ADVERTISEMENT

ಮುಳಬಾಗಿಲು: ಕಾಲ್ನಡಿಗೆಯಲ್ಲೇ ಸಾಗಿದ ಸಮ್ಮೇಳನಾಧ್ಯಕ್ಷ

ಮುಳಬಾಗಿಲು ಸಾಹಿತ್ಯ ಸಮ್ಮೇಳನ: ಸಾರೋಟದಲ್ಲಿ ಕೂರದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 6:16 IST
Last Updated 15 ಫೆಬ್ರುವರಿ 2023, 6:16 IST
ಮುಳಬಾಗಿಲಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷ ಡಾ.ಜೆ.ಬಾಲಕೃಷ್ಣ ಮತ್ತು ಶಾಸಕ ಎಚ್.ನಾಗೇಶ್ ಕಾಲ್ನಡಿಗೆಯಲ್ಲಿ ಸಾಗಿದರು
ಮುಳಬಾಗಿಲಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷ ಡಾ.ಜೆ.ಬಾಲಕೃಷ್ಣ ಮತ್ತು ಶಾಸಕ ಎಚ್.ನಾಗೇಶ್ ಕಾಲ್ನಡಿಗೆಯಲ್ಲಿ ಸಾಗಿದರು   

ಮುಳಬಾಗಿಲು: ನಗರದಲ್ಲಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ನೇತಾಜಿ ಕ್ರೀಡಾಂಗಣದಲ್ಲಿ ಶಾಸಕ ಎಚ್.ನಾಗೇಶ್ ಮತ್ತು ಸಮ್ಮೇಳನದ ಅಧ್ಯಕ್ಷ ಡಾ.ಜೆ.ಬಾಲಕೃಷ್ಣ ಕನ್ನಡ ಧ್ವಜವನ್ನು ಅನಾವರಣ ಮಾಡುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು.

ನಗರದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಜನ ಪ್ರತಿನಿಧಿಗಳ ಜತೆಯಲ್ಲಿ ಸಮ್ಮೇಳನದ ಅಧ್ಯಕ್ಷರು ನಗರದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು. ಮೆರವಣಿಗೆಯ ಉದ್ದಕ್ಕೂ ಕೀಲು ಕುದುರೆ, ಕೊಳಲು ವಾದಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಕನ್ನಡಾಂಬೆಗೆ ಮತ್ತು ನಾಡು ನುಡಿಗೆ ಜಯಕಾರ ಕೂಗುತ್ತಾ ಉದ್ದಕ್ಕೂ ಸಾಗಿದರೆ, ಮಹಿಳೆಯರು ಕಳಶಗಳನ್ನು ಹೊತ್ತು ಮೆರವಣಿಗೆ ಸಾಗಿದರು.

ಸರಳತೆ ಮೆರೆದ ಸಮ್ಮೇಳನದ ಅಧ್ಯಕ್ಷ: ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಏರ್ಪಡಿಸಿದ್ದರೂ ಅಧ್ಯಕ್ಷರು ಸಾರೋಟದಲ್ಲಿ ಕೂರದೆ ಕಾಲ್ನಡಿಗೆಯ ಮೂಲಕ ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ಮೆರವಣಿಗೆ ಮುಗಿದ ನಂತರ ವೇದಿಕೆ ಬಳಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಗೂ ರೈತ ಗೀತೆ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.

ಪುಸ್ತಕ ಮಳಿಗೆಗಳು: 20 ವರ್ಷಗಳ ನಂತರ ಮುಳಬಾಗಿಲಿನಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದರಿಂದ ಬಹುತೇಕ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. 20ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ನೇತಾಜಿ ಕ್ರೀಡಾಂಗಣ ಮತ್ತು ಗಡಿ ಭವನದ ಮುಂದೆ ಇತ್ತು. ಪುಸ್ತಕ ಪ್ರೇಮಿಗಳು ಪುಸ್ತಕಗಳನ್ನು ಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗಡಿಭವನದಲ್ಲಿ ಕವಿಗೋಷ್ಠಿ ಹಾಗೂ ವಿಶೇಷ ಉಪನ್ಯಾಸ ನಡೆದವು. ಸಂಜೆ ಖ್ಯಾತ ಜಾನಪದ ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಾಲೂರು ನರಸಿಂಹ ಮೂರ್ತಿ ಅವರಿಂದ ನಗೆಹಬ್ಬ ಕಾರ್ಯಕ್ರಮ
ನಡೆದವು.

ಶ್ರೀಮತಿ ಉತ್ತನೂರು ರಾಜಮ್ಮ ವೇದಿಕೆಯಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಟಿ.ಎಸ್.ಚನ್ನೇಶ್ ಹಾಗೂ ಎಚ್.ಎ ಪುರುಷೋತ್ತಮ್ ಅವರು ಕೃಷಿ ಮತ್ತು ಬದಲಾಗುತ್ತಿರುವ ಮಣ್ಣಿನ ಜವಾಬ್ದಾರಿ ಹಾಗೂ ನೆಲದಾಳಕ್ಕೆ ಕುಸಿಯುತ್ತಿರುವ ನೀರಿನ ಪ್ರಜ್ಞೆ ವಿಷಯದ ಕುರಿತು ವಿಚಾರಗೋಷ್ಠಿ ನಡೆಸಿದರು. ಚಂದ್ರಶೇಖರ್ ನಂಗಲಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

ಸಮ್ಮೇಳನದ ಅಧ್ಯಕ್ಷ ಡಾ.ಜೆ.ಬಾಲಕೃಷ್ಣ ಅವರನ್ನು ಸಮ್ಮೇಳನದ ಆಯೋಜಕರು ನಗರದ ಗಂಗಮ್ಮ ಗುಡಿ ಬೀದಿಯಿಂದ ಅಂಬೇಡ್ಕರ್ ವೃತ್ತ, ಸೋಮೇಶ್ವರ ಪಾಳ್ಯ, ಬಜಾರು ರಸ್ತೆ ಹಾಗೂ ಡಿವಿಜಿ ವೃತ್ತದ ಮೂಲಕ ಮೆರವಣಿಗೆಯಲ್ಲಿ ವೇದಿಕೆಗೆ ಕರೆತಂದರು. ಶಾಸಕ ಎಚ್.ನಾಗೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇ ಗೌಡ, ನಿಕಟಪೂರ್ವ ಅಧ್ಯಕ್ಷ ಜೆ.ಜೆ.ನಾಗರಾಜ್ ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.