ADVERTISEMENT

ಜಿಲ್ಲೆಯ ರಾಜಕಾರಣಿಗಳ ಸಾಧನೆ ಶೂನ್ಯ: ರವಿಕೃಷ್ಣಾರೆಡ್ಡಿ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಲೇವಡಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 9:22 IST
Last Updated 17 ಮಾರ್ಚ್ 2020, 9:22 IST
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಕೋಲಾರದಲ್ಲಿ ಭಾನುವಾರ ಪಕ್ಷದ ಜಿಲ್ಲಾ ಕಚೇರಿ ಉದ್ಘಾಟಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಕೋಲಾರದಲ್ಲಿ ಭಾನುವಾರ ಪಕ್ಷದ ಜಿಲ್ಲಾ ಕಚೇರಿ ಉದ್ಘಾಟಿಸಿದರು.   

ಕೋಲಾರ: ‘ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣಿಗಳ ಸಾಧನೆ ಶೂನ್ಯ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಲೇವಡಿ ಮಾಡಿದರು.

ಇಲ್ಲಿ ಭಾನುವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಕಚೇರಿ ಉದ್ಘಾಟಿಸಿ ಮಾತನಾಡಿ, ‘ಬರಪೀಡಿತ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ. ಸ್ಥಳೀಯ ಜನಪ್ರತಿನಿಧಿಗಳು ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಸೋಗಿನಲ್ಲಿ ಜನರ ದಿಕ್ಕು ತಪ್ಪಿಸಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಅವಿಭಜಿತ ಕೋಲಾರ ಜಿಲ್ಲೆಯ ರೈತರು ಹಾಲು, ತರಕಾರಿ ದೇಶ ವಿದೇಶಕ್ಕೆ ರಫ್ತು ಮಾಡುತ್ತಾರೆ. ಆದರೆ, ಇಲ್ಲಿನ ಜನಪ್ರತಿನಿಧಿಗಳು ರೈತರಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಿಲ್ಲ. ಬದಲಿಗೆ ಡೋಂಗಿ ಭರವಸೆ ನೀಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಜನಪರ ಕಾಳಜಿಯಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಕೆ.ಸಿ ವ್ಯಾಲಿ ಯೋಜನೆ ನೀರನ್ನು 3ನೇ ಹಂತದಲ್ಲಿ ಸಂಸ್ಕರಣೆ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಯರಗೋಳ್ ಜಲಾಶಯ ತುಂಬುವಷ್ಟು ಮಳೆ ಬೀಳುವುದಿಲ್ಲ ಎಂಬ ಸಂಗತಿ ಗೊತ್ತಿದ್ದರೂ ರಾಜಕಾರಣಿಗಳು ಯರಗೋಳ್‌ ಯೋಜನೆ ಜಾರಿಗೆ ಮುಂದಾಗಿದ್ದಾರೆ. ಈ ಯೋಜನೆಯು ಹಣ ಮಾಡುವ ದಂಧೆಯಾಗಿದೆ. ಕೆಲ ಜನಪ್ರತಿನಿಧಿಗಳು ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ನೀರು ತರುತ್ತೇವೆ ಎಂದು ಜನರಿಗೆ ಮಂಕುಬೂದಿ ಎರಚಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಪವಿತ್ರ ಕೆಲಸ: ‘ರಾಜಕಾರಣವು ಪವಿತ್ರ ಕೆಲಸ. ಸತ್ಯ, ಧರ್ಮ ಹಾಗೂ ನ್ಯಾಯ ಎತ್ತಿ ಹಿಡಿಯುವ ಮತ್ತು ಜನರ ಕಣ್ಣೀರು ಒರೆಸುವ ಮಹಾನ್ ಕಾರ್ಯ. ಭ್ರಷ್ಟಾಚಾರ, ಅನಾಚಾರ, ಜಾತಿ, ಧರ್ಮ ಬದಿಗಿಟ್ಟು ತ್ಯಾಗ ಮನೋಭಾವದಿಂದ ಜನರ ಸೇವೆ ಮಾಡಿದರೆ ರಾಜಕಾರಣ ಸಾರ್ಥಕ’ ಎಂದು ಅಭಿಪ್ರಾಯಪಟ್ಟರು.

‘ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಕ್ಕಾಗಿ ಜಿಲ್ಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಚೇರಿ ತೆರೆದಿದ್ದೇವೆ. ಜಿಲ್ಲೆಯ ಜನಸಾಮಾನ್ಯರ ಕಷ್ಟ, ಸಮಸ್ಯೆ ಪರಿಹರಿಸಲು ಸದಾ ಬದ್ಧರಾಗಿರುತ್ತೇವೆ. ಲಂಚಬಾಕ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದರೆ ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ಕೊಟ್ಟು ಭ್ರಷ್ಟರಿಗೆ ಬುದ್ಧಿ ಕಲಿಸುತ್ತೇವೆ. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ರಾಜ್ಯದ ಹಿತ ಕಾಪಾಡುತ್ತೇವೆ’ ಎಂದರು.

ದೊಡ್ಡ ಆಪತ್ತು: ‘ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಅದಮರು, ಕಳ್ಳರು ಹಾಗೂ ಭ್ರಷ್ಟರು ಚುನಾವಣೆಗಳಲ್ಲಿ ಹಣ, ಹೆಂಡ ಹಂಚಿ ಕೆಟ್ಟ ವಾತಾವರಣ ಸೃಷ್ಟಿಸಿದ್ದಾರೆ. ಈ ಸನ್ನಿವೇಶ ಅಂತ್ಯಗೊಳಿಸದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಆಪತ್ತು ಕಾದಿದೆ’ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು.

‘ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ವಾಸ್ತವ ಪರಿಸ್ಥಿತಿಯ ಅರಿವಿನೊಂದಿಗೆ ಗುರಿ ತಲುಪಬೇಕು. ಪ್ರಾಮಾಣಿಕ ವ್ಯಕ್ತಿಗಳು ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಸಾಮಾಜಿಕ ಬದಲಾವಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಅಬ್ದುಲ್ ಸುಬಾನ್, ಸದಸ್ಯರಾದ ರಘು, ಮಂಜುನಾಥ್, ವೀಣಾ, ಮುರಳಿ, ನಾಗರಾಜ್, ಸುರೇಂದ್ರಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.