ADVERTISEMENT

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ

ಸಂವಿಧಾನ ಓದು ಅಭಿಯಾನದ ಜಿಲ್ಲಾ ಸಂಯೋಜಕ ನಟರಾಜ್ ಕಳವಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 12:51 IST
Last Updated 4 ಅಕ್ಟೋಬರ್ 2019, 12:51 IST
ಕೋಲಾರದಲ್ಲಿ ಶುಕ್ರವಾರ ನಡೆದ ಸಂವಿಧಾನ ಓದು ಅಭಿಯಾನದಲ್ಲಿ ಗಣ್ಯರು ವಿದ್ಯಾರ್ಥಿಗಳಿಗೆ ಸಂವಿಧಾನ ರಕ್ಷಣೆಯ ಪ್ರತಿಜ್ಞಾವಿಧಿ ಭೋದಿಸಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಸಂವಿಧಾನ ಓದು ಅಭಿಯಾನದಲ್ಲಿ ಗಣ್ಯರು ವಿದ್ಯಾರ್ಥಿಗಳಿಗೆ ಸಂವಿಧಾನ ರಕ್ಷಣೆಯ ಪ್ರತಿಜ್ಞಾವಿಧಿ ಭೋದಿಸಿದರು.   

ಕೋಲಾರ: ‘ಸಂವಿಧಾನದ ಆಶಯ ಈಡೇರದ ಕಾರಣ ಜನ ಸರಿ ದಿಕ್ಕಿಗೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಸಂವಿಧಾನ ಓದು ಅಭಿಯಾನದ ಜಿಲ್ಲಾ ಸಂಯೋಜಕ ಟಿ.ಕೆ.ನಟರಾಜ್ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನಡೆದ ಸಂವಿಧಾನ ಓದು ಅಭಿಯಾನದಲ್ಲಿ ಮಾತನಾಡಿ, ‘ಪ್ರತಿ ಧರ್ಮಕ್ಕೂ ಧಾರ್ಮಿಕ ಗ್ರಂಥವಿದೆ. ಅದೇ ರೀತಿ ಭಾರತೀಯರಿಗೆ ಸಂವಿಧಾನ ಮಹಾಗ್ರಂಥ’ ಎಂದರು.

‘ದೇಶದ ಸಮಸ್ಯೆಗಳಿಗೆ ಸಂವಿಧಾನ ಕಾರಣವಲ್ಲ. ಬದಲಿಗೆ ಸಂವಿಧಾನ ಅನುಷ್ಠಾನಗೊಳಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಎಡಬಿಡಂಗಿತನ ಕಾರಣ. ಇವೆಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲಿ ಹೊಸ ತಲೆಮಾರು ಅಗತ್ಯವಿದ್ದು, ಅಂತಹ ತಲೆಮಾರನ್ನು ಕಟ್ಟುವ ಕೆಲಸ ಸಂವಿಧಾನ ಓದು ಅಭಿಯಾನದ ಮೂಲಕ ಆಗಬೇಕು’ ಎಂದು ಆಶಿಸಿದರು.

ADVERTISEMENT

‘ಸಂವಿಧಾನದ ವಿಚಾರಗಳನ್ನು ಸರ್ಕಾರ ಜಾರಿ ಮಾಡದಿರುವುದರಿಂದ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ಸೃಷ್ಟಿಯಾಗಿದೆ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಪ್ರಾಧಾನ್ಯತೆ ಸಿಗುತ್ತಿಲ್ಲ. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸೀಮಿತವಾಗದೆ ಸಂವಿಧಾನ ಅರ್ಥ ಮಾಡಿಕೊಂಡು ಜನಸಮೂಹಕ್ಕೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.

‘ಸಂವಿಧಾನ ಆಚರಣೆಗೆ ತರುವವರು ಒಳ್ಳೆಯ ವಿಚಾರವಂತರಾಗಿರಬೇಕು. ಆಗ ಮಾತ್ರ ದೇಶ ಕಟ್ಟಲು ಸಾಧ್ಯವಾಗುತ್ತದೆ. ಮತದಾರರು ಪ್ರಜ್ಞಾಪೂರ್ವಕವಾಗಿ ಮತದಾನದ ಹಕ್ಕು ಚಲಾಯಿಸಬೇಕು. ಚುನಾವಣೆಗಳಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನವ ಭಾರತ ನಿರ್ಮಾಣ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ಎದುರಾಗಿದೆ. ಕೆಲ ಚುನಾಯಿತ ಜನಪ್ರತಿನಿಧಿಗಳೇ ಸಂವಿಧಾನ ಬದಲಾವಣೆ ಕುರಿತು ಮಾತನಾಡುತ್ತಾರೆ. ಇನ್ನು ಕೆಲವರು ಸಂವಿಧಾನವನ್ನೇ ಸುಟ್ಟು ಹಾಕುತ್ತಾರೆ. ಈ ನಾಯಕರು ಸಂವಿಧಾನ ಬದಲಿಸುವುದಾದರೆ ಅದಕ್ಕೆ ಪರ್ಯಾಯ ಏನು ಎಂಬುದನ್ನು ಹೇಳಲಿ’ ಎಂದು ಸವಾಲು ಹಾಕಿದರು.

ಮಹಾನ್‌ ಗ್ರಂಥ: ‘ದೇಶದ ಸಂವಿಧಾನ ಒಂದು ಕಥೆಯಲ್ಲ. ಬದಲಿಗೆ ಮಹಾನ್‌ ಗ್ರಂಥ. ಆದರೆ, ಅನೇಕರು ಸಂವಿಧಾನ ಓದುವುದೇ ಇಲ್ಲ. ಹೀಗಾಗಿ ಸಂವಿಧಾನವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಮಾರ್ಗವನ್ನು ಸಂವಿಧಾನ ಓದು ಪುಸ್ತಕದಲ್ಲಿ ವಿವರಿಸಲಾಗಿದೆ. ಅಭಿಯಾನದ ಮೂಲಕ ಪುಸ್ತಕದ 80 ಸಾವಿರ ಪ್ರತಿಗಳು ವಿದ್ಯಾರ್ಥಿಗಳ ಕೈಸೇರಿವೆ’ ಎಂದು ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್‌ ವಿವರಿಸಿದರು.

ಸಮುದಾಯ ಸಂಘಟನೆ ಅಧ್ಯಕ್ಷ ಅಚ್ಚುತ, ಕಾಲೇಜಿನ ಉಪನ್ಯಾಸಕರಾದ ಕಾವ್ಯಶ್ರೀ, ನಾಗಶೇಷಮ್ಮ, ಪ್ರಸನ್ನಕುಮಾರಿ, ಕೆ.ಎನ್.ಪರಮೇಶ್, ಸುಬ್ಬರಾಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.