ADVERTISEMENT

ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ರದ್ದತಿಗೆ ಆಗ್ರಹ

ಆಹಾರದ ಹಕ್ಕು ದಮನ ಖಂಡನೀಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 1:59 IST
Last Updated 19 ಜನವರಿ 2021, 1:59 IST
ಬಂಗಾರಪೇಟೆಯಲ್ಲಿ ‘ಗೋಹತ್ಯೆ ಕಾಯಿದೆ ನಿಷೇಧ ವಿರೋಧಿ ಪ್ರಗತಿಪರ ಸಂಘಟನೆಗಳ ಒಕ್ಕೂಟ’ ಗೋಹತ್ಯೆ ನಿಷೇಧ ಕಾಯ್ದೆಯ ಸುಗ್ರೀವಾಜ್ಞೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಉಪ ತಹಶೀಲ್ದಾರ್ ಮುಕ್ತಾಂಬ ಅವರಿಗೆ ಮನವಿ ಸಲ್ಲಿಸಿತು
ಬಂಗಾರಪೇಟೆಯಲ್ಲಿ ‘ಗೋಹತ್ಯೆ ಕಾಯಿದೆ ನಿಷೇಧ ವಿರೋಧಿ ಪ್ರಗತಿಪರ ಸಂಘಟನೆಗಳ ಒಕ್ಕೂಟ’ ಗೋಹತ್ಯೆ ನಿಷೇಧ ಕಾಯ್ದೆಯ ಸುಗ್ರೀವಾಜ್ಞೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಉಪ ತಹಶೀಲ್ದಾರ್ ಮುಕ್ತಾಂಬ ಅವರಿಗೆ ಮನವಿ ಸಲ್ಲಿಸಿತು   

ಬಂಗಾರಪೇಟೆ: ‘ಗೋಹತ್ಯೆ ನಿಷೇಧ ಕಾಯ್ದೆಯ ಸುಗ್ರೀವಾಜ್ಞೆ ಹಿಂಪಡೆಯಬೇಕು’ ಎಂದು ಆಗ್ರಹಿಸಿ ‘ಗೋಹತ್ಯೆ ಕಾಯಿದೆ ನಿಷೇಧ ವಿರೋಧಿ ಪ್ರಗತಿಪರ ಸಂಘಟನೆಗಳ ಒಕ್ಕೂಟ’ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.

ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಈ ಕಾಯ್ದೆ ವಿಧಾನಪರಿಷತ್ತಿನಲ್ಲಿ ಅಂಗೀಕಾರಗೊಂಡಿಲ್ಲ. ಯಾವುದೇ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿ ವಿಧಾನಪರಿಷತ್ತಿನಲ್ಲಿ ಅಂಗೀಕಾರಗೊಳ್ಳದೆ ಮುಂದಿನ ತೀರ್ಮಾನಕ್ಕೆ ರಾಜ್ಯಪಾಲರಿಗೆ ರವಾನೆಯಾದರೆ, ವಿರೋಧ ಪಕ್ಷಗಳ ಮತ್ತು ಸಾರ್ವಜನಿಕರ ಸಮ್ಮತಿ ಇರಬೇಕು. ಇಲ್ಲವಾದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಒಕ್ಕೂಟದ ನೇತೃತ್ವ ವಹಿಸಿದ್ದ ಅಯ್ಯಪಲ್ಲಿ ನಾರಾಯಣಸ್ವಾಮಿ ಹೇಳಿದರು.

ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿ ಮಾಡಿ ಬಹುಜನರ ಆಹಾರದ ಹಕ್ಕನ್ನು ದಮನ ಮಾಡಿರುವುದು ಖಂಡನೀಯ. ಅಲ್ಲದೆ ದುಡಿಮೆಗೆ ಯೋಗ್ಯವಲ್ಲದ, ಹಾಲು ಕೊಡದ, ನಿಷ್ಪ್ರಯೋಜಕ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರದಿದ್ದರೆ ಅವುಗಳ ಸಾಕಾಣಿಕೆಗೆ ತಗುಲುವ ಖರ್ಚು ಕೊಡುವವರ್ಯಾರು ಎಂದು ಪ್ರಶ್ನಿಸಿದರು.

