ಬೇತಮಂಗಲ ಸಮೀಪದ ತೊಂಗಲಕುಪ್ಪ ಗ್ರಾಮದಲ್ಲಿ ಪ್ರಗತಿ ಪರ ರೈತ ಸುಭಾಷ್ ಅವರ ತೋಟದಲ್ಲಿ ಕಂಡುಬಂದ ಸೊಗಸಾದ ಟೊಮೆಟೊ ಫಸಲು
ಬೇತಮಂಗಲ: ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಅಲ್ಪ ಸ್ವಲ್ಪ ನೀರನ್ನು ಬಳಸಿಕೊಂಡು ಬೆಳೆದಿರುವಂತಹ ಟೊಮೆಟೊ ಬೆಳೆಯ ಬೆಲೆ ನೆಲ ಬಿಟ್ಟು ಮೇಲೇಳದ ಕಾರಣ ಟೊಮೆಟೊ ರೈತ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಬೇಸಿಗೆಯಲ್ಲಿ ಟೊಮೆಟೊ ಬೆಳೆಗೆ ನೀರಿನ ಸಮಸ್ಯೆ ಒಂದೆಡೆಯಾದರೆ, ಮತ್ತೊಂದು ಕಡೆ ಗಿಡಗಳಿಗೆ ಔಷಧಿ ಸಿಂಪಡಣೆ, ರಸಗೊಬ್ಬರ ಹಾಗೂ ಕೂಲಿ ಕಾರ್ಮಿಕರ ವೆಚ್ಚಗಳೂ ಸೇರಿ ಅರ್ಧದಷ್ಟು ಬಂಡವಾಳವೂ ಕೈಸೇರದ ಸಂಕಷ್ಟ ರೈತರನ್ನು ಹೈರಾಣು ಮಾಡಿದೆ.
₹50ರಿಂದ ₹100ಕ್ಕೆ 15 ಕೇಜಿಯ ಒಂದು ಬಾಕ್ಸ್ ಮಾರಾಟವಾಗುತ್ತಿದೆ. ಸುಮಾರು ಮೂರು ತಿಂಗಳ ಕಾಲ ಪೋಷಣೆ ಮಾಡಿ ಬೆಳೆದ ಟೊಮೆಟೊವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕಾರ್ಮಿಕರ ಕೂಲಿ ಹಣವು ಸಹ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಫ್ತು ಕಡಿಮೆ: ಕರ್ನಾಟಕದಲ್ಲಿ ಮುಖ್ಯವಾಗಿ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೊ ಬೆಳೆಗೆ ನೆರೆಹೊರೆಯ ರಾಜ್ಯ ಹಾಗೂ ರಾಷ್ಟ್ರಗಳಿಂದ ವ್ಯಾಪಾರಸ್ಥರು ಬಂದು ಟೊಮೆಟೊ ಕೊಂಡುಕೊಳ್ಳುವುದು ನಡೆದುಕೊಂಡು ಬಂದಿದೆ.
ಈ ವರ್ಷ ಹೊರ ರಾಜ್ಯಗಳ ರಫ್ತು ಸಹ ಕಡಿಮೆಯಾಗಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮಳೆಯಿಂದ ಹಾನಿ: ಬೇಸಿಗೆಯ ಬೇಗೆಯನ್ನು ಹೇಗೊ ನೀಗಿ, ಅಷ್ಟಿಷ್ಟು ನೀರಿನ ವ್ಯವಸ್ಥೆ ಮಾಡಿಕೊಂಡು ತಕ್ಕಮಟ್ಟಿಗೆ ಚೆನ್ನಾಗಿಯೇ ಟೊಮೆಟೊ ಬೆಳೆ ತೆಗೆಯಲಾಗಿತ್ತು. ಆದರೆ, ಇತ್ತೀಚಿಗೆ ಸುರಿಯುತ್ತಿರುವ ಗಾಳಿ ಮಳೆಯಿಂದ ಟೊಮೆಟೊ ಬೆಳೆ ಮತ್ತೊಂದು ರೀತಿಯ ಹೊಡೆತಕ್ಕೆ ಸಿಲುಕಿದಂತಾಗಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರತಿ ವರ್ಷ ಈ ಸಮಯದಲ್ಲಿ ಟೊಮೆಟೊ ಬೆಳೆಗೆ ಉತ್ತಮ ಬೆಲೆ ಸಿಗುತ್ತಿತ್ತು. ಈ ವರ್ಷ ಬೆಲೆ ಕುಸಿತದಿಂದ ಅಪಾರ ನಷ್ಟ ಸಂಭವಿಸಿದೆ. ಬಂಡವಾಳ ಸಹ ಕೈ ಸೇರದೆ ಸಂಕಷ್ಟದಲ್ಲಿದ್ದೇವೆಸುಭಾಷ್, ತೊಂಗಲಕುಪ್ಪ ರೈತ
<p class="quote">ಈ ವರ್ಷವೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಹೊರ ರಾಜ್ಯಗಳಿಗೆ ರಪ್ತು ಸಹ ಕಡಿಮೆಯಾಗಿದೆ. ಈ ಕಾರಣಗಳಿಂದ ಟೊಮೆಟೊ ಬೆಲೆ ಕುಸಿದು ಹೋಗಿದೆ</p> <p>ಜಯರಾಮ್ ರೆಡ್ಡಿ,<span class="Designate"> ವ್ಯಾಪಾರಿ</span></p>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.