ADVERTISEMENT

ಮರಳಿ ಗೂಡು ಸೇರಿದ ದಂಪತಿ

ಬಸವನಪಲ್ಲಿ ದೌರ್ಜನ್ಯ ಪ್ರಕರಣ: ಗ್ರಾಮಸ್ಥರ ಜತೆ ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 15:53 IST
Last Updated 18 ಸೆಪ್ಟೆಂಬರ್ 2020, 15:53 IST
ಶ್ರೀನಿವಾಸಪುರ ತಾಲ್ಲೂಕಿನ ಬಸವನಪಲ್ಲಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬದ ಮೇಲೆ ದೌರ್ಜನ್ಯ ನಡೆದಿದ್ದ ಹಿನ್ನೆಲೆಯಲ್ಲಿ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ ಅಧ್ಯಕ್ಷ ವಿ.ಸೋಮಶೇಖರ್‌ ಹಾಗೂ ಸದಸ್ಯರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಶಾಂತಿ ಸಭೆ ನಡೆಸಿದರು.
ಶ್ರೀನಿವಾಸಪುರ ತಾಲ್ಲೂಕಿನ ಬಸವನಪಲ್ಲಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬದ ಮೇಲೆ ದೌರ್ಜನ್ಯ ನಡೆದಿದ್ದ ಹಿನ್ನೆಲೆಯಲ್ಲಿ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ ಅಧ್ಯಕ್ಷ ವಿ.ಸೋಮಶೇಖರ್‌ ಹಾಗೂ ಸದಸ್ಯರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಶಾಂತಿ ಸಭೆ ನಡೆಸಿದರು.   

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬಸವನಪಲ್ಲಿ ಗ್ರಾಮದಲ್ಲಿ ಒಕ್ಕಲಿಗ ಸಮುದಾಯದವರ ದೌರ್ಜನ್ಯದಿಂದ ಊರು ತೊರೆದಿದ್ದ ಪರಿಶಿಷ್ಟ ಜಾತಿಯ ಕುಟುಂಬವು ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿಯ ರಕ್ಷಣೆಯಲ್ಲಿ ಶುಕ್ರವಾರ ಗ್ರಾಮಕ್ಕೆ ಮರಳಿತು.

ಗ್ರಾಮದ ಒಕ್ಕಲಿಗ ಸಮುದಾಯದ ರಾಜಾರೆಡ್ಡಿ ಮತ್ತು ಕುಟುಂಬ ಸದಸ್ಯರು ಪರಿಶಿಷ್ಟ ಜಾತಿಯ ನರಸಿಂಹಯ್ಯ ಮತ್ತು ಲಕ್ಷ್ಮಿ ದಂಪತಿ ಮೇಲೆ ಏಪ್ರಿಲ್‌ ತಿಂಗಳಿನಲ್ಲಿ ದೌರ್ಜನ್ಯ ನಡೆಸಿದ್ದರು. ಅಲ್ಲದೇ, ದಂಪತಿಯ ಜಮೀನಿನಲ್ಲಿದ್ದ ಹುಣಸೆ, ಮಾವು, ರಕ್ತಚಂದನ ಮರಗಳಿಗೆ ಹಾಗೂ ಬೆಳೆಗೆ ಬೆಂಕಿ ಹಚ್ಚಿ ಕೊಲೆ ಬೆದರಿಕೆ ಹಾಕಿದ್ದರು.

ದೌರ್ಜನ್ಯ ಪ್ರಶ್ನಿಸಿದ ಕಾರಣಕ್ಕೆ ನರಸಿಂಹಯ್ಯ ದಂಪತಿ ಮೇಲೆ ರಾಜಾರೆಡ್ಡಿ, ಸುರೇಂದ್ರರೆಡ್ಡಿ ಎಂಬುವರು ಹಲ್ಲೆ ನಡೆಸಿ ಜೀವಂತ ಸುಡುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಜೀವ ಭಯದಲ್ಲಿ ಮಕ್ಕಳೊಂದಿಗೆ ಉಟ್ಟ ಬಟ್ಟೆಯಲ್ಲಿ ರಾತ್ರೋರಾತ್ರಿ ಮನೆ ಬಿಟ್ಟು ಬಂದಿದ್ದ ನರಸಿಂಹಯ್ಯ ದಂಪತಿಯು 5 ತಿಂಗಳಿಂದ ಊರೂರು ಅಲೆಯುತ್ತಿದ್ದರು.

ADVERTISEMENT

ದಂಪತಿ ಮೇಲಿನ ದೌರ್ಜನ್ಯ ಸಂಬಂಧ ‘ಪ್ರಜಾವಾಣಿ’ಯ ಶುಕ್ರವಾರದ (ಸೆ.18) ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿ ಆಧರಿಸಿ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ ಅಧ್ಯಕ್ಷ ವಿ.ಸೋಮಶೇಖರ್‌ ಹಾಗೂ ಸದಸ್ಯರು ಬಸವನಪಲ್ಲಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಪ್ರಕರಣ ಸಂಬಂಧ ವಿಚಾರಣೆ ನಡೆಸಿದರು.

ಇದರ ಬೆನ್ನಲ್ಲೇ ರಾಯಲ್ಪಾಡು ಠಾಣೆ ಪೊಲೀಸರು ದೌರ್ಜನ್ಯ ಪ್ರಕರಣದ ಆರೋಪಿಗಳಾದ ರಾಜಾರೆಡ್ಡಿ, ಸುರೇಂದ್ರರೆಡ್ಡಿ ಮತ್ತು ರಾಮಲಕ್ಷ್ಮಮ್ಮ ಅವರನ್ನು ಶುಕ್ರವಾರ ಬಂಧಿಸಿದರು.

ಶಾಂತಿ ಸಭೆ: ಸಮಿತಿ ಸದಸ್ಯರು ದೌರ್ಜನ್ಯಕ್ಕೆ ಒಳಗಾದ ಕುಟುಂಬವನ್ನು ಪೊಲೀಸ್‌ ಭದ್ರತೆಯಲ್ಲಿ ಗ್ರಾಮಕ್ಕೆ ಕರೆದೊಯ್ದು ಗ್ರಾಮಸ್ಥರ ಜತೆ ಶಾಂತಿ ಸಭೆ ನಡೆಸಿದರು. ‘ಗ್ರಾಮದ ಜನರು ಸಮಾನತೆ ಮತ್ತು ಸಾಮರಸ್ಯದಿಂದ ಜೀವನ ನಡೆಸಬೇಕು. ಜಾತಿ ವಿಚಾರವಾಗಿ ಘರ್ಷಣೆಯಾಗಬಾರದು. ದ್ವೇಷ ಬಿಟ್ಟು ಕುಟುಂಬ ಸದಸ್ಯರಂತೆ ಒಟ್ಟಾಗಿ ಬಾಳುವ ಮೂಲಕ ಮಾದರಿಯಾಗಬೇಕು’ ಎಂದು ಸೋಮಶೇಖರ್‌ ಬುದ್ಧಿಮಾತು ಹೇಳಿದರು.

‘ನರಸಿಂಹಯ್ಯ ಕುಟುಂಬದ ಮೇಲೆ ದೌರ್ಜನ್ಯ ನಡೆಸಿದರೆ ಅಥವಾ ಕಿರುಕುಳ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಕುಟುಂಬಕ್ಕೆ ಯಾವುದೇ ತೊಂದರೆ ಆಗಬಾರದು’ ಎಂದು ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ, ಶ್ರೀನಿವಾಸಪುರ ತಹಶೀಲ್ದಾರ್‌ ಶ್ರೀನಿವಾಸ್‌, ಮುಳಬಾಗಿಲು ಉಪ ವಿಭಾಗದ ಡಿವೈಎಸ್ಪಿ ನಾರಾಯಣಸ್ವಾಮಿ, ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ ಸದಸ್ಯರಾದ ಮೇಡಿಹಾಳ ರಾಘವೇಂದ್ರ, ವೆಂಕಟಾಚಲಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.