ADVERTISEMENT

ನೀರಿನ ಸಮಸ್ಯೆ: ಪರಿಹಾರಕ್ಕೆ ಕ್ರಮ

ಕಸ ತೆರವು ಕಾರ್ಯಾಚರಣೆ ವೇಳೆ ನಗರಸಭೆ ಆಯುಕ್ತ ಶ್ರೀಕಾಂತ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 13:43 IST
Last Updated 19 ಮಾರ್ಚ್ 2020, 13:43 IST
ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್‌ ನೇತೃತ್ವದಲ್ಲಿ ರಹಮತ್‌ನಗರ ಹಿಂದೂ ರುದ್ರಭೂಮಿ ರಸ್ತೆಯಲ್ಲಿ ಗುರುವಾರ ಕಸ ತೆರವು ಕಾರ್ಯಾಚರಣೆ ನಡೆಸಲಾಯಿತು.
ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್‌ ನೇತೃತ್ವದಲ್ಲಿ ರಹಮತ್‌ನಗರ ಹಿಂದೂ ರುದ್ರಭೂಮಿ ರಸ್ತೆಯಲ್ಲಿ ಗುರುವಾರ ಕಸ ತೆರವು ಕಾರ್ಯಾಚರಣೆ ನಡೆಸಲಾಯಿತು.   

ಕೋಲಾರ: ‘ಬೇಸಿಗೆ ಆರಂಭವಾಗಿದ್ದು, ನಗರದ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಭರವಸೆ ನೀಡಿದರು.

ನಗರಸಭೆ ವತಿಯಿಂದ ಇಲ್ಲಿನ ರಹಮತ್‌ನಗರ ಹಿಂದೂ ರುದ್ರಭೂಮಿ ರಸ್ತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಸ ತೆರವು ಕಾರ್ಯಾಚರಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸುತ್ತೇವೆ. ನೀರಿನ ಸೌಕರ್ಯಕ್ಕಾಗಿ ಅನುದಾನ ಮೀಸಲಿಡಲಾಗಿದೆ’ ಎಂದರು.

‘ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು, ಸದ್ಯ 9 ಟ್ಯಾಂಕರ್‌ಗಳಿಂದ ನೀರು ಪೂರೈಸುತ್ತಿದ್ದೇವೆ. ಇದರ ಜತೆಗೆ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಪ್ರತಿ ವಾರ್ಡ್‌ಗೆ ಒಂದು ಟ್ಯಾಂಕರ್ ಮೀಸಲಿರಿಸಲಾಗಿದ್ದು, ದಿನಕ್ಕೆ 5 ಲೋಡ್‌ ನೀರು ಸರಬರಾಜು ಮಾಡಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ನಗರದ ಹೊರವಲಯದ ಮಡೇರಹಳ್ಳಿ ಕೆರೆಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿದು ಬಂದಿದ್ದು, ಕೆರೆಯಂಗಳದ ಕೆಲ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ನೀರು ಲಭ್ಯವಾದರೆ ಹೊಸದಾಗಿ ಪಂಪ್‌ ಮೋಟರ್‌ ಅಳವಡಿಸುತ್ತೇವೆ’ ಎಂದು ಮಾಹಿತಿ ನೀಡಿದರು.

‘ಹೊಸದಾಗಿ ಕೊಳವೆ ಬಾವಿ ಕೊರೆಸುವ ಮುನ್ನ ನೀರಿನ ಲಭ್ಯತೆ ಖಾತರಿಪಡಿಸಿಕೊಳ್ಳುತ್ತೇವೆ. ನೀರು ಸಿಗುವ ಬಗ್ಗೆ ಅನುಮಾನವಿದ್ದರೆ ಕೊಳವೆ ಬಾವಿ ಕೊರೆಸುವುದಿಲ್ಲ. ನೀರಿನ ಸಮಸ್ಯೆ ಕುರಿತು ಆಯಾ ವಾರ್ಡ್‌ಗಳ ವಾಲ್‌ಮನ್‌ಗಳಿಂದ ಪ್ರತಿನಿತ್ಯ ಮಾಹಿತಿ ಪಡೆಯಲಾಗುತ್ತಿದೆ’ ಎಂದು ವಿವರಿಸಿದರು.

ದೂರು ಬಂದಿವೆ: ‘ಟ್ಯಾಂಕರ್ ನೀರು ಸೋರಿಕೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರು ಬಂದಿವೆ. ನೀರು ಪೂರೈಕೆಯಲ್ಲಿನ ಅಕ್ರಮ ತಡೆಗಾಗಿ ಟ್ಯಾಂಕರ್‌ಗಳಿಗೆ ಜಿಪಿಎಸ್ ಉಪಕರಣ ಅಳವಡಿಸುತ್ತೇವೆ. ನೀರು ಸರಬರಾಜಿನಲ್ಲಿ ಲೋಪ ಕಂಡುಬಂದಲ್ಲಿ ಟ್ಯಾಂಕರ್‌ ಗುತ್ತಿಗೆದಾರರ ಟೆಂಡರ್‌ ಕರಾರು ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ನಗರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶಕ್ಕಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗೋಡೆ ಬರಹ, ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಸ್ವಚ್ಛ ಭಾರತ್ ಯೋಜನೆಯಡಿ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಸಹ ಆಯೋಜಿಸುತ್ತೇವೆ. ನಗರಸಭೆಯಿಂದ ಸ್ವಚ್ಛ ಶನಿವಾರ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತೇವೆ’ ಎಂದರು.

ಹರಾಜು ಮುಂದೂಡಿಕೆ: ‘ನಗರಸಭೆಯ 228 ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಕೊರೊನಾ ಸೋಂಕಿನ ಭೀತಿ ಕಾರಣಕ್ಕೆ ಏ.1ಕ್ಕೆ ಹರಾಜು ಮುಂದೂಡಲಾಗಿದೆ. ಆಸಕ್ತರು ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ಪ್ರಕಟಣೆ ಹೊರಡಿಸಲಾಗಿದೆ. ಈಗಾಗಲೇ ಅಂಗಡಿಯಲ್ಲಿ ಬಾಡಿಗೆಗೆ ಇರುವವರು ಮುಂದುವರಿಯಲು ಮುಂಗಡವಾಗಿ ಶೇ 5ರಷ್ಟು ಹಣ ಠೇವಣಿ ಮಾಡಬೇಕು’ ಎಂದು ಸೂಚಿಸಿದರು.

‘ವಾಣಿಜ್ಯ ಮಳಿಗೆ ಹರಾಜು ಸಂಬಂಧ ಕೆಲ ವ್ಯಕ್ತಿಗಳು ನ್ಯಾಯಾಲಯದ ಮೋರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆದಿದೆ. ನ್ಯಾಯಾಲಯ ಸಹ ಮಳಿಗೆಗಳನ್ನು ಹರಾಜು ಮಾಡುವಂತೆ ಆದೇಶಿಸಿದ್ದು, ನ್ಯಾಯಾಲಯ ಕೇಳಿರುವ ದಾಖಲೆಪತ್ರ ಸಲ್ಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಸುರಕ್ಷತಾ ಕ್ರಮ: ‘ಪಾದಚಾರಿ ಮಾರ್ಗದಲ್ಲಿನ ಅಂಗಡಿಯವರು ಹಣ್ಣು ಮತ್ತು ಆಹಾರ ಪದಾರ್ಥಗಳನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡಬೇಕು. ತೆರೆದ ಜಾಗದಲ್ಲಿ ಮಾಂಸ ಮಾಡುವ ಅಂಗಡಿಗಳನ್ನು ಮುಚ್ಚಿಸುತ್ತೇವೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅಂಗಡಿ ಮಾಲೀಕರು ಸುರಕ್ಷತಾ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ನಗರದ ಬೆಂಗಳೂರು ರಸ್ತೆ, ಇಟಿಸಿಎಂ ವೃತ್ತ, ಹೊಸ ಬಸ್‌ ನಿಲ್ದಾಣದ ಸಮೀಪ ಬೀದಿ ಬದಿ ವ್ಯಾಪಾರಸ್ಥರ ಮಳಿಗೆಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಆ ವ್ಯಾಪಾರಸ್ಥರು ಪುನಃ ಅದೇ ಜಾಗದಲ್ಲಿ ಅನಧಿಕೃತವಾಗಿ ಅಂಗಡಿ ಇಟ್ಟಿರುವುದು ಗಮನಕ್ಕೆ ಬಂದಿದೆ. ಸದ್ಯದಲ್ಲೇ ಆ ಅಂಗಡಿಗಳನ್ನು ತೆರವು ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.