ADVERTISEMENT

ಕೋಲಾರ: ಪ್ರವಾಸೋದ್ಯಮ ಕುಂಠಿತ

ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಶಾಸಕ ಶ್ರೀನಿವಾಸಗೌಡ ಬೇಸರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 13:58 IST
Last Updated 27 ಸೆಪ್ಟೆಂಬರ್ 2019, 13:58 IST
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕೋಲಾರದಲ್ಲಿ ಶುಕ್ರವಾರ ನಡೆದ ಜಾಥಾದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕೋಲಾರದಲ್ಲಿ ಶುಕ್ರವಾರ ನಡೆದ ಜಾಥಾದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.   

ಕೋಲಾರ: ‘ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳಿವೆ. ಆದರೆ, ಸಮರ್ಪಕ ನಿರ್ವಹಣೆಯಿಲ್ಲದ ಕಾರಣ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಇದರಿಂದ ಪ್ರವಾಸೋದ್ಯಮ ಕುಂಠಿತಗೊಂಡಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಮಾತನಾಡಿ, ‘ಅಧಿಕಾರಿಗಳು ಸರ್ಕಾರದ ಅನುದಾನ ಬಳಸಿಕೊಂಡು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು’ ಎಂದರು.

‘ಕೋಲಾರದ ಅಂತರಗಂಗೆ ಬೆಟ್ಟವು ಪ್ರಮುಖ ಪ್ರವಾಸಿ ತಾಣವಾಗಿದ್ದು, ಇಲ್ಲಿ ಬಸವಣ್ಣ ಮೂರ್ತಿ ಬಾಯಿಯಿಂದ ಸದಾ ನೀರು ಹೊರಹೊಮ್ಮುವುದು ವಿಸ್ಮಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಉತ್ತಮ ತಾಣವಾಗಿದೆ. ಪ್ರವಾಸಿಗರನ್ನು ಜಿಲ್ಲೆಯತ್ತ ಆಕರ್ಷಿಸುವ ಕೆಲಸ ಆಗಬೇಕು. ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ನೂತನ ಯೋಜನೆ: ‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ನೂತನ ಯೋಜನೆ ಸಿದ್ಧಪಡಿಸಿದ್ದು, ಯೋಜನೆ ಜಾರಿಗೆ ಸದ್ಯದಲ್ಲೇ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

‘ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ವಸ್ತು ಸಂಗ್ರಹಾಲಯವಾಗಿ ಮಾಡಲು, ಕೋಲಾರಮ್ಮ ಕೆರೆಯ ಸುತ್ತ ನಡಿಗೆ ಪಥ ನಿರ್ಮಿಸಿ ಬೋಟಿಂಗ್‌ಗೆ ಅವಕಾಶ ಕಲ್ಪಿಸಲು, ತೋಟಗಾರಿಕೆ ಕಾಲೇಜಿನಲ್ಲಿ ಹಲಸು ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಗೊಂಡಿದೆ. 5 ಕಿ.ಮೀ ವ್ಯಾಪ್ತಿಯಲ್ಲಿ ಹೆಚ್ಚಿನ ತಾಣಗಳನ್ನು ಅಭಿವೃದ್ಧಿಪಡಿಸಿದರೆ ಬೇರೆ ಭಾಗಗಳಿಂದ ಬರುವ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಅನುಕೂಲವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ರೇಷ್ಮೆ, ಹಾಲು ಹಾಗೂ ಚಿನ್ನಕ್ಕೆ ಹೆಸರಾಗಿರುವ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ಈಗಾಗಲೇ ಮಾರ್ಚ್ ತಿಂಗಳಲ್ಲಿ ಮಾವು ಪ್ರವಾಸ ನಡೆಸಲಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.

ಉದ್ಯೋಗಾವಕಾಶ ಸೃಷ್ಟಿ: ‘ದೇಶಕ್ಕೆ ವರ್ಷದಲ್ಲಿ 1.70 ಕೋಟಿ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇದರಿಂದ ಸಾಕಷ್ಟು ಅನುಕೂಲವಾಗಿದೆ. ಪ್ರವಾಸೋದ್ಯಮದಿಂದ ಶೇ 8.1ರಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಿವೆ. ಪ್ರವಾಸದಿಂದಾಗಿ ಕಲೆ ಮತ್ತು ಸಂಸ್ಕೃತಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ’ ಎಂದರು.

‘ರಾಜ್ಯದಲ್ಲಿ 319 ಪ್ರಮುಖ ಪ್ರವಾಸಿ ತಾಣಗಳಿದ್ದು, ಈ ಪೈಕಿ ಕೋಲಾರ ಜಿಲ್ಲೆಯ 9 ತಾಣಗಳು ಸೇರಿವೆ. ಪ್ರವಾಸೋದ್ಯಮ ಇಲಾಖೆಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಹಿಂದಿನ 2 ವರ್ಷದಲ್ಲಿ 111 ಪ್ರವಾಸಿ ಟ್ಯಾಕ್ಸಿ ನೀಡಲಾಗಿದೆ. ಶಾಲಾ ಮಕ್ಕಳಿಗಾಗಿ ಕರ್ನಾಟಕ ದರ್ಶನ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ 22 ಮಂದಿ ಪ್ರವಾಸಿ ಮಿತ್ರರನ್ನು ನೇಮಿಸಲಾಗಿದೆ. ಅವರು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಜತೆಗೆ ಸುರಕ್ಷತೆಗೆ ಕ್ರಮ ವಹಿಸುತ್ತಾರೆ. ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ. ಅ.2ರಂದು ಶ್ರಮದಾನದ ಮೂಲಕ ಪ್ಲಾಸ್ಟಿಕ್ ತೆರವು ಮಾಡಬೇಕು’ ಎಂದು ಮನವಿ ಮಾಡಿದರು.

ಕೈಜೋಡಿಸಿ: ‘ಪ್ರವಾಸದಿಂದಾಗಿ ಸಣ್ಣ ಸಣ್ಣ ಉದ್ಯಮ ಬೆಳೆಸಿದಂತಾಗುತ್ತದೆ. ಹೊರಗಿನ ಒಂದು ಪ್ರವಾಸಿ ಕುಟುಂಬದಿಂದಾಗಿ ಸ್ಥಳೀಯವಾಗಿ ಅನೇಕ ಕುಟುಂಬಗಳಿಗೆ ಉಪಕಾರವಾಗುತ್ತದೆ. ಹೀಗಾಗಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಕೈಜೋಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಕೋರಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರ ಬಳಿಯಿಂದ ವಿದ್ಯಾರ್ಥಿಗಳು ಜಾಥಾ ನಡೆಸಿದರು. ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಶ್ರೀಶೈಲಾ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮಹೇಶ್, ಉಪನ್ಯಾಸಕರಾದ ನಾರಾಯಣರೆಡ್ಡಿ, ಗೋಪಿಕೃಷ್ಣನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.