ADVERTISEMENT

ಕಲ್ಲು ತೂರಿದವರು ದೇಶ ದ್ರೋಹಿಗಳು: ಸಂಸದ ಮುನಿಸ್ವಾಮಿ

ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೊಲಗಲಿ: ಸಂಸದ ಮುನಿಸ್ವಾಮಿ ಗುಡುಗು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 15:39 IST
Last Updated 9 ಏಪ್ರಿಲ್ 2022, 15:39 IST

ಕೋಲಾರ: ‘ಮುಳಬಾಗಿಲಿನಲ್ಲಿ ಶ್ರೀರಾಮ ಶೋಭಾ ಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಿರುವ ಕಿಡಿಗೇಡಿಗಳು ದೇಶದ್ರೋಹಿಗಳು. ಅಂತಹವರು ಭಾರತ ದೇಶ ಬಿಟ್ಟು ಪಾಕಿಸ್ತಾನಕ್ಕೆ ತೊಲಗಲಿ’ ಎಂದು ಸಂಸದ ಎಸ್.ಮುನಿಸ್ವಾಮಿ ಗುಡುಗಿದರು.

ಜಿಲ್ಲೆಯ ಮುಳಬಾಗಿಲಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಶ್ರೀರಾಮನ ಶೋಭಾ ಯಾತ್ರೆ ವೈಭವದಿಂದ ನಡೆಯುತ್ತಿದ್ದಾಗ ದುಷ್ಕರ್ಮಿಗಳು ದುರುದ್ದೇಶದಿಂದ ಜಹಂಗೀರ್ ಮೊಹಲ್ಲಾ ಬಳಿ ಕಲ್ಲು ತೂರಾಟ ನಡೆಸಿದ್ದಾರೆ. ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಕಲ್ಲು ಎಸೆದು ಕೋಮುಗಲಭೆ ಸೃಷ್ಟಿಸಿ ಶಾಂತಿ ಕದಡಲು ಯತ್ನಿಸಿದ್ದಾರೆ’ ಎಂದು ಆರೋಪಿಸಿದರು.

‘ಕಲ್ಲು ತೂರಾಟದ ದುಷ್ಕೃತ್ಯ ಎಸಗಿರುವ ಇಂತಹ ಕಿಡಿಗೇಡಿಗಳು ಶೇ 2ರಿಂದ 3ರಷ್ಟಿದ್ದು. ಅವರು ಕೂಡಲೇ ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋಗಲಿ. ಈ ದೇಶದ್ರೋಹಿಗಳಿಗೆ ಭಾರತದಲ್ಲಿ ಇರುವ ನೈತಿಕತೆಯಿಲ್ಲ. ಕೇಂದ್ರ ವಲಯ ಐಜಿಪಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ. ಪೊಲೀಸರು ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾರೆ’ ಎಂದರು.

ADVERTISEMENT

‘ಈ ಹಿಂದೆ ನಾನು ಶಿವಾಜಿ ಜಯಂತಿ ಸಂದರ್ಭದಲ್ಲಿ ಗ್ಯಾರೇಜ್ ಕುರಿತು ನೀಡಿದ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಮುಳಬಾಗಿಲು ತಾಲ್ಲೂಕು ಹಿಂದಿನಿಂದಲೂ ಕೋಮು ಸಾಮರಸ್ಯಕ್ಕೆ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಆದರೆ, ಮುಸ್ಲಿಂ ಸಮುದಾಯದಲ್ಲಿರುವ ಶೇ 2ರಿಂದ 3ರಷ್ಟು ಕಿಡಿಗೇಡಿಗಳ ಕುಕೃತ್ಯದಿಂದ ತಾಲ್ಲೂಕಿನಲ್ಲಿ ಅಶಾಂತಿ ಸೃಷ್ಟಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.