ADVERTISEMENT

ಕೋಲಾರ | ನಿಗಮ ಮಂಡಳಿಯಲ್ಲಿ ಜಿಲ್ಲೆಗೆ ಸಿಗದ ಅವಕಾಶ: ಕಾಂಗ್ರೆಸ್ಸಿಗರ ಅಸಮಾಧಾನ

ಕೆ.ಓಂಕಾರ ಮೂರ್ತಿ
Published 1 ಮಾರ್ಚ್ 2024, 6:47 IST
Last Updated 1 ಮಾರ್ಚ್ 2024, 6:47 IST
ಸಿ.ಲಕ್ಷ್ಮಿನಾರಾಯಣ
ಸಿ.ಲಕ್ಷ್ಮಿನಾರಾಯಣ   

ಕೋಲಾರ: ‘ಪ್ರತಿಪಕ್ಷಗಳ ವಿರುದ್ಧ ಪ್ರತಿಭಟನೆ ನಡೆಸಿ ಪಕ್ಷದ ನಿಲುವು ಸಮರ್ಥಿಸಿಕೊಳ್ಳುವುದು ನಾವು, ಕಾಂಗ್ರೆಸ್‌ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು, ಸನ್ಮಾನ ಮಾಡುವುದು, ಪಕ್ಷ ಸಂಘಟಿಸುವುದು ನಾವು. ಸತ್ಯ ಮಾತನಾಡಿದ್ದಕ್ಕೆ ಹಲ್ಲೆಗೊಳಗಾಗುವರೇ ನಾವೇ. ಪಕ್ಷದಲ್ಲಿ ನಿರ್ಲಕ್ಷಿತರೂ ನಾವೇ...’

ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ ಅವರ ಆಕ್ರೋಶಭರಿತ, ಅಸಮಾಧಾನದ ನುಡಿಗಳಿವು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಕಾಂಗ್ರೆಸ್‌ ಪಕ್ಷದ ಸುಮಾರು 44 ಮುಖಂಡರು, ಕಾರ್ಯಕರ್ತರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನಮಾನ ನೀಡಿದ ಪಟ್ಟಿ ಪ್ರಕಟಿಸಿದ್ದಾರೆ. ಆದರೆ, ಜಿಲ್ಲೆಯ ಕಾಂಗ್ರೆಸ್‌ ಪದಾಧಿಕಾರಿಗಳಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ದೊರೆತಿಲ್ಲ.

ADVERTISEMENT

ಈ ಬಗ್ಗೆ ಜಿಲ್ಲೆಯ ಕಾಂಗ್ರೆಸ್‌ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತೀವ್ರ ಅಸಮಾಧಾನ ಹಾಗೂ ಬೇಸರ ಹೊರಹಾಕಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕೋಪ ವ್ಯಕ್ತಪಡಿಸಿದ್ದಾರೆ.

‘ಈ ರೀತಿ ನಿರ್ಲಕ್ಷ್ಯ ಮಾಡಿದರೆ ಪಕ್ಷ ಸಂಘಟನೆ, ಮುಂದೆ ಚುನಾವಣೆ ನಡೆಸುವುದು ಹೇಗೆ? ಕಾರ್ಯಕರ್ತರಿಗೆ ಸ್ಪಂದಿಸುವುದು ಹೇಗೆ? ನಮ್ಮ ಧ್ವನಿ ಆಲಿಸುವ ಕೆ.ಎಚ್‌.ಮುನಿಯಪ್ಪ ಕೂಡ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕಿತ್ತು’ ಎಂದು ಊರುಬಾಗಿಲು ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ಪಕ್ಷ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಗೆದ್ದಿದೆ. ಸ್ಥಾನಮಾನದ ನಿರೀಕ್ಷೆಯಲ್ಲಿದ್ದ ಅವರೂ ಅವಕಾಶ ವಂಚಿತರಾಗಿದ್ದಾರೆ. 

‘ಜಿಲ್ಲೆಯಲ್ಲಿ ಹಲವಾರು ಮಂದಿ ಆಕಾಂಕ್ಷಿಗಳು ಇದ್ದರು. ಸುಮಾರು 15 ಮಂದಿ ವಿವಿಧ ನಿಗಮ ಮಂಡಳಿಯಲ್ಲಿ ಸ್ಥಾನಮಾನ ಕೋರಿ ಅರ್ಜಿ ಸಲ್ಲಿಸಿದ್ದರು. ಒಬ್ಬರಿಗೂ ಸ್ಥಾನ ದೊರೆತಿಲ್ಲ’ ಎಂದು ಲಕ್ಷ್ಮಿನಾರಾಯಣ ಹೇಳಿದರು.

‘ವಿಧಾನಸಭೆ ಚುನಾವಣೆಗೆ ಮುನ್ನ ಕೋಲಾರದಲ್ಲಿ ರಾಹುಲ್‌ ಗಾಂಧಿ ಪಾಲ್ಗೊಂಡಿದ್ದ ‘ಜೈಭಾರತ್‌’ ಸಮಾವೇಶ ಯಶಸ್ಸಿಗೆ ಹಗಲಿರುಳು ಶ್ರಮಿಸಿದೆವು. ಆಗ ಯಾವ ಶಾಸಕರ ಸಹಾಯವಿಲ್ಲದೇ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಸಮಾವೇಶ ಮಾಡಿದೆವು. ಎಐಸಿಸಿ, ಕೆಪಿಸಿಸಿಯ ಎಲ್ಲಾ ಆದೇಶ ಪಾಲಿಸಿದೆವು. ಸಮಾವೇಶದ ಯಶಸ್ಸಿಗೆ ವರಿಷ್ಠರಿಂದ ಮೆಚ್ಚುಗೆಯೂ ದೊರೆಯಿತು’ ಎಂದರು.

‘ಇದಲ್ಲದೇ, ಚುನಾವಣೆ ವೇಳೆ ಐದು ಗ್ಯಾರಂಟಿ ಪ್ರಚಾರ ಮಾಡಿ ಮನೆಮನೆಗ ಮುಟ್ಟಿಸಿದೆವು. ನಂತರ ಅಧಿಕಾರಕ್ಕೆ ಬಂದ ಮೇಲೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲೂ ಸಹಕಾರ ನೀಡಿದೆವು. ನಾನಂತೂ ಓನ್‌ ಮ್ಯಾನ್‌ ಆರ್ಮಿ ರೀತಿ ಕೆಲಸ ಮಾಡಿದ್ದೇನೆ. ನನಗೆ ಬಣ ರಾಜಕೀಯದ ಬಗ್ಗೆ ನಂಬಿಕೆ ಇಲ್ಲ. ಪಕ್ಷದ ಎಲ್ಲರ ಜೊತೆಯೂ ಗುರುತಿಸಿಕೊಂಡಿದ್ದೇನೆ. ಆದರೂ ನಿಗಮ ಮಂಡಳಿಯಲ್ಲಿ ಅವಕಾಶ ದೊರೆಯಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು 1989ರಲ್ಲಿ ಯೂತ್‌ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದೆ. ನಂತರ ಕೆಪಿಸಿಸಿ ಕಾರ್ಯದರ್ಶಿಯೂ ಆಗಿದ್ದೆ. ಕುಂಬಾರ ಸಮುದಾಯಕ್ಕೆ ಎಲ್ಲೂ ಪ್ರಾತಿನಿಧ್ಯ ಇಲ್ಲ. ಅದೇ ಸಮುದಾಯದ ನನ್ನಂಥವರಿಗೆ ಅವಕಾಶ ಸಿಗಬೇಕಿತ್ತು’ ಎಂದರು.

ತಿಂಗಳ ಹಿಂದೆ ಕಾಂಗ್ರೆಸ್‌ ಸರ್ಕಾರವು ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನಮಾನ ನೀಡಿದಾಗ ಜಿಲ್ಲೆಯ ರೂಪಕಲಾ ಶಶಿಧರ್‌ ಹಾಗೂ ಎಸ್‌.ಎನ್‌.ನಾರಾಯಣಸ್ವಾಮಿ ಅವರಿಗೆ ಅವಕಾಶ ದೊರೆತಿತ್ತು. ಆದರೆ, ಈಗ ಕಾರ್ಯಕರ್ತರೊಬ್ಬರಿಗೂ ಅವಕಾಶ ಲಭಿಸಿಲ್ಲ.

ವಿವಿಧ ಜಿಲ್ಲೆಗಳ 44 ಮಂದಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಸ್ಥಾನ ಪಟ್ಟಿಯಲ್ಲಿ ಕೋಲಾರ ಜಿಲ್ಲೆಯ ಒಬ್ಬರ ಹೆಸರೂ ಇಲ್ಲ ಜಿಲ್ಲೆಯಲ್ಲಿ ಸಲ್ಲಿಕೆಯಾಗಿದ್ದು ಸುಮಾರು 15 ಅರ್ಜಿ
ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದಶಕಗಳಿಂದ ದುಡಿಯುವವರಿಗೆ ಅನ್ಯಾಯವಾಗಿದೆ. ನಾವೂ ಅವಕಾಶದ ನಿರೀಕ್ಷೆಯಲ್ಲಿದ್ದೆ. ಮುಂದೆಯಾದರೂ ಪಕ್ಷ ನ್ಯಾಯ ದೊರಕಿಸಿಕೊಡುತ್ತದೆ ಎಂಬ ವಿಶ್ವಾಸ ನನ್ನದು
ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೋಲಾರ
ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರನ್ನು ನಿರ್ಲಕ್ಷಿಸಿರುವುದು ತುಂಬಾ ನಿರಾಸೆ ಬೇಸರ ಉಂಟು ಮಾಡಿದೆ. ಪಕ್ಷಕ್ಕೆ ದುಡಿದವರನ್ನು ಗುರುತಿಸುವುದಿಲ್ಲವೆಂದರೆ ಹೇಗೆ? ಏಕಿಷ್ಟು ನಿರ್ಲಕ್ಷ್ಯ?
ಊರುಬಾಗಿಲು ಶ್ರೀನಿವಾಸ್‌ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕೋಲಾರ
ಬೇಸರವಾಗಿರುವುದು ನಿಜ. ಆದರೆ ನಮ್ಮ ಕೆಲಸದ ಬಗ್ಗೆ ಪಕ್ಷದ ವರಿಷ್ಠರಿಗೆ ಗೊತ್ತಿದೆ. ಮುಂದೆ ಅವಕಾಶ ಸಿಗಬಹುದು. ಸಿದ್ದರಾಮಯ್ಯ ಡಿಕೆಶಿ ಮುನಿಯಪ್ಪ ಅವರ ಮೇಲೆ ನಂಬಿಕೆ ಇದೆ
ಕೆ.ಜಯದೇವ ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಕೋಲಾರ
‘ಕೆಲವರಿಗೆ ಕಾಂಗ್ರೆಸ್‌ ಸಿದ್ಧಾಂತವೇ ಗೊತ್ತಿಲ್ಲ’
‘ಜಿಲ್ಲೆಯಲ್ಲಿ ಕೋವಿಡ್ ಸಮಯದಲ್ಲಿ ಜನರ ಸೇವೆ ಯಾರು ಮಾಡಿದ್ದು? ಪಕ್ಷಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ಹೋರಾಟ ಮಾಡುತ್ತಿರುವುದು ಯಾರು? ಪ್ರತಿಪಕ್ಷಗಳ ವಿರುದ್ಧ ಪ್ರತಿಭಟನೆ ನಡೆಸಿ ಪಕ್ಷದ ನಿಲುವು ಸಮರ್ಥಿಸಿಕೊಂಡಿರುವವರು ಯಾರು’ ಎಂದು ಜಿಲ್ಲಾ ಕಾಂಗ್ರೆಸ್‌ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ ಪ್ರಶ್ನಿಸಿದರು. ‘ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕ್ರಮ ಮಾಡುವುದು ಸನ್ಮಾನ ಮಾಡುವುದು ಕಾರ್ಯಕರ್ತರಾಗಿ ದುಡಿದಿದ್ದು ಕೆಲಸ ಮಾಡಿದ್ದು ನಾವು. ಆದರೆ ಕೆಲವರು ಇವತ್ತು ಒಬ್ಬರ ಜೊತೆ ಇರುತ್ತಾರೆ ನಾಳೆ ಇನ್ನೊಬ್ಬರ ಜೊತೆ ಕಾಣಿಸಿಕೊಳ್ಳುತ್ತಾರೆ. ನಮ್ಮ ಮೇಲೆಯೇ ಹಲ್ಲೆ ಮಾಡುತ್ತಾರೆ. ಕೆಲವರಿಗೆ ಕಾಂಗ್ರೆಸ್‌ ಸಿದ್ಧಾಂತವೇ ಗೊತ್ತಿಲ್ಲ ಕಾಂಗ್ರೆಸ್‌ ಧ್ವಜವನ್ನೇ ಮುಟ್ಟಿದವರಲ್ಲ ಪ್ರತಿಭಟನೆಗಳಲ್ಲಿ ಪಾಲ್ಗೊಂಡವರಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.