ADVERTISEMENT

ಸಂಸದರಿಂದ ಸಾಮರಸ್ಯಕ್ಕೆ ಆಪತ್ತು

ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 3:45 IST
Last Updated 13 ಏಪ್ರಿಲ್ 2022, 3:45 IST
ಬಂಗಾರಪೇಟೆಯ ಅಮರಾವತಿ ಬಡಾವಣೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಿ.ಸಿ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದರು
ಬಂಗಾರಪೇಟೆಯ ಅಮರಾವತಿ ಬಡಾವಣೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಿ.ಸಿ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದರು   

ಬಂಗಾರಪೇಟೆ: ‘ಕ್ಷೇತ್ರದಲ್ಲಿ ಎಲ್ಲಾ ಧರ್ಮಿಯರು ಅಣ್ಣ, ತಮ್ಮಂದಿರಂತೆ ಇದ್ದರು. ಸಂಸದ ಎಸ್. ಮುನಿಸ್ವಾಮಿ ಅವರು ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಜಾತಿ, ಧರ್ಮಗಳನ್ನು ಎತ್ತಿಕಟ್ಟಿ ಸಾಮರಸ್ಯ ಕದಡುತ್ತಿದ್ದಾರೆ’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪಿಸಿದರು.

ಪಟ್ಟಣದ ಅಮರಾವತಿ ಬಡಾವಣೆ ಯಲ್ಲಿ ಮಂಗಳವಾರ ₹ 25 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಬದಲಾಗಿ ಅನಾವಶ್ಯಕ ವಿಷಯಗಳನ್ನು ಪ್ರಸ್ತಾಪಿಸಿ ತನ್ನ ತಪ್ಪುಗಳನ್ನು ಮರೆಮಾಚುವ ಯತ್ನ ನಡೆಸಿದೆ. ಹಿಜಾಬ್, ಹಲಾಲ್ ಕಟ್ ವಿವಾದ ಸೃಷ್ಟಿಸಿದ್ದು, ಮಾವಿನಹಣ್ಣು, ರೇಷ್ಮೆ ವ್ಯಾಪಾರಕ್ಕೆ ಕೊಳ್ಳಿ ಇಟ್ಟಿದೆ. ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದರು.‌

ADVERTISEMENT

ನಿತ್ಯ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಆಗುತ್ತಿದೆ. ಅಡುಗೆ ಎಣ್ಣೆ, ಔಷಧಿ, ಸಿಮೆಂಟ್, ರಸಗೊಬ್ಬರ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಡವರ ಜೇಬಿಗೆ ಕತ್ತರಿ ಬಿದ್ದಿದೆ. ಬಿಜೆಪಿ ಸರ್ಕಾರಕ್ಕೆ ಬಡವರು, ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

‘ಪಟ್ಟಣದ ಪ್ರತಿ ಬಡಾವಣೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ದೇಶಿಹಳ್ಳಿ, ಗಂಗಮ್ಮನಪಾಳ್ಯ, ಸಿ. ರಹಿಂ ಕಾಂಪೌಂಡ್ ಕೆರೆಕೋಡಿ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. ಕ್ಷೇತ್ರದಲ್ಲಿ ₹ 2 ಸಾವಿರ ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿ ನಡೆದಿದೆ. ಆದರೆ, ನಿನ್ನೆ ಒಬ್ಬ ಮಹಾನುಭಾವ ನಾನು ಯಾವುದೇ ಕಾಮಗಾರಿ ಮಾಡಿಲ್ಲವೆಂದು ಆರೋಪಿಸಿದರು. ಆದರೆ, ಜನರಿಗೆ ಸತ್ಯಾಂಶ ತಿಳಿದಿದೆ’ ಎಂದರು.

ಬಳಿಕ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿನ 43 ಫಲಾನುಭವಿಗಳಿಗೆ ಪಂಪ್‌, ಮೋಟಾರ್, ಪೈಪ್ ಮತ್ತು ಪ್ಯಾನಲ್ ಬೋರ್ಡ್ ವಿತರಿಸಿದರು.

ಪುರಸಭೆ ಸದಸ್ಯರಾದ ರೇಣುಕಾ, ಆರೋಗ್ಯ ರಾಜನ್, ಸಾಧಿಕ್ ಪಾಷಾ, ಷಫಿ, ವೆಂಕಟೇಶ್, ಗೋವಿಂದ, ಮುಖಂಡ ಸುಹೇಲ್, ಸಂಜೀವಪ್ಪ, ಶಿವಪ್ಪ, ಗುರುರಾಜ್, ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.