ADVERTISEMENT

ಆಡಳಿತದಲ್ಲಿ ಸರಳ ಕನ್ನಡ ಬಳಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:28 IST
Last Updated 17 ಜನವರಿ 2021, 1:28 IST
ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಏರ್ಪಡಿಸಿದ್ದ ಮೆರವಣಿಗೆಯನ್ನು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಉದ್ಘಾಟಿಸಿದರು.
ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಏರ್ಪಡಿಸಿದ್ದ ಮೆರವಣಿಗೆಯನ್ನು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಉದ್ಘಾಟಿಸಿದರು.   

ಶ್ರೀನಿವಾಸಪುರ: ಆಡಳಿತದಲ್ಲಿ ಸರಳ ಕನ್ನಡ ಬಳಕೆಗೆ ಬರಬೇಕು. ಅಗತ್ಯ ಇರುವ ಕಡೆ ಮಡಿವಂತಿಕೆ ಬಿಟ್ಟು ಇಂಗ್ಲೀಷ್ ಪದ ಬಳಕೆ ಮಾಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ತಾಲ್ಲೂಕಿನ ರೋಣೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾಷೆ ಭಾವನೆ ವ್ಯಕ್ತಪಡಿಸುವ ಸಾಧನ. ಇದು ಮನುಷ್ಯ ಪಡೆದಿರುವ ವಿಶೇಷ ಶಕ್ತಿ ಎಂದು ಹೇಳಿದರು.

ಮಾತೃ ಭಾಷೆ ಹೃದಯದ ಭಾಷೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಅದನ್ನು ಮರೆಯಲು ಸಾಧ್ಯವಿಲ್ಲ. ಆಡುವ ಭಾಷೆ ಸಾಮಾನ್ಯ ವ್ಯಕ್ತಿಗೆ ತಲುಪಬೇಕು. ಅಕ್ಷರ ಬಳಕೆ ಇಲ್ಲದ ಕಾಲದಲ್ಲೂ ಸರಳವಾದ ಜನಪದ ಸಾಹಿತ್ಯ ಜನರ ಮನಸ್ಸಿಗೆ ಮುದ ನೀಡಿತ್ತು. ಸರಳತೆಯಲ್ಲಿ ಸೌಂದರ್ಯ ಅಡಗಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ADVERTISEMENT

ತಾಲ್ಲೂಕಿನಲ್ಲಿ ಹಿಂದಿನ ಪರಿಸ್ಥಿತಿ ಇಲ್ಲ. ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇಲ್ಲಿನ ಜನರ ಮಾತೃಭಾಷೆಯಾಗಿದ್ದ ತೆಲುಗು ಭಾಷೆಯ ಪ್ರಭಾವ ಕ್ರಮೇಣ ಕಡಿಮೆಯಾಗುತ್ತಿದೆ. ಈ ಭಾಗದಲ್ಲಿ ಕನ್ನಡ ಇನ್ನಷ್ಟು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.

ಭಾಷೆಗೆ ಭವ್ಯತೆ ತಂದುಕೊಡುವವರು ಸಾಹಿತಿಗಳು. ಸಾಹಿತ್ಯ ಕ್ಷೇತ್ರದಲ್ಲಿ ಯೋಗ್ಯರಿಗೆ ಸ್ಥಾನಮಾನ ಸಿಗಬೇಕು. ಸ್ಥಾನಮಾನ ಪಡೆಯಲು ರಾಜಕೀಯ ಮುಖಂಡರ ಮನೆ ಬಾಗಿಲು ತಟ್ಟುವ ಹಾಗೂ ಲಾಬಿ ಮಾಡುವ ಸಾಹಿತಿಗಳನ್ನು ದೂರವಿಡಬೇಕು. ವಿಶ್ವವಿದ್ಯಾಲಯದ ಕುಲಪತಿ, ರಾಜ್ಯೋತ್ಸವ ಪ್ರಶಸ್ತಿಗಾಗಿ ರಾಜಕಾರಣಿಗಳ ಶಿಫಾರಸ್ಸು ಕೇಳುವ ಕಾಲ ಬಂದಿದೆ. ಇದು ದುರದೃಷ್ಟಕರ ಎಂದು ಹೇಳಿದರು.