ADVERTISEMENT

ಈಗಾಗಲೆ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಗೋಹತ್ಯೆ ನಿಷೇಧ ಕಾಯ್ದೆ ಹೊರೆಯಾಗಲಿದೆ. ಪೂಜೆ ಮಾಡುವ ಗೋವನ್ನು ಹತ್ಯೆ ಮಾಡುವುದು ಪಾಪ ಎಂದಾದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೋಮಾಂಸ ರಪ್ತು ಮಾಡುವ ಸುಮಾರು 20 ಕಂಪನಿಗಳಿಗೆ ಪರವಾನಗಿ ಕೊಟ್ಟಿರುವುದು ಯಾರು? ಎಂದು ಪ್ರಶ್ನಿಸಿದರು.

ಆಹಾರ ಪದ್ಧತಿ ಅಳವಡಿಸಿಕೊಳ್ಳುವ ವಿವೇಚನೆ ಜನರಿಗೆ ಬಿಟ್ಟಿದ್ದು. ಮಾಂಸಾಹಾರಿಗಳಿಗೆ ಪ್ರಾಣಿ ಪಕ್ಷಿಗಳ ಮಾಂಸ ಸೇವಿಸುವುದು ಅನಿವಾರ್ಯ. ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರವಾಗುವುದು ಪ್ರಕೃತಿಯ ನಿಯಮ. ಕಾಯ್ದೆ ಜಾರಿಯಿಂದಾಗಿ ಕಸಾಯಿಖಾನೆಗಳನ್ನು ಅವಲಂಬಿಸಿರುವ ಕಾರ್ಮಿಕರು, ಚರ್ಮೋದ್ಯಮ, ಸಣ್ಣ ಅತೀ ಸಣ್ಣ ಕಾರ್ಖಾನೆಗಳು ಮತ್ತು ಗುಡಿ ಕೈಗಾರಿಕೆ ಕಾರ್ಮಿಕರು ಬೀದಿಪಾಲಾಗಲಿದ್ದಾರೆ. ಕೂಡಲೇ ಸುಗ್ರೀವಾಜ್ಞೆ ವಾಪಸ್‌ ಪಡೆಯಬೇಕು ಎಂದರು.

ಮುಖಂಡ ಹೂವರಸನಹಳ್ಳಿ ರಾಜಪ್ಪ, ಜೀವಿಕಾ ರಾಮಚಂದ್ರಪ್ಪ, ಅಸ್ಲಾಂ ಪಾಷಾ, ಸೂಲಿಕುಂಟೆ ರಮೇಶ್, ಮದಿವಣ್ಣನ್, ಸಯ್ಯದ್ ಗೌಸ್, ಸಿ.ಆರ್.ಮೂರ್ತಿ, ಪಳನಿ, ರವಿಬಾಬು, ಖಲೀಲ್ ರೆಹಮಾನ್, ಸ್ಟ್ಯಾಂಡ್ಲಿ, ಹಿರೇಕರಪನಹಳ್ಳಿ ಯಲ್ಲಪ್ಪ, ರಾಮೇಗೌಡ, ಐತಾಂಡಹಳ್ಳಿ ಮುನ್ನಾ, ರಮಣ್‌ಕುಮಾರ್, ಹುಣಸನಹಳ್ಳಿ ವೆಂಕಟೇಶ್, ಎಸ್.ರಘುನಾಥ್, ಹೂವಳ್ಳಿ ನಾಗರಾಜ್, ಎಚ್.ಕೆ.ದೇವರಾಜ್, ತಿಪ್ಪಣ್ಣ, ಟಿ.ಕೆ.ಮುರಳಿ, ಯಲ್ಲೇಶ್, ಸೀನಪ್ಪ, ಮುನಿವೆಂಕಟಪ್ಪ, ಐತಾಂಡಹಳ್ಳಿ ಅಮರೇಶ್, ಜಗದೀಶ್, ರವಿ, ಜಮೀರ್ ಅಹಮದ್, ಮಾರುತಿ ಪ್ರಸಾದ್, ಕುಮಾರ್, ಆರ್.ರವಿಚಂದ್ರ, ಬಾಬಾಜಾನ್, ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.