ADVERTISEMENT

ಸೋಂಕು ಹರಡುವಿಕೆ ಶೇ 4 ಪಟ್ಟು ಹೆಚ್ಚಳ

ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ಆರ್ಭಟ ಜೋರು

ಜೆ.ಆರ್.ಗಿರೀಶ್
Published 19 ಏಪ್ರಿಲ್ 2021, 13:07 IST
Last Updated 19 ಏಪ್ರಿಲ್ 2021, 13:07 IST
ಆರ್‌.ಸೆಲ್ವಮಣಿ
ಆರ್‌.ಸೆಲ್ವಮಣಿ   

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ಆರ್ಭಟ ಜೋರಾಗಿದ್ದು, ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ 4 ಪಟ್ಟು ಹೆಚ್ಚಳವಾಗಿದೆ.

ಮಾರ್ಚ್‌ ತಿಂಗಳಿಗೆ ಹೋಲಿಸಿದರೆ ಪ್ರಸಕ್ತ ತಿಂಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸುರಕ್ಷತಾ ಮಾರ್ಗಸೂಚಿ ಪಾಲನೆಯಲ್ಲಿ ಜನರು ತೋರುತ್ತಿರುವ ನಿರ್ಲಕ್ಷ್ಯವು ಕೋವಿಡ್‌ ಪರಿಸ್ಥಿತಿಯನ್ನು ಗಂಭೀರವಾಗಿಸುತ್ತಿದೆ.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಸೋಂಕು ಹರಡುವಿಕೆ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದರೂ ಜನರ ಅಸಡ್ಡೆಯಿಂದಾಗಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ ಜಿಲ್ಲೆಗೆ ಹೊರ ರಾಜ್ಯ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ಮಂದಿ ಬಂದು ಹೋಗುತ್ತಿದ್ದು, ಸದ್ದಿಲ್ಲದೆ ಕೊರೊನಾ ಸೋಂಕಿನ ಕಬಂಧ ಬಾಹು ವಿಸ್ತಾರವಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಮಾರ್ಚ್‌ ಮೊದಲ ವಾರದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ 0.32 ಇತ್ತು. ಮಾರ್ಚ್‌ ಎರಡನೇ ವಾರದಲ್ಲಿ ಶೇ 0.68, ಮೂರನೇ ವಾರದಲ್ಲಿ ಶೇ 0.95 ಹಾಗೂ ನಾಲ್ಕನೇ ವಾರದಲ್ಲಿ ಶೇ 1.25ರಷ್ಟಿದ್ದ ಸೋಂಕು ಹರಡುವಿಕೆ ಪ್ರಮಾಣ ಈಗ ಶೇ 4.50ಕ್ಕೆ ಜಿಗಿದಿದೆ.

ಮಾರ್ಚ್‌ನಲ್ಲಿ ಶೇ 1.8ರಷ್ಟಿದ್ದ ಸೋಂಕಿತರ ಸಾವಿನ ಪ್ರಮಾಣ ಏಪ್ರಿಲ್‌ ಆರಂಭದಲ್ಲೇ ಶೇ 1.58ಕ್ಕೆ ಏರಿಕೆಯಾಗಿದೆ. ಸೋಂಕು ಹರಡುವಿಕೆ ಮತ್ತು ಸಾವಿನ ಪ್ರಮಾಣ ಹೆಚ್ಚಳವಾಗಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ದಿನ ಕಳೆದಂತೆ ಕೋವಿಡ್‌ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗುತ್ತಿದ್ದು, ಭವಿಷ್ಯದಲ್ಲಿ ಹಾಸಿಗೆ ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ.

20 ದಿನಕ್ಕೆ 7 ಸಾವು: ಜಿಲ್ಲೆಯಲ್ಲಿ ಮಾರ್ಚ್‌ ಅಂತ್ಯಕ್ಕೆ 171 ಇದ್ದ ಸಕ್ರಿಯ ಸೋಂಕಿತರ ಸಂಖ್ಯೆ ಸೋಮವಾರದ (ಏ.19) ವೇಳೆಗೆ 701ಕ್ಕೆ ಏರಿಕೆಯಾಗಿದೆ. ಅದೇ ರೀತಿ ಸೋಂಕಿತರ ಸಾವಿನ ಸಂಖ್ಯೆ 182ರಿಂದ 189ಕ್ಕೆ ಹೆಚ್ಚಳವಾಗಿದೆ. ಕಳೆದ 20 ದಿನದಲ್ಲಿ 7 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ ಮತ್ತು 530 ಮಂದಿಗೆ ಹೊಸದಾಗಿ ಸೋಂಕು ಹರಡಿದೆ.

ಮಾರ್ಚ್‌ ಅಂತ್ಯಕ್ಕೆ ಒಟ್ಟಾರೆ 10,173 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರ ಪ್ರಮಾಣಕ್ಕೆ ಹೋಲಿಸಿದರೆ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಮಾರ್ಚ್‌ ಅಂತ್ಯಕ್ಕೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಸಂಖ್ಯೆ 7 ಇತ್ತು. ಇದೀಗ 23 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟಾರೆ ತೀವ್ರ ನಿಗಾ ಘಟಕಗಳಲ್ಲಿ 103 ಹಾಸಿಗೆ ಲಭ್ಯವಿದ್ದು, ಈ ಪೈಕಿ 23 ಬೆಡ್‌ಗಳು ಈಗಾಗಲೇ ಭರ್ತಿಯಾಗಿವೆ.

ಗುರಿ ಹೆಚ್ಚಳ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಮಾರ್ಚ್‌ನಲ್ಲಿ ದಿನಕ್ಕೆ 1,600 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸುವ ಗುರಿ ನಿಗದಿಪಡಿಸಲಾಗಿತ್ತು. ಇದೀಗ ಪ್ರತಿನಿತ್ಯ 3,600 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸುವ ಗುರಿ ನೀಡಲಾಗಿದ್ದು, ಸರಾಸರಿ 2,800 ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.