ಸಾಹಿತಿ ಡಾ. ಜಯಮಂಗಲ ಚಂದ್ರಶೇಖರ್ ಮಾತನಾಡಿ, ಜೀವಪರವಾದ ಸಮಾಜಮುಖಿ ಸಾಹಿತ್ಯಕ್ಕೆ ಅಳಿವಿಲ್ಲ. ಯಾವುದೇ ಭಾಷೆಯನ್ನು ಜನರ ಮೇಲೆ ಬಲವಂತವಾಗಿ ಹೇರುವ ಮನೋಭಾವ ಸರಿಯಲ್ಲ. ಕನ್ನಡ ಭಾಷೆಗೆ ಅನ್ಯ ಭಾಷಿಕರ ಕೊಡುಗೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಾಗಾನಂದ ಕೆಂಪರಾಜ್ ಮಾತನಾಡಿ, ಕನ್ನಡ ಕಟ್ಟುವ ಸಂದರ್ಭದಲ್ಲಿ ವಿಷ ಬಿತ್ತುವ ಜನರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎನ್.ಕುಬೇರಗೌಡ ಆಶಯ ಭಾಷಣ ಮಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಎಂ.ಶ್ರೀರಾಮರೆಡ್ಡಿ ಕನ್ನಡ ಧ್ವಜ ಹಸ್ತಾಂತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ ಮಾತನಾಡಿದರು.

ಉಪನ್ಯಾಸ: ಸಮ್ಮೇಳನಾಧ್ಯಕ್ಷರ ಬದುಕು ಸಾಧನೆ ಕುರಿತು ನಿವೃತ್ತ ಮುಖ್ಯ ಶಿಕ್ಷಕ ಎ.ವೆಂಕಟರೆಡ್ಡಿ, ಸರ್ವಜ್ಞನ ವಚನಗಳನ್ನು ಕುರಿತು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ನ ನಿವೃತ್ತ ಮುಖ್ಯ ವ್ಯವಸ್ಥಾಪಕ ವೆಂ.ರವಿಕುಮಾರ್ ಉಪನ್ಯಾಸ ನೀಡಿದರು.

ಕವಿಗೋಷ್ಠಿ: ಕವಿ ಎಸ್.ಅನೀಫ್‌ಸಾಬ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಸಾಹಿತಿ ಪಾತಮುತ್ತಕಪಲ್ಲಿ ಎಂ.ಚಲಪತಿಗೌಡ ಆಶಯ ಭಾಷಣ ಮಾಡಿದರು. ಕವಿಗಳಾದ ಎನ್.ಶಾರದಮ್ಮ, ಜಿ.ವಿ.ಪದ್ಮಾವತಮ್ಮ, ಮಮತಾ ರಾಣಿ, ಶ್ರೀಧರ್, ಎನ್.ಗೋಪಾಲನ್, ಕೆ.ಸಿ.ಗೋಪಾಲಕೃಷ್ಣ, ಶ್ರೀರಾಮೇಗೌಡ, ಶಂಕರೇಗೌಡ, ವಿ.ರಾಧಾಕೃಷ್ಣ, ಚಲಪತಿ, ರವೀಂದ್ರಯ್ಯ ವಿ.ಕುಲಕರ್ಣಿ ಕಾವ್ಯ ವಾಚನ ಮಾಡಿದರು.

ಧ್ವಜಾರೋಹಣ: ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಾಗಾನಂದ ಕೆಂಪರಾಜ್, ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಎನ್.ಕುಬೇರಗೌಡ ಕ್ರಮವಾಗಿ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ ಧ್ವಜಾರೋಹಣ ಮಾಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಮೆರವಣಿಗೆಗೆ ಸಾಲನೆ ನೀಡಿದರು. ಜಿಲ್ಲಾ ಕಸಾಪ ಖಜಾಂಚಿ ರತ್ನಪ್ಪ ಮೇಲಾಗಣಿ, ಡಾ. ವೈ.ವಿ.ವೆಂಕಟಾಚಲ, ಉಪ ತಹಶೀಲ್ದಾರ್ ಮುನಿವೆಂಕಟಪ್ಪ, ಕೆ.ಕೆ.ಮಂಜು, ಸುಬ್ರಮಣಿ, ಎಂ.ನಾಗರಾಜ್ ಇದ್ದರು.

ವೆಂಕಟೇಶ್ವರ ನರಸಿಂಗ್ ಹೋಂ ವತಿಯಿಂದ ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.