ADVERTISEMENT

ಕೋಲಾರ: ಜನರಿಗೆ ಕಣ್ಣೀರು ತರಿಸಿದ ಮಳೆರಾಯ

ಜಿಲ್ಲೆಯಲ್ಲಿ ವರುಣ ದೇವನ ಅಬ್ಬರ: ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 14:01 IST
Last Updated 9 ಜುಲೈ 2021, 14:01 IST
ಕೋಲಾರದ ಶಾಂತಿನಗರದಲ್ಲಿ ಮಳೆ ನೀರು ಕೆರೆಯಂತೆ ನಿಂತಿರುವುದು
ಕೋಲಾರದ ಶಾಂತಿನಗರದಲ್ಲಿ ಮಳೆ ನೀರು ಕೆರೆಯಂತೆ ನಿಂತಿರುವುದು   

ಕೋಲಾರ: ಜಿಲ್ಲೆಯಲ್ಲಿ ವರುಣ ದೇವನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆಯಿಂದಾಗಿ ತಗ್ಗು ಪ್ರದೇಶದ ಜನರ ಬದುಕು ನೀರು ಪಾಲಾಗಿದೆ.

ಗುರುವಾರ ತಡರಾತ್ರಿ ಆಕಾಶಕ್ಕೆ ತೂತು ಬಿದ್ದಂತೆ ನಾಲ್ಕೈದು ತಾಸು ಎಡಬಿಡದೆ ಸುರಿದ ಮಳೆರಾಯ ಜನರಿಗೆ ಕಣ್ಣೀರು ತರಿಸಿದ್ದಾನೆ. ಜಮೀನುಗಳಲ್ಲಿ ಮಳೆ ನೀರು ಕೆರೆಯಂತೆ ನಿಂತು ತೋಟಗಾರಿಕೆ ಬೆಳೆಗಳು ಕೊಳೆಯಲಾರಂಭಿಸಿವೆ. ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದಿವೆ.

ಜಿಲ್ಲಾ ಕೇಂದ್ರದ ಕಾರಂಜಿಕಟ್ಟೆ, ಶಾಂತಿನಗರ, ರಹಮತ್‌ನಗರ ಹಾಗೂ ರಾಜಾನಗರದಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ನೀರೆತ್ತುವ ಮೋಟರ್‌ನಂತಹ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ. ಬಟ್ಟೆ, ಹಾಸಿಗೆ, ಅಕ್ಕಿ, ರಾಗಿ, ಬೇಳೆ ಕಾಳು ಮೂಟೆಗಳು ನೀರಿನಲ್ಲಿ ಮುಳುಗಿವೆ.

ADVERTISEMENT

ಅಂಗಡಿ ಮುಂಗಟ್ಟುಗಳಲ್ಲಿನ ವಸ್ತುಗಳು ನೀರು ಪಾಲಾಗಿವೆ. ಮಳೆಯಿಂದ ರಾತ್ರಿಯಿಡೀ ಜಾಗರಣೆ ಮಾಡಿದ್ದ ನಿವಾಸಿಗಳಿಗೆ ಶುಕ್ರವಾರ ಮಳೆ ನೀರನ್ನು ಮನೆಯಿಂದ ಹೊರ ಹಾಕುವುದೇ ಕೆಲಸವಾಯಿತು. ಮಳೆ ನೀರಿನಿಂದ ಒದ್ದೆಯಾಗಿರುವ ದಿನಸಿ ಪದಾರ್ಥ, ಬಟ್ಟೆ ಹಾಗೂ ಹಾಸಿಗೆಗಳನ್ನು ಮನೆಯ ಮುಂದೆ ಒಣಗಲು ಇಟ್ಟಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಹಾವು ಚೇಳು ಕಾಟ: ಶಾಂತಿನಗರ ಬಳಿ ರಾಜಕಾಲುವೆ ಕಟ್ಟಿಕೊಂಡಿದ್ದು, ನೀರಿನ ಹರಿವಿಗೆ ಅಡ್ಡಿಯಾಗಿದೆ. ಹೀಗಾಗಿ ನೀರು ಕಾಲುವೆಯಲ್ಲಿ ಹಿಮ್ಮುಖವಾಗಿ ಹರಿಯುತ್ತಿದ್ದು, ನೀರಿನ ಜತೆ ಹಾವು, ಕಪ್ಪೆ, ಚೇಳುಗಳು ಅಕ್ಕಪಕ್ಕದ ಮನೆಗಳಿಗೆ ನುಗ್ಗಿವೆ. ಇದರಿಂದ ಭಯಭೀತರಾಗಿರುವ ನಿವಾಸಿಗಳು ಸ್ವಂತ ಮನೆ ತೊರೆದು ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಮಳೆಯಿಂದಾಗಿ ಚರಂಡಿ ಹಾಗೂ ಮ್ಯಾನ್‌ಹೋಲ್‌ಗಳು ಕ್ಷಣ ಮಾತ್ರದಲ್ಲಿ ಭರ್ತಿಯಾಗಿ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು. ಚರಂಡಿ, ರಾಜಕಾಲುವೆಗಳಲ್ಲಿ ಕಸ ಕಟ್ಟಿಕೊಂಡಿದ್ದರಿಂದ ನೀರಿನ ಹರಿವಿಗೆ ಅಡ್ಡಿಯಾಗಿ ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗಿದೆ. ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ರಾತ್ರಿಯಿಡೀ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು.

