ADVERTISEMENT

ಪಠ್ಯಪುಸ್ತಕ ವಿತರಣೆ ಅಕ್ರಮ: ಗೋದಾಮು ಪರಿಶೀಲನೆ

ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳ ದಿಢೀರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 14:10 IST
Last Updated 12 ಮಾರ್ಚ್ 2019, 14:10 IST
ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳ ತಂಡವು ಪಠ್ಯಪುಸ್ತಕ ವಿತರಣೆಯಲ್ಲಿ ಅಕ್ರಮದ ಸಂಬಂಧ ಕೋಲಾರ ಬಿಇಒ ಕಚೇರಿ ಆವರಣದಲ್ಲಿನ ಗೋದಾಮಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳ ತಂಡವು ಪಠ್ಯಪುಸ್ತಕ ವಿತರಣೆಯಲ್ಲಿ ಅಕ್ರಮದ ಸಂಬಂಧ ಕೋಲಾರ ಬಿಇಒ ಕಚೇರಿ ಆವರಣದಲ್ಲಿನ ಗೋದಾಮಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.   

ಕೋಲಾರ: ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆಯಲ್ಲಿ ಲೋಪವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಗೋಪಾಲಕೃಷ್ಣ ನೇತೃತ್ವದ ಅಧಿಕಾರಿಗಳ ತಂಡವು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬಿಇಒ ಕಚೇರಿ ಆವರಣದಲ್ಲಿರುವ ಪಠ್ಯಪುಸ್ತಕ ಗೋದಾಮಿಗೆ ಬಂದ ಅಧಿಕಾರಿಗಳು 2010–11ನೇ ಶೈಕ್ಷಣಿಕ ವರ್ಷದಿಂದ 2018–19ನೇ ಸಾಲಿನವರೆಗೂ ವಿತರಣೆಯಾಗಿರುವ ಪಠ್ಯಪುಸ್ತಕಗಳ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದರು.

5 ವರ್ಷಗಳಿಂದ ಪಠ್ಯಪುಸ್ತಕ ವಿತರಣೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಣ ಸಂಯೋಜಕ ರವಣಪ್ಪ (ಸದ್ಯ ಸೋಮಯಾಜಲಪಲ್ಲಿ ಶಾಲೆ ಶಿಕ್ಷಕ) ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಿರುವ ಸಂಬಂಧ ಸಮರ್ಪಕ ದಾಖಲೆಪತ್ರ ನಿರ್ವಹಣೆ ಮಾಡದಿರುವ ಸಂಗತಿ ಅಧಿಕಾರಿಗಳ ಪರಿಶೀಲನೆಯಿಂದ ಗೊತ್ತಾಗಿದೆ.

ADVERTISEMENT

ಈ ಹಿಂದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಕೆ.ಎಸ್‌.ಲತಾಕುಮಾರಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕೆಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆಗ ಶಾಲೆಗಳಿಗೆ ಪಠ್ಯಪುಸ್ತಕ ತಲುಪದಿರುವ ದೂರು ಕೇಳಿಬಂದಿತ್ತು. ಬಳಿಕ ಲತಾಕುಮಾರಿ ಬಿಇಒ ಕಚೇರಿ ಆವರಣದಲ್ಲಿನ ಪಠ್ಯಪುಸ್ತಕದ ಗೋದಾಮಿನ ಮೇಲೆ ದಾಳಿ ನಡೆಸಿದಾಗ ಪಠ್ಯಪುಸ್ತಕಗಳು ವಿತರಣೆಯಾಗದೆ ಗೋದಾಮಿನಲ್ಲೇ ಉಳಿದಿರುವುದು ಗೊತ್ತಾಗಿತ್ತು.

ದಾಳಿ ವೇಳೆ ಪಠ್ಯಪುಸ್ತಕ ವಿತರಣೆಗೆ ಸಂಬಂಧಿಸಿದ ದಾಖಲೆಪತ್ರ ಕೇಳಿದಾಗ ರವಣಪ್ಪ ತಕ್ಷಣಕ್ಕೆ ಕಾಗದವೊಂದರ ಮೇಲೆ ಸಹಿ ಮಾಡಿಕೊಂಡು ಬಂದು ತೋರಿಸಿದ್ದರು. ಅಲ್ಲದೇ, ಖಾಸಗಿ ಶಾಲೆಗಳ ಆಡಳಿತ ಮಂಡಳಿಯಿಂದ ಹಣ ಪಡೆದು ಪಠ್ಯಪುಸ್ತಕ ವಿತರಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ತಲುಪಬೇಕಾದ ಪಠ್ಯಪುಸ್ತಕಗಳನ್ನು ನಿಯಮಬಾಹಿರವಾಗಿ ಖಾಸಗಿ ಶಾಲೆಗಳಿಗೆ ಕಳುಹಿಸಿದ್ದರು.

ಅಮಾನತು: ಪಠ್ಯಪುಸ್ತಕ ವಿತರಣೆಯಲ್ಲಿನ ಅಕ್ರಮದ ಸಂಬಂಧ ರವಣಪ್ಪ ಮತ್ತು ಶ್ರೀನಿವಾಸ್‌ ಎಂಬ ಶಿಕ್ಷಕರನ್ನು ಸಿಇಒ ಅಮಾನತು ಮಾಡಿದ್ದರು. ಜತೆಗೆ ಪಠ್ಯಪುಸ್ತಕದ ಗೋದಾಮಿಗೆ ಬೀಗಮುದ್ರೆ ಹಾಕಿಸಿದ್ದರು. ಅಲ್ಲದೇ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಿ, ವರದಿ ಸಲ್ಲಿಸಿದ್ದರು.

ಈ ವರದಿ ಆಧರಿಸಿ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳು ಪಠ್ಯಪುಸ್ತಕದ ಗೋದಾಮಿಗೆ ಭೇಟಿ ನೀಡಿದರು. ಬಳಿಕ ನಗರದ ಚಿನ್ಮಯ ವಿದ್ಯಾಲಯ ಹಾಗೂ ಬಿಎಂಎಸ್ ಶಾಲೆಗೆ ತೆರಳಿ ಆಡಳಿತ ಮಂಡಳಿ ಸದಸ್ಯರ ಜತೆ ಚರ್ಚಿಸಿ ಪಠ್ಯಪುಸ್ತಕ ಸರಬರಾಜಿನ ಬಗ್ಗೆ ಮಾಹಿತಿ ಕೇಳಿದಾಗ ರವಣಪ್ಪ ಅವರಿಗೆ ನೇರವಾಗಿ ಹಣ ಕೊಟ್ಟು ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಶಿಸ್ತುಕ್ರಮಕ್ಕೆ ನಿರ್ಧಾರ: ಅಧಿಕಾರಿಗಳ ತಂಡವು 6 ವರ್ಷಗಳಿಂದ ಪಠ್ಯಪುಸ್ತಕ ವಿತರಣೆ ಮಾಡಿರುವ ಬಗ್ಗೆ ಮಾಹಿತಿ ಕೇಳಿದಾಗ ಡಿಡಿಪಿಐ ರತ್ನಯ್ಯ ಮತ್ತು ಬಿಇಒ ಕೆ.ಎಸ್.ನಾಗರಾಜಗೌಡ ತಡಬಡಾಯಿಸಿದರು. ಸಿಬ್ಬಂದಿಯ ಕಾರ್ಯವೈಖರಿಗೆ ಅಸಮಾಧಾನಗೊಂಡ ಅಧಿಕಾರಿಗಳ ತಂಡವು ಹೆಚ್ಚುವರಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಲು ನಿರ್ಧರಿಸಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶಶಿಕಲಾ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.