ADVERTISEMENT

ಕೆರೆಗೆ ಜಿಗಿದು ಶಿಕ್ಷಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 9:07 IST
Last Updated 20 ಡಿಸೆಂಬರ್ 2019, 9:07 IST
ಪ್ರಭಾಕರ್‌
ಪ್ರಭಾಕರ್‌   

ಕೋಲಾರ: ತಾಲ್ಲೂಕಿನ ಭಟ್ಟರಹಳ್ಳಿಯಲ್ಲಿ ಪ್ರಭಾಕರ್‌ (32) ಎಂಬ ಶಿಕ್ಷಕರು ಬುಧವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಟ್ಟರಹಳ್ಳಿ ಗ್ರಾಮದ ಪ್ರಭಾಕರ್‌ ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರು. ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಅವರಿಗೆ ಕುಟುಂಬ ಸದಸ್ಯರು ಮದುವೆ ಮಾಡಲು ಹೆಣ್ಣು ನೋಡಿದ್ದರು. ಹೆಣ್ಣಿನ ಕುಟುಂಬ ಸದಸ್ಯರು ಬುಧವಾರ ಮಧ್ಯಾಹ್ನ ಪ್ರಭಾಕರ್‌ರ ಮನೆಗೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತು ಎಂದು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮನೆಗೆ ಬೆಳಿಗ್ಗೆ ದಿನಸಿ ತಂದಿಟ್ಟು ಬೈಕ್‌ನಲ್ಲಿ ಹೊರ ಹೋಗಿದ್ದ ಪ್ರಭಾಕರ್‌ ಗ್ರಾಮದ ಕೆರೆ ಬಳಿ ಮೊದಲು ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಮರದ ಕೊಂಬೆ ಹಾಗೂ ಹಗ್ಗ ತುಂಡಾಗಿದ್ದರಿಂದ ಆತ್ಮಹತ್ಯೆ ಪ್ರಯತ್ನ ವಿಫಲವಾಗಿದೆ. ಬಳಿಕ ಅವರು ಮರದ ಬಳಿಯೇ ಬೈಕ್‌ ನಿಲ್ಲಿಸಿ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಪ್ರಭಾಕರ್‌ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಕುಟುಂಬ ಸದಸ್ಯರು ರಾತ್ರಿಯಿಡೀ ಹುಡುಕಾಟ ನಡೆಸಿದ್ದರು. ಕೆರೆಯಲ್ಲಿ ಗುರುವಾರ ಬೆಳಿಗ್ಗೆ ವ್ಯಕ್ತಿಯೊಬ್ಬರ ಶವ ತೇಲುತ್ತಿರುವುದನ್ನು ನೋಡಿದ ಗ್ರಾಮಸ್ಥರು ಠಾಣೆಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪ್ರಭಾಕರ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು. ಮನೋರೋಗದಿಂದ ಬಳಲುತ್ತಿದ್ದ ಪ್ರಭಾಕರ್‌ ಈ ಹಿಂದೆ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.