ರಾಡಿಯಾದ ರಸ್ತೆಗಳು: ಮಹಾ ಮಳೆಗೆ ಜಿಲ್ಲಾ ಕೇಂದ್ರದ ರಸ್ತೆಗಳ ಚಿತ್ರಣವೇ ಬದಲಾಗಿದೆ. ರಹಮತ್‌ನಗರ ಹಿಂದೂ ರುದ್ರಭೂಮಿ ಪಕ್ಕದ ರಸ್ತೆ, ಪಾಲಸಂದ್ರ ಲೇಔಟ್‌, ರಾಜಾನಗರ, ಕೇಶವನಗರ, ಶಾಂತಿನಗರದಲ್ಲಿನ ರಸ್ತೆಗಳು ಗುಂಡಿ ಬಿದ್ದಿವೆ. ಈ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ರಸ್ತೆಗಳು ರಾಡಿಯಾಗಿವೆ. ಇನ್ನು ಉದ್ಯಾನಗಳು ಕೆಸರು ಗದ್ದೆಯಂತಾಗಿವೆ.

ಮಳೆ ನೀರಿನಲ್ಲಿ ಮುಳುಗಿದ ಬೈಕ್‌, ಕಾರುಗಳು ಕೆಟ್ಟು ಗ್ಯಾರೇಜ್‌ ಸೇರಿವೆ. ಚನ್ನಯ್ಯ ಸಂತೆ ಮೈದಾನ, ಖಾಲಿ ನಿವೇಶನಗಳಲ್ಲಿ ನೀರು ಕೆರೆಯಂತೆ ನಿಂತಿದೆ. ಸಂಗೊಂಡಹಳ್ಳಿ, ಕೀಲುಕೋಟೆ ಹಾಗೂ ಖಾದ್ರಿಪುರ ರೈಲ್ವೆ ಕೆಳ ಸೇತುವೆಗಳು ಮಳೆ ನೀರಿನಿಂದ ಭರ್ತಿಯಾಗಿ ಅಕ್ಕಪಕ್ಕದ ಬಡಾವಣೆಗಳಿಗೆ ಸಂಪರ್ಕ ಕಡಿತಗೊಂಡಿತ್ತು.

ರೈತರು ಕಂಗಾಲು: ಟೊಮೆಟೊ, ಕೋಸು, ಬೀನ್ಸ್‌, ದಪ್ಪ ಮೆಣಸಿನಕಾಯಿ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ತೋಟಗಾರಿಕೆ ಬೆಳೆಗಳು ಮಳೆಗೆ ನೆಲಕಚ್ಚಿವೆ. ಕೊಯ್ಲಿಗೆ ಬಂದಿದ್ದ ಮಾವಿನ ಕಾಯಿಗಳು ಮಳೆಯ ತೀವ್ರತೆಗೆ ನೆಲಕ್ಕೆ ಉರುಳಿದ್ದು, ರೈತರ ಜಮೀನುಗಳಲ್ಲಿ ಮಳೆ ನೀರು ಕೆರೆಯಂತೆ ನಿಂತಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಧಾರಾಕಾರ ಮಳೆಯಿಂದ ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.