ಶ್ರೀನಿವಾಸಪುರ: ತಾಲ್ಲೂಕಿನ ಹುಣಸೆ ಮರಗಳಲ್ಲಿ ಕಂಗೊಳಿಸುತ್ತಿರುವ ಬಣ್ಣ ಬಣ್ಣದ ಚಿಗುರು ಹಾಗೂ ಹೂ, ಚಿಗುರು ಪ್ರಿಯರ ಬಾಯಲ್ಲಿ ನೀರೂರಿಸುತ್ತಿವೆ. ಕೆಲವರು ನೇರವಾಗಿ ಪಟ್ಟಣದ ಹೊರವಲಯದಲ್ಲಿನ ಮರಗಳಿಂದ ಚಿಗುರು ಹಾಗೂ ಹೂವನ್ನು ಕಿತ್ತು ತಂದು ಸಾಂಬಾರು ಹಾಗೂ ಚಟ್ನಿ ಮಾಡಿ ಸವಿಯುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಜನರು ಹುಣಸೆ ತೋಪುಗಳ ನಡುವೆ ಜೀವಿಸುತ್ತಿದ್ದರೂ, ಹುಣಸೆ ಚಿಗುರನ್ನು ಸಾಂಬಾರಿಗೆ ಬಳಸುವುದು ಅಪರೂಪ. ಆದರೆ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಹುಣಸೆ ಚಿಗುರಿಗೆ ಒಳ್ಳೆ ಬೇಡಿಕೆ ಇದೆ. ಆದ್ದರಿಂದಲೆ ಕೆಲವರು ಹುಣಸೆ ಚಿಗುರು ಹಾಗೂ ಮೊಗ್ಗನ್ನು ಬಿಡಿಸಿ ಬಿದಿರಿನ ಬುಟ್ಟಿಯಲ್ಲಿ ತುಂಬಿಕೊಂಡು ಹೋಗಿ ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ.
ಕೆಲವರು ಹುಣಸೆ ಚಿಗುರಿನ ಕಾಲ ಬಂದರೆ, ಸಾಂಬಾರು ತಯಾರಿಕೆಯಲ್ಲಿ ಟೊಮೆಟೊ ಅಥವಾ ಹುಣಸೆ ಹಣ್ಣಿಗೆ ಬದಲಾಗಿ ಹುಣಸೆ ಚಿಗುರನ್ನು ಬಳಸುತ್ತಾರೆ. ಸ್ವಲ್ಪ ಹುಳಿ, ಸ್ವಲ್ಪ ಒಗರು ನಾಲಿಗೆಗೆ ವಿಶಿಷ್ಟವಾದ ರುಚಿ ನೀಡುತ್ತದೆ. ಕೆಲವರು ರಸ್ತೆ ಬದಿಯ ಹುಣಸೆ ಮರಗಳಲ್ಲಿ ಉಚಿತವಾಗಿ ಚಿಗುರು ಸಂಗ್ರಹಿಸಿ ಮಾರುವುದರ ಮೂಲಕ ನಾಲ್ಕು ಕಾಸು ಸಂಪಾದಿಸುತ್ತಾರೆ.
ಇಷ್ಟು ಮಾತ್ರವಲ್ಲದೆನೈಸರ್ಗಿಕವಾಗಿ ಬೆಳೆಯುವ ಕಾಸಿ, ಗೋಂಗೂರ, ಮಂಗರವಳ್ಳಿ ಮುಂತಾದವುಗಳನ್ನು ಸಂಗ್ರಹಿಸಿ ತಂದು ಮಾರುವುದುಂಟು. ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಔಷಧದ ಸಂಪರ್ಕವಿಲ್ಲದೆ ಬೆಳೆದನೈಸರ್ಗಿಕ ಸೊಪ್ಪು ಹಾಗೂ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.