
ಕೋಲಾರ: ‘ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ. ಸದಾ ಒಳಿತು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯ’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜ್ ಹೇಳಿದರು.
ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿ, ‘ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದೆ. ಸಂಸ್ಕೃತಿಯ ವಿಚಾರದಲ್ಲಿ ಯಾವ ಸಮುದಾಯವು ಈ ಜನಾಂಗದ ಸಂಸ್ಕೃತಿಯನ್ನು ತಲುಪಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಸಂತ ಸೇವಾಲಾಲ್ ಅವರು ಸಮಾಜ ಸುಧಾರಕರಾಗಿ ಜನಾಂಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. 18ನೇ ಶತಮಾನದಲ್ಲಿ ಮಾನವೀಯ ಮೌಲ್ಯಗಳನ್ನು ಸಾರಿದ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ವಿಚಾರಧಾರೆ ಹಾಗೂ ಹಿತವಾಣಿಗಳನ್ನು ಸಮಾಜಕ್ಕೆ ತಿಳಿಸಬೇಕು’ ಎಂದು ಸಲಹೆ ನೀಡಿದರು.
‘ಸೇವಾಲಾಲ್ ಬಂಜಾರ ಸಮುದಾಯವನ್ನು ಸತ್ಯದ ಹಾದಿಯಲ್ಲಿ ಮುನ್ನಡೆಸಿದರು. ಅವರು ಸಮಾಜದ ಏಳಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ಸಂತರು. ಸ್ವಂತಕ್ಕೆ ಆಸ್ತಿ ಮಾಡದೆ ಬಡವರ ಉದ್ಧಾರಕ್ಕಾಗಿ ಶ್ರಮಿಸಿದ ದಾರ್ಶನಿಕರು. ಸತ್ಯ, ಅಹಿಂಸೆಯ ಮಾರ್ಗದಲ್ಲಿ ಸಾಗಿದ ಅವರು ಮಹಾನ್ ಮಾನವತಾವಾದಿ’ ಎಂದು ಬಣ್ಣಿಸಿದರು.
ಪವಾಡ ಪುರುಷ: ‘ಬಂಜಾರ ಸಮುದಾಯದ ಪವಾಡ ಪುರುಷರಾದ ಸೇವಾಲಾಲ್ ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ಸಂತರು. ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಅವರು ಸಕಲ ಜೀವಜಂತುಗಳಿಗೆ ಒಳ್ಳೆಯದಾಗಲಿ ಎಂಬ ಸಂದೇಶ ಸಾರಿದರು. ಪ್ರತಿ ಜೀವಿಯೂ ಸುರಕ್ಷಿತವಾಗಿರಲಿ ಎಂಬುದು ಅವರ ಆಶಯವಾಗಿತ್ತು’ ಎಂದು ವಿವರಿಸಿದರು.
‘ಬಂಜಾರ ಸಮುದಾಯವನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ಸೇವಾಲಾಲ್‌ರ ಪರಿಶ್ರಮ ಅಪಾರ. ಸಮುದಾಯದ ಹಕ್ಕನ್ನು ಪಡೆಯಲು ಅವರು ಹೋರಾಟದ ಹಾದಿಯಲ್ಲಿ ಸಾಗಿದರು. ಸಮುದಾಯದ ಜನ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಕಿವಿಮಾತು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ನರೇಂದ್ರಬಾಬು, ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾ ಗೌರವಾಧ್ಯಕ್ಷಶಂಕರ್‌ನಾಯ್ಕ, ಅಧ್ಯಕ್ಷ ಪರಮೇಶ್‌ನಾಯ್ಕ, ಕಾರ್ಯದರ್ಶಿ ಮಹದೇವ್ ನಾಯ್ಕ, ಬಂಜಾರ ಸಮುದಾಯದ ಮುಖಂಡರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.