ADVERTISEMENT

ಸೋಮವಾರ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಆರಂಭ

ಡಿ–ಕೋಡಿಂಗ್ ಕಾರ್ಯ ಪೂರ್ಣ: ಸುರಕ್ಷತಾ ಮಾರ್ಗಸೂಚಿಗೆ ಒತ್ತು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 13:38 IST
Last Updated 12 ಜುಲೈ 2020, 13:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ಜಿಲ್ಲೆಯಲ್ಲಿ ಸೋಮವಾರದಿಂದ (ಜುಲೈ 13) ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯು ಸಕಲ ಸಿದ್ಧತೆ ಮಾಡಿದೆ.

ಕೋವಿಡ್‌–19 ಆತಂಕದ ನಡುವೆಯೂ ಸುರಕ್ಷಿತವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿರುವ ಶಿಕ್ಷಣ ಇಲಾಖೆಯು ಇದೀಗ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸುರಕ್ಷತಾ ಕ್ರಮ ಕೈಗೊಂಡಿದೆ.

ಈಗಾಗಲೇ ಜಂಟಿ ಮುಖ್ಯ ಮೌಲ್ಯಮಾಪಕರ ನೇತೃತ್ವದಲ್ಲಿ ಉಪ ಮುಖ್ಯ ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಬಂಡಲ್‌ ಡಿ–ಕೋಡಿಂಗ್ ಕಾರ್ಯ ಪೂರ್ಣಗೊಳಿಸಿದ್ದು, ಸಹಾಯಕ ಮೌಲ್ಯಮಾಪಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಶಿಕ್ಷಕರು ಬೆಳಿಗ್ಗೆ 9 ಗಂಟೆಗೆ ಮೌಲ್ಯಮಾಪನ ಕೇಂದ್ರಗಳಿಗೆ ಹಾಜರಾಗುತ್ತಾರೆ. ಕೇಂದ್ರದ ಪ್ರವೇಶ ಭಾಗದಲ್ಲೇ ಶಿಕ್ಷಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಗುತ್ತದೆ ಮತ್ತು ಸ್ಯಾನಿಟೈಸರ್‌ ನೀಡಿ ಕೈಗಳನ್ನು ಸ್ವಚ್ಛ ಮಾಡಿಸಲಾಗುತ್ತದೆ. ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಮೌಲ್ಯಮಾಪನ ಕೇಂದ್ರಕ್ಕೆ ಬರಬೇಕು ಮತ್ತು ಕೇಂದ್ರದ ಕೊಠಡಿಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಕುಡಿಯುವ ನೀರು ಮತ್ತು ಊಟವನ್ನು ಮನೆಯಿಂದಲೇ ತರಬೇಕೆಂದು ಸೂಚಿಸಲಾಗಿದೆ.

ಕೇಂದ್ರಗಳ ವಿವರ: ಜಿಲ್ಲಾ ಕೇಂದ್ರದ ನವ ನಳಂದ ಶಾಲೆಯಲ್ಲಿ ಕನ್ನಡ, ಮಹಿಳಾ ಸಮಾಜದಲ್ಲಿ ಇಂಗ್ಲಿಷ್‌, ಸೈನಿಕ್ ಪಬ್ಲಿಕ್ ಶಾಲೆಯಲ್ಲಿ ಹಿಂದಿ, ಸುಗುಣಾ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಗಣಿತ, ಸೆಂಟ್‍ ಆನ್ಸ್‌ ಶಾಲೆಯಲ್ಲಿ ವಿಜ್ಞಾನ, ಚಿನ್ಮಯ ವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ವಿಷಯದ ಮೌಲ್ಯಮಾಪನ ನಡೆಯುತ್ತದೆ.

ಜಿಲ್ಲೆಯ ಘನತೆಗೆ ಧಕ್ಕೆಯಾಗದಂತೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಮೌಲ್ಯಮಾಪನದಲ್ಲಿ ತಪ್ಪು ಮಾಡಿ ದಂಡ ತೆರುವ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಯ ಬದುಕಿನಲ್ಲಿ ಪ್ರತಿ ಅಂಕವೂ ಮುಖ್ಯ ಎಂಬುದನ್ನು ಅರಿತು ಸೂಕ್ತವಾಗಿ ಗಮನಿಸಿ ಅಂಕ ನೀಡಿ, ಯಾವುದೇ ವಿದ್ಯಾರ್ಥಿಗೆ ಮೌಲ್ಯಮಾಪನದಲ್ಲಿ ಅನ್ಯಾಯವಾಗಬಾರದು ಎಂದು ಅಧಿಕಾರಿಗಳು ಮೌಲ್ಯಮಾಪಕರಿಗೆ ಸಲಹೆ ನೀಡಿದ್ದಾರೆ.

‘ಮೌಲ್ಯಮಾಪನ ಕೇಂದ್ರದಲ್ಲಿ ಪ್ರತಿಯೊಬ್ಬ ಉಪ ಮೌಲ್ಯಮಾಪಕರ ನೇತೃತ್ವದಲ್ಲಿ 6 ಮಂದಿ ಸಹಾಯಕ ಮೌಲ್ಯಮಾಪಕರು ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್‌ ತಿಳಿಸಿದ್ದಾರೆ.

‘ಸಹಾಯಕ ಮೌಲ್ಯಮಾಪಕರು ಕೋವಿಡ್ ಮಾರ್ಗಸೂಚಿ ಪಾಲಿಸಿ ಕೇಂದ್ರಕ್ಕೆ ಬಂದು ತಮಗೆ ಸೂಚಿಸಿರುವ ಕೊಠಡಿಗಳಲ್ಲಿ ಕೂರಬೇಕು. ನಂತರ ಅವರ ಮೊಬೈಲ್‌ಗೆ ಒಟಿಪಿ ಸಂಖ್ಯೆ ಕಳುಹಿಸಿದ ಬಳಿಕ ಕಂಪ್ಯೂಟರ್ ಕೊಠಡಿಗೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.