ADVERTISEMENT

ಕೋಲಾರ | ಜಿಲ್ಲಾ ಆಸ್ಪತ್ರೆಯಲ್ಲಿ ತಲೆ ಎತ್ತಲಿದೆ ತೀವ್ರ ನಿಗಾ ಘಟಕ

ಕೇಂದ್ರ ಸರ್ಕಾರದ ಯೋಜನೆ, ₹ 23.75 ಕೋಟಿ ವೆಚ್ಚದಲ್ಲಿ ನಿರ್ಮಾಣ

ಕೆ.ಓಂಕಾರ ಮೂರ್ತಿ
Published 3 ಡಿಸೆಂಬರ್ 2022, 8:31 IST
Last Updated 3 ಡಿಸೆಂಬರ್ 2022, 8:31 IST
ಎಸ್‌ಎನ್‌ಆರ್‌ ಆಸ್ಪ‍ತ್ರೆ
ಎಸ್‌ಎನ್‌ಆರ್‌ ಆಸ್ಪ‍ತ್ರೆ   

ಕೋಲಾರ: ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯದಲ್ಲೇ 50 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಆಸ್ಪತ್ರೆ (ಕ್ರಿಟಿಕಲ್‌ ಕೇರ್‌ ಬ್ಲಾಕ್‌) ನಿರ್ಮಾಣವಾಗಲಿದೆ.

ಕೇಂದ್ರ ಸರ್ಕಾರದ ಅನುದಾನದಲ್ಲಿ ಈ ಆಸ್ಪತ್ರೆ ತಲೆ ಎತ್ತಲಿದ್ದು, ಇದಕ್ಕಾಗಿ ₹ 23.75 ಕೋಟಿ ವೆಚ್ಚವಾಗಲಿದೆ. ಕಟ್ಟಡ ಹಾಗೂ
ಮೂಲಸೌಕರ್ಯಗಳಿಗೆ ₹16.63 ಕೋಟಿ ನಿಗದಿಯಾಗಿದ್ದು, ಉಳಿದ ಮೊತ್ತ (₹7.12 ಕೋಟಿ) ವೈದ್ಯಕೀಯ ಸಲಕರಣೆಗಳಿಗೆ ಮೀಸಲಾಗಿದೆ. ಅಲ್ಲದೇ, ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ₹ 72 ಲಕ್ಷ ಭರಿಸಲಿದೆ.

ಇಂತಹ ಆಸ್ಪತ್ರೆಯು ರಾಜ್ಯಕ್ಕೆ ಮೂರು ಮಂಜೂರಾಗಿದ್ದು, ಕೋಲಾರ ಅಲ್ಲದೇ, ಚಾಮರಾಜನಗರ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌), ಉತ್ತರ ಕನ್ನಡದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೂ ನಿರ್ಮಾಣವಾಗಲಿದೆ.

ADVERTISEMENT

ಪಿಎಂ–ಎಬಿಎಚ್‌ಎಂ (ಪಿಎಂ–ಆಯುಷ್ಮಾನ್‌ ಭಾರತ್‌ ಹೆಲ್ತ್‌ ಇನ್‌ಫ್ರಾಸ್ಟ್ರಕ್ಚರ್‌ ಮಿಷನ್‌) ಅಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ತೀವ್ರ ನಿಗಾ ಆಸ್ಪತ್ರೆ ನಿರ್ಮಾಣವಾಗಲಿದ್ದು, ಈಗಾಗಲೇ ಟೆಂಡರ್‌ ಆಗಿದೆ.

‘ಡಿಸೆಂಬರ್‌ನಲ್ಲಿ ತೀವ್ರ ನಿಗಾ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಆಸ್ಪತ್ರೆ ಆವರಣದಲ್ಲಿ ಹೊಸದಾಗಿಯೇ ಕಟ್ಟಡ ತಲೆ ಎತ್ತಲಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕಡಾ.ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸದಾಗಿ ವೈದ್ಯರು, ತಂತ್ರಜ್ಞರು, ಸಿಬ್ಬಂದಿಯನ್ನು ಸರ್ಕಾರ ನಿಯೋಜಿಸಲಿದೆ. 18 ತಿಂಗಳಲ್ಲಿ ಆಸ್ಪತ್ರೆ ಸಿದ್ಧವಾಗಲಿದ್ದು, 2024ರ ಮಾರ್ಚ್‌ ಒಳಗಾಗಿ ಆಸ್ಪತ್ರೆ ಜನರ ಸೇವೆಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.

ಕೋವಿಡ್‌ನಂತಹ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಎಂತಹುದೇ ಸವಾಲನ್ನು ಎದುರಿಸಲು ಸಾಧ್ಯವಾಗುವಂತೆ 2021–22ರಿಂದ 2025–26ರ ಅವಧಿಯಲ್ಲಿ ದೇಶದಾದ್ಯಂತ 100 ಹಾಗೂ 50 ಹಾಸಿಗೆಗಳ
ತೀವ್ರ ನಿಗಾ ಆಸ್ಪತ್ರೆಗಳು, ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಭಾಗವಾಗಿ ಎಲ್ಲಾ ರಾಜ್ಯಗಳಲ್ಲಿ ಹಂತ ಹಂತವಾಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳು ನಿರ್ಮಾಣವಾಗಲಿವೆ.

ಏನೇನು ಇರಲಿದೆ?: 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ 10 ಐಸಿಯು ಹಾಸಿಗೆಗಳು (ಎರಡು ಮಕ್ಕಳ ಹಾಸಿಗೆ), ಆರು ಎಚ್‌ಡಿಯು ಹಾಸಿಗೆ (ಎರಡು ಮಕ್ಕಳಿಗೆ ಮೀಸಲು), 24 ಪ್ರತ್ಯೇಕ ವಾರ್ಡ್‌, ಎರಡು ಪ್ರತ್ಯೇಕ ಕೊಠಡಿ, ಎರಡು ಡಯಾಲಿಸಿಸ್‌ ಯಂತ್ರಗಳು ಇರಲಿವೆ.ಎಂಸಿಎಚ್‌ ಹಾಸಿಗೆ, ತುರ್ತು ಚಿಕಿತ್ಸೆಗೆ ಐದು ಹಾಸಿಗೆ, ಎರಡು ಆಪರೇಷನ್ ಥಿಯೇಟರ್‌ ಇರಲಿದೆ. ನೆಲಮಹಡಿ ಹಾಗೂ ಮೂರು ಮಹಡಿಗಳನ್ನು ಆಸ್ಪತ್ರೆ ಹೊಂದಿರಲಿದೆ.

ಪ್ರತ್ಯೇಕ ತಂಡ: ಜಿಲ್ಲಾಸ್ಪತ್ರೆಯ ಉಸ್ತುವಾರಿಯಲ್ಲಿ ಹೊಸ ಆಸ್ಪತ್ರೆ ನಡೆಯಲಿದ್ದು, ಅದಕ್ಕಾಗಿ ಪ್ರತ್ಯೇಕ ವೈದ್ಯರು, ಸಿಬ್ಬಂದಿಯ ತಂಡ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.