ADVERTISEMENT

ಕೋಲಾರ: ಕಲಾವಿದ ಮುರಳಿಗೆ ಅಕಾಡೆಮಿ ಗೌರವ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 4:43 IST
Last Updated 25 ಜುಲೈ 2025, 4:43 IST
ಮುದುಕನ ಮದುವೆ ನಾಟಕದ ಪಾತ್ರವೊಂದರಲ್ಲಿ ಕಲಾವಿದ ಕೆ.ಮುರಳಿ
ಮುದುಕನ ಮದುವೆ ನಾಟಕದ ಪಾತ್ರವೊಂದರಲ್ಲಿ ಕಲಾವಿದ ಕೆ.ಮುರಳಿ   

ಕೋಲಾರ: ಮೂರು ದಶಕಗಳಿಂದ ವೃತ್ತಿ ರಂಗಭೂಮಿಯಲ್ಲಿ ತೊಡಗಿಕೊಂಡು ಊರೂರು ಅಲೆದಾಡಿ ಕಲೆ ಪ್ರಚುರಪಡಿಸಿ, ಮೆರುಗು ತಂದುಕೊಟ್ಟ ಜಿಲ್ಲೆಯ ಗಡಿಭಾಗ ಗ್ರಾಮದ ಸಾಧಕ ಕೆ.ಮುರಳಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಗೌರವ ಲಭಿಸಿದೆ.

ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಗುರುವಾರ 2025–26ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದಾರೆ. ವಾರ್ಷಿಕ ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ನಟರಾಜ ವಿಗ್ರಹ ಹೊಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುವ ಸಾಧ್ಯತೆ ಇದೆ.

ಬಂಗಾರಪೇಟೆ ತಾಲ್ಲೂಕಿನ ಬ್ಯಾಡಬಲೆ ಗ್ರಾಮದ ಮುರಳಿ ‘ಶ್ರೀವಿಜಯಕೃಷ್ಣ ಕಲಾ ಸಂಘ’ದ ಬ್ಯಾನರ್‌ನಡಿ ಕಲಾವಿದರ ತಂಡ ಕಟ್ಟಿಕೊಂಡು ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಟಕ ಪ್ರದರ್ಶನದಲ್ಲಿ ತೊಡಗಿದ್ದಾರೆ. 35 ವರ್ಷಗಳಿಂದ ವೃತ್ತಿ ರಂಗಭೂಮಿ, ಕಂಪನಿ ನಾಟಕಗಳಲ್ಲಿ ಕಲಾವಿದರಾಗಿ ಹೆಸರು ಮಾಡಿದ್ದಾರೆ.

ADVERTISEMENT

‘ನನಗೀಗ 58 ಬರ್ಷ. ಪ್ರತಿ ವರ್ಷ ಅಕಾಡೆಮಿ ಪ್ರಶಸ್ತಿ ಚರ್ಚೆ ಬಂದಾಗ ಈ ವರ್ಷ ನನಗೆ ಕೊಡಬೇಕೆಂದು ಹಲವರು ಹೇಳುತ್ತಿದ್ದರು. ಆದರೆ, ಸಿಗುತ್ತಿರಲಿಲ್ಲ. ನನ್ನ ಪಾಡಿಗೆ ಕಲೆಯಲ್ಲಿ ತೊಡಗಿಸಿಕೊಂಡು ಮುಂದುವರಿಯುತ್ತಿದ್ದೆ. ಈಗ ಪ್ರಶಸ್ತಿ ಒಲಿದಿದ್ದು. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮತ್ತಷ್ಟು ಪ್ರೇರಣೆ ಸಿಕ್ಕಿದೆ. ಕುಟುಂಬದ ಪ್ರೋತ್ಸಾಹ ಇದಕ್ಕೆ ಕಾರಣ’ ಎಂದು ಮುರಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೃತ್ತಿ ರಂಗಭೂಮಿ, ಕಂಪನಿ ನಾಟಕ ಉಳಿಸಲು ಯುವಕಲಾವಿದರಿಂದ ಪಾತ್ರ ಮಾಡಿಸುತ್ತಿದ್ದೇನೆ. ನಾನೂ ಊರೂರು ಸುತ್ತುತ್ತಿದ್ದೇನೆ’ ಎಂದರು.

ಬಿ.ಕಾಂ ಪದವೀಧರರಾಗಿರುವ ಅವರು ಧಾರಾವಾಹಿಗಳಲ್ಲೂ ನಟಿಸಿದ್ದು, ಟೆಲಿಫಿಲ್ಮ್‌ ಕೂಡ ನಿರ್ಮಿಸಿದ್ದಾರೆ. ನಿರ್ದೇಶನ, ನಟನೆ, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಕಂಪನಿ ನಾಟಕಗಳಾದ ಮುದುಕನ ಮದುವೆ, ಚನ್ನಪ್ಪ ಚನ್ನೇಗೌಡ, ಕೈಲಾಗದ ಗಂಡ, ಗೌಡ ಮೆಚ್ಚಿದ ಹುಡುಗಿ, ಗುಂಡನ ಹಾವಳಿ ಸೇರಿದಂತೆ 30 ನಾಟಕ ನಿರ್ದೇಶಿಸಿ ನಟಿಸಿದ್ದಾರೆ. ಈ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು.

ನಾನು ಯಾರ ಬಳಿಯಿಂದಲೂ ಶಿಫಾರಸು ಮಾಡಿರಲಿಲ್ಲ. ಅರ್ಹತೆ ಇದ್ದರೆ ಬರುತ್ತೆ ಎಂದು ಸುಮ್ಮನಾನಿಗಿದ್ದೆ. ತುಸು ತಡವಾಗಿ ಪ್ರಶಸ್ತಿ ಒಲಿದಿದ್ದು ಕೆಲಸಕ್ಕೆ ಪ್ರತಿಫಲ ಸಿಕ್ಕಿದೆ
ಕೆ.ಮುರಳಿ ವೃತ್ತಿ ರಂಗಭೂಮಿ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.