ADVERTISEMENT

ಕೋಲಾರ | ಕೊರೊನಾ ಸೋಂಕಿನ ಭೀತಿ: ವಾರಾಂತ್ಯದ ಕರ್ಫ್ಯೂ ಆದೇಶಕ್ಕೆ ಜಿಲ್ಲೆ ಸ್ತಬ್ಧ

ವಹಿವಾಟು–ಬಸ್‌ ಸೇವೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 13:58 IST
Last Updated 8 ಜನವರಿ 2022, 13:58 IST
ವಾರಾಂತ್ಯದ ಕರ್ಫ್ಯೂ ಕಾರಣಕ್ಕೆ ಕೋಲಾರದ ಎಂ.ಜಿ ರಸ್ತೆಯು ಜನರ ಓಡಾಟ ಹಾಗೂ ವಾಹನ ಸಂಚಾರವಿಲ್ಲದೆ ಶನಿವಾರ ಬಿಕೋ ಎನ್ನುತ್ತಿತ್ತು
ವಾರಾಂತ್ಯದ ಕರ್ಫ್ಯೂ ಕಾರಣಕ್ಕೆ ಕೋಲಾರದ ಎಂ.ಜಿ ರಸ್ತೆಯು ಜನರ ಓಡಾಟ ಹಾಗೂ ವಾಹನ ಸಂಚಾರವಿಲ್ಲದೆ ಶನಿವಾರ ಬಿಕೋ ಎನ್ನುತ್ತಿತ್ತು   

ಕೋಲಾರ: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಿಸಿರುವ ಹಿನ್ನೆಲೆಯಲ್ಲಿ ಶನಿವಾರ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಯಿತು.

ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಮನೆಗಳಲ್ಲೇ ಉಳಿದು ಕರ್ಫ್ಯೂಗೆ ಬೆಂಬಲ ಸೂಚಿಸಿದರು. ಹಾಲು, ತರಕಾರಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳನ್ನು ಪೊಲೀಸರು ಬಂದ್‌ ಮಾಡಿಸಿದರು.

ಕೆಲವೆಡೆ ವರ್ತಕರು ಸ್ವಇಚ್ಛೆಯಿಂದ ಅಂಗಡಿಗಳನ್ನು ಮುಚ್ಚಿ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಂಚಿತವಾಗಿ ಶುಕ್ರವಾರವೇ ದಿನಸಿ, ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ಖರೀದಿಸಿದ್ದ ಸಾರ್ವಜನಿಕರು ಹೆಚ್ಚಾಗಿ ಅಂಗಡಿಗಳತ್ತ ಮುಖ ಮಾಡಲಿಲ್ಲ.

ADVERTISEMENT

ಹಾಲಿನ ಬೂತ್‌ಗಳು ಹಾಗೂ ಔಷಧ ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿದ್ದವು. ಕರ್ಫ್ಯೂ ಕಾರಣಕ್ಕೆ ವಹಿವಾಟು ಕುಸಿಯುವ ಆತಂಕದಲ್ಲಿ ಹಾಲಿನ ಬೂತ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಲು ಮತ್ತು ಮೊಸರು ತರಿಸಲಾಗಿತ್ತು. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು.

ಕೋಳಿ ಹಾಗೂ ಕುರಿ ಮಾಂಸ, ಮೀನಿನ ಮಾರಾಟಕ್ಕೆ ಸರ್ಕಾರ ವಿನಾಯಿತಿ ನೀಡಿದ್ದರಿಂದ ಮಾಲೀಕರು ಅಂಗಡಿ ತೆರೆದು ವಹಿವಾಟು ನಡೆಸಿದರು. ಬಾರ್‌, ರೆಸ್ಟೋರೆಂಟ್‌, ಬೇಕರಿ, ತಂಪು ಪಾನೀಯ, ಐಸ್‌ಕ್ರೀಮ್‌, ಚಾಟ್ಸ್‌ ಮಾರಾಟ ಮಳಿಗೆಗಳು ಸಂಪೂರ್ಣ ಬಂದ್‌ ಆಗಿದ್ದವು. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಿತ್ತು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಪ್ರತಿನಿತ್ಯದಂತೆ ಸೇವೆ ಒದಗಿಸಿದವು. ಆದರೆ, ಬಹುತೇಕ ಆಸ್‍ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಿತ್ತು. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪ್ರತಿನಿತ್ಯದಂತೆ ಗೂಡಿನ ವಹಿವಾಟು ನಡೆಯಿತು. ಸದಾ ಜನಜಂಗುಳಿ ಹಾಗೂ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ರಸ್ತೆಗಳು ಭಣಗುಡುತ್ತಿದ್ದವು.

ಪ್ರಯಾಣಿಕರಿಲ್ಲ: ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರು ನಿಲ್ದಾಣದತ್ತ ಸುಳಿಯಲಿಲ್ಲ. ಹೀಗಾಗಿ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರಿಗಾಗಿ ಗಂಟೆಗಟ್ಟಲೇ ಕಾಯುತ್ತಾ ಕುಳಿತಿದ್ದರು. ಸಾಕಷ್ಟು ಬಸ್‌ಗಳು ಪ್ರಯಾಣಿಕರಿಲ್ಲದೆ ಖಾಲಿ ಸಂಚರಿಸಿದವು.ರೈಲು ನಿಲ್ದಾಣಗಳು, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಆಟೊ ಚಾಲಕರು ಪ್ರಯಾಣಿಕರು ಬಾರದ ಕಾರಣ ಮನೆಗೆ ಮರಳಿದರು. ಖಾಸಗಿ ಬಸ್‌ಗಳು ಇಡೀ ದಿನ ರಸ್ತೆಗಿಳಿಯಲಿಲ್ಲ.

ಹಾಜರಾತಿ ಕಡಿಮೆ: ಅಂಚೆ ಕಚೇರಿಗಳು ಹಾಗೂ ಸರ್ಕಾರಿ ಕಚೇರಿಗಳು ಸೇವೆ ಒದಗಿಸಿದವು. ಆದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಹಾಗೂ ಸಾರ್ವಜನಿಕರ ಸಂಖ್ಯೆ ಕಡಿಮೆಯಿತ್ತು.

ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸಲ್‌ಗೆ ಸರ್ಕಾರ ಅವಕಾಶ ನೀಡಿದೆಯಾದರೂ ಮಾಲೀಕರು ಹೋಟೆಲ್‌ಗಳ ಬಾಗಿಲು ತೆರೆಯುವ ಮನಸ್ಸು ಮಾಡಲಿಲ್ಲ. ರಸ್ತೆ ಬದಿಯ ಫಾಸ್ಟ್‌ಫುಡ್‌, ಪೆಟ್ಟಿಗೆ ಅಂಗಡಿಗಳು ಬಂದ್‌ ಆಗಿದ್ದರಿಂದ ಜನರಿಗೆ ಟೀ, ಕಾಫಿ ಸಹ ಸಿಗಲಿಲ್ಲ. ಕರ್ಫ್ಯೂ ನಡುವೆಯೂ ಇಂದಿರಾ ಕ್ಯಾಂಟೀನ್‌ಗಳು ಸೇವೆ ಒದಗಿಸಿದವು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಆಹಾರ ಪದಾರ್ಥಗಳ ಪಾರ್ಸಲ್‌ ಸೇವೆಗೆ ಮಾತ್ರ ಅವಕಾಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.