಲೂಕಿನ 28 ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ದುರಸ್ಥಿ, ತಿದ್ದುಪಡಿ, ಗೃಹಲಕ್ಷ್ಮಿ, ಸಶ್ಮಾನ ಒತ್ತುವರಿ, ಬಯಲು ರಂಗಂದಿರ, ರಸ್ತೆಗೆ ಅಡ್ಡಿ, ಜಮೀನುಗಳಿಗೆ ನಕಾಶೆ ರಸ್ತೆ ಒತ್ತುವರಿ, ನಿವೇಶನ ಸೇರಿದಂತೆ ಅನೇಕ ದೂರುಗಳನ್ನು ಶಾಸಕರಿಗೆ ಸಲ್ಲಿಸಿದರು.
ಅನೇಕ ಸಮಸ್ಯೆಗಳನ್ನು ಸ್ಥಳದಲ್ಲೇ ಅಧಿಕಾರಿಗಳು ಬಗೆಹರಿಸಿದರು. ಜನರು ಸಂತಸ ವ್ಯಕ್ತಪಡಿಸಿದರು.
ಗ್ರಾ.ಪಂ ಕಟ್ಟಡಕ್ಕೆ ಕಲ್ಲೆಸೆದ ಯುವಕ
ಶಾಸಕ ಕೆ.ವೈ.ನಂಜೇಗೌಡ ಹಮ್ಮಿಕೊಂಡಿರುವ ‘ತಾಲ್ಲೂಕು ಆಡಳಿತದ ನಡೆ ಗ್ರಾಮದ ಕಡೆ’ ಸಭೆಯಲ್ಲಿ ಮನವಿಗೆ ಸ್ಪಂದನೆ ಸಿಗದ ಆಕ್ರೋಶದಿಂದ ಯುವಕನೊಬ್ಬ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಕಲ್ಲೆಸೆದಿರುವ ಘಟನೆ ತಾಲ್ಲೂಕಿನ ಸಂತೇಹಳ್ಳಿಯಲ್ಲಿ ಬುಧವಾರ ನಡೆದಿದೆ.
ಗ್ರಾಮದ ನಿವಾಸಿ, ಎಂಜಿನಿಯರಿಂಗ್ ಪದವೀಧರ ನವೀನ್ ಕುಮಾರ್ ಕಲ್ಲೆಸೆದ ಯುವಕ ಎಂದು ಗುರುತಿಸಲಾಗಿದೆ. ಕಲ್ಲೆಸೆತದಿಂದ ಪಂಚಾಯಿತಿ ಕಟ್ಟಡದ ಕಿಟಕಿ ಗಾಜು ಪುಡಿಯಾಗಿದೆ. ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಆ ಯುವಕ ಕಣ್ಣೀರು ಹಾಕಿರುವುದು ಗೊತ್ತಾಗಿದೆ.
ಕೊಳವೆಬಾವಿಗೆ ಹೆಚ್ಚಿನ ಸಮಯ ವಿದ್ಯುತ್ ಸರಬರಾಜು ಮಾಡುವಂತೆ ಹಾಗೂ ಕನಿಷ್ಠ ಬೆಂಬಲ ಬೆಲೆಯಡಿ ರಾಗಿ ಖರೀದಿ ಸಮಯವನ್ನು ವಿಸ್ತರಿಸುವಂತೆ ಸಭೆಯಲ್ಲಿ ಮನವಿ ಮಾಡಿದ್ದು, ಅದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ತಾಲ್ಲೂಕು ಆಡಳಿತ ಹಾಗೂ ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ ವ್ಯಕ್ತಿಯು ಕೋಪದಿಂದ ಕಲ್ಲು ಎಸೆದಿರುವುದು ಗೊತ್ತಾಗಿದೆ. ನವೀನ್ ಕಲ್ಲೆಸೆದಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಿಂದೆಯೂ ಈ ವ್ಯಕ್ತಿ ಇದೇ ರೀತಿಯ ಕೃತ್ಯ ಎಸಗಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಬೆಳಗಿನ ಜಾವ ಮದ್ಯ ಮಾರಾಟ: ಮಹಿಳೆಯರ ದೂರು
‘ಮಂಗಾಪುರದಲ್ಲಿ ಬೆಳಗ್ಗೆ 4 ಗಂಟೆಗೆ ಅಂಗಡಿಗಳಲ್ಲಿ ಮದ್ಯ ಮಾರಾಟ ಆರಂಭಿಸುತ್ತಾರೆ. ಮನೆಯವರು ಕುಡಿದು ಬಂದು ಹಿಂಸೆ ಕೊಡುತ್ತಾರೆ. ಮನೆಯಲ್ಲಿ ನೆಮ್ಮದಿ ಇಲ್ಲ. ರಾತ್ರಿ 12 ಗಂಟೆಗೂ ಕೇಳಿದರೂ ಮದ್ಯ ತಂದುಕೊಡುತ್ತಾರೆ. ಪೊಲೀಸರು ಹಣ ಪಡೆದು ವಾಪಸ್ ಹೋಗುತ್ತಾರೆ. ತಾವು ಕ್ರಮ ಕೈಗೊಳ್ಳಿ’ ಎಂದು ಗ್ರಾಮದ ಮಹಿಳೆಯರು ಮನವಿ ಮಾಡಿದರು.
ಅದಕ್ಕೆ ಸ್ಪಂದಿಸಿದ ಶಾಸಕ ನಂಜೇಗೌಡ, ‘ಕೂಡಲೇ ಅಂಗಡಿಗಳನ್ನು ಜಫ್ತಿ ಮಾಡಿ. ಪೊಲೀಸರು ಹಾಗೂ ಅಬಕಾರಿ ಇಲಾಖೆಯವರು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಯಾರೇ ಆಗಿದ್ದರೂ ಕ್ರಮ ವಹಿಸಿ. ಯಾವ ಬಾರ್‌ನಿಂದ ಮದ್ಯ ಅಂಗಡಿಗಳಿಗೆ ಸರಬರಾಜು ಆಗುತ್ತದೆ? ಆ ಬಾರ್ ಪರವಾನಗಿ ರದ್ದು ಮಾಡಿ’ ಎಂದು ಪೊಲೀಸರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.