ADVERTISEMENT

ವೈದ್ಯಕೀಯ ವರದಿಯಿಂದ ಸತ್ಯಾಂಶ ತಿಳಿಯಲಿದೆ: ಸಚಿವ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 13:30 IST
Last Updated 31 ಮಾರ್ಚ್ 2021, 13:30 IST

ಕೋಲಾರ: ‘ಸಿ.ಡಿ ಪ್ರಕರಣದಲ್ಲಿ ಇನ್ನೂ ಸತ್ಯಾಂಶ ಹೊರಬರಬೇಕಿದೆ. ದೂರುದಾರ ಯುವತಿಯ ಮಾತಿನಲ್ಲಿ ಸ್ಥಿರತೆ ಕಾಣುತ್ತಿಲ್ಲ. ಯುವತಿಯ ವೈದ್ಯಕೀಯ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವು ಮುಂಬೈನಲ್ಲಿ ಜತೆಗಿದ್ದೆವು ಅಷ್ಟೇ. ಇದು ವೈಯಕ್ತಿಕ ವಿಚಾರ. ಸಿ.ಡಿ ಪ್ರಕರಣದಲ್ಲಿ ಮಹಾನಾಯಕ, ಪ್ರಭಾವಿ ನಾಯಕ ಎಂಬುದಿಲ್ಲ. ಯಾರು ಯಾರಿಗೂ ಹೆದರುವುದಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.

‘ಸದ್ಯ ಸಿ.ಡಿ ಪ್ರಕರಣ ಸಂಬಂಧ ಸಾಕಷ್ಟು ಗೊಂದಲವಿದೆ. ಇದೆಲ್ಲಾ ಇತ್ಯರ್ಥವಾದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಸತ್ಯ ಹೊರಬರಲು ಸ್ವಲ್ಪ ಕಾಲಾವಕಾಶ ಬೇಕು. ಯುವ ನಾಯಕ ಯಾರು ಎನ್ನುವುದೂ ಹೊರಬರುತ್ತದೆ’ ಎಂದು ತಿಳಿಸಿದರು.

ADVERTISEMENT

‘ಉಪ ಚುನಾವಣೆಯಲ್ಲಿ 3 ಕಡೆಯೂ ಬಿಜೆಪಿ ಗೆಲುವು ಸಾಧಿಸಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ರಮೇಶ ಜಾರಕಿಹೊಳಿ ಅವರಿಗೆ ನೀಡಲಾಗಿತ್ತು. ಸಿ.ಡಿ ಪ್ರಕರಣ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿಪಕ್ಷದವರಿಗೆ ಮಾತನಾಡಲು ಇಂತಹ ವಿಚಾರ ಬೇಕಷ್ಟೇ. ಇದು ಬಿಟ್ಟು ಅವರಿಗೆ ಇನ್ನೇನು ಸಿಗುತ್ತದೆ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.