ADVERTISEMENT

ಪೊಲೀಸ್‌ ಸಿಬ್ಬಂದಿ ಸೇವೆ ಅನನ್ಯ: ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್‌

​ಪ್ರಜಾವಾಣಿ ವಾರ್ತೆ
Published 8 ಮೇ 2021, 15:25 IST
Last Updated 8 ಮೇ 2021, 15:25 IST
ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್‌ ಕೋಲಾರದಲ್ಲಿ ಶನಿವಾರ ಪೊಲೀಸ್‌ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿದರು.
ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್‌ ಕೋಲಾರದಲ್ಲಿ ಶನಿವಾರ ಪೊಲೀಸ್‌ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿದರು.   

ಕೋಲಾರ: ‘ಕೋವಿಡ್‌ ಹತೋಟಿಗಾಗಿ ಆರೋಗ್ಯ ಇಲಾಖೆ ಜತೆ ಕೈಜೋಡಿಸಿರುವ ಪೊಲೀಸ್‌ ಸಿಬ್ಬಂದಿಯ ಸೇವೆ ಅನನ್ಯ. ಕೊರೊನಾ ವಾರಿಯರ್ಸ್‌ಗಳಾಗಿ ಶ್ರಮಿಸುತ್ತಿರುವ ಅವರ ಸೇವೆಗೆ ಬೆಲೆ ಕಟ್ಟಲಾಗದು’ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್‌ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ಪೊಲೀಸ್‌ ಸಿಬ್ಬಂದಿಗೆ  ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಿ ಮಾತನಾಡಿ, ‘ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ಪೊಲೀಸರು ತಮ್ಮ ಪ್ರಾಣ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ ಜಾರಿಗೆ ಮತ್ತು ಜನರ ನಿಯಂತ್ರಣಕ್ಕೆ ಶಕ್ತಿಮೀರಿ ಕೆಲಸ ಮಾಡುತ್ತಿದ್ದಾರೆ’ ಎಂದು ಸ್ಮರಿಸಿದರು.

‘ಪೊಲೀಸರು ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾ ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗೂ ಕುಟುಂಬವಿದೆ. ಪೊಲೀಸರು ಸಹ ತಮ್ಮ ಮತ್ತು ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಾರ್ಯ ಒತ್ತಡದಲ್ಲಿ ಆರೋಗ್ಯ ನಿರ್ಲಕ್ಷಿಸಬಾರದು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಪೊಲೀಸರ ಕರ್ತವ್ಯ ಮಾದರಿಯಾಗಿದೆ. ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೂ ಪೊಲೀಸರು ಧೃತಿಗೆಡದೆ ಸಮಾಜದ ಒಳಿತಿಗಾಗಿ ಹಗಲುರಾತ್ರಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿವೈಎಸ್ಪಿ ಬಾಂಗ್ಲಾ, ನಗರ ಠಾಣೆ ಇನ್‌ಸ್ಪೆಕ್ಟರ್‌ ರಂಗಶಾಮಯ್ಯ, ಎಸ್ಐ ಅಣ್ಣಯ್ಯ, ಕಾನ್‌ಸ್ಟೆಬಲ್‌ ಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.