
ಕೋಲಾರ: ಆರ್‌ಟಿಓ ಅಧಿಕಾರಿಗಳು ಬುಧವಾರ ಬೆಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿ ರಾಜ್ಯ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದ ಅಂತರರಾಜ್ಯ ಖಾಸಗಿ ಬಸ್‌ಗಳನ್ನ ವಶಕ್ಕೆ ಪಡೆದಿದ್ದಾರೆ.
ನಸುಕಿನ 4 ಗಂಟೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿ 32ಕ್ಕೂ ಅಧಿಕ ಬಸ್‌ಗಳನ್ನು ಜಪ್ತಿ ಮಾಡಿದರು.
ಅಖಿಲ ಭಾರತ ಅನುಮತಿ ಪಡೆದು ರಾಜ್ಯದ ಪರವಾನಗಿ ಇಲ್ಲದೆ ಸಂಚರಿಸುತ್ತಿದ್ದ ಐಷಾರಾಮಿ ಸ್ಲೀಪರ್ ಕೋಚ್, ಅಂತರರಾಜ್ಯ ಖಾಸಗಿ ಪ್ರವಾಸಿ ಬಸ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಆಗಿರುವ, ಸಮರ್ಪಕ ಹಾಗೂ ಸುಸ್ಥಿಯಲ್ಲಿ ಇಲ್ಲದ, ಪ್ರಯಾಣಿಕರ ರಕ್ಷಣೆ ಇಲ್ಲದ ಸ್ಲೀಪರ್ ಹಾಗೂ ಹೈಟೆಕ್ ಬಸ್‌ಗಳಿಗೆ ದಂಡ ವಿಧಿಸಲಾಗಿದೆ.
ಒಂದೊಂದು ಬಸ್ ಲಕ್ಷಾಂತರ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿದ್ದು, ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಿಸಲಾಗಿದೆ.
ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಗಾಯಿತ್ರಿ ದೇವಿ ನೇತೃತ್ವದ 15 ಆರ್‌ಟಿಓಗಳಿದ್ದ ತಂಡ ಈ ಕಾರ್ಯಾಚರಣೆ ನಡೆಸಿದೆ. ಐಷಾರಾಮಿ, ಸ್ಲೀಪರ್, ಹೈಟೆಕ್ ಬಸ್‌ಗಳನ್ನ ಜಪ್ತಿ ಮಾಡಲಾಗಿದೆ. ಈ ಬಸ್‌ಗಳಲ್ಲಿ ವಿವಿಧ ಊರುಗಳಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬದಲಿ ವ್ಯವಸ್ಥೆ ಮಾಡಿದರು.
‘ಅಖಿಲ ಭಾರತ ಟೂರಿಸ್ಟ್ ಪರವಾನಗಿ ಪಡೆದು ರಾಜ್ಯದಲ್ಲಿ ಕೆಲ ಬಸ್‌ಗಳು ಓಡಾಟ ನಡೆಸುತ್ತಿವೆ ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ನಮ್ಮ ರಸ್ತೆಗಳನ್ನು ಬಳಸುತ್ತಾರೆ. ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಪಾವತಿಸುತ್ತಿಲ್ಲ. ಕೆಲ ಬಸ್‌ಗಳು ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ಕೂಡ ಮಾಡಿಸಿಲ್ಲ. ರಾಜ್ಯದ ಬಹುತೇಕ ಚೆಕ್ ಪೋಸ್ಟ್‌ಗಳಲ್ಲಿ ಪರಿಶೀಲನೆ ಆರಂಭಿಸಲಾಗಿದೆ’ ಎಂದು ಹೇಳಿದರು.
ಅಪಘಾತ, ಅವಘಡ ಸಂದರ್ಭದಲ್ಲಿ ಇರಬೇಕಾದ ಕನಿಷ್ಠ ಸೌಲಭ್ಯಗಳನ್ನು ಈ ಪ್ರವಾಸಿ ಬಸ್‌ಗಳಲ್ಲಿ ಅಳವಡಿಸಿಲ್ಲ. ತುರ್ತು ನಿರ್ಗಮನ ದ್ವಾರಗಳು ಅಸಮರ್ಪಕವಾಗಿವೆ. ನಿಯಮಗಳನ್ನ ಪಾಲಿಸದೆ, ಅವಘಡ ಅನಾಹುತ ಸಂದರ್ಭಗಳಲ್ಲಿ ಬಳಕೆ ಮಾಡಬೇಕಾದ ವಸ್ತುಗಳನ್ನ ಇಟ್ಟಿಲ್ಲ, ಬಸ್ ಮಾಲೀಕರಿಗೆ ಕೇವಲ ಆದಾಯದ ಕಡೆ ಗಮನ ಇದ್ದು, ಪ್ರಯಾಣಿಕರ ಸುರಕ್ಷತೆಗೆ ಗಮನ ನೀಡುತ್ತಿಲ್ಲ ಎಂದು ತಿಳಿಸಿದರು,
ಈ ಕಾರ್ಯಾಚರಣೆ ಇಲ್ಲಿಗೆ ನಿಲ್ಲುವುದಿಲ್ಲ. ನ್ಯಾಯಾಲಯದ ಆದೇಶ ಹೊರತುಪಡಿಸಿ ಉಳಿದಂತೆ ರಾಜ್ಯದ ತೆರಿಗೆ ವಸೂಲಿ